ಸೆ.24 ರಂದು ಸಮಾಲೋಚನಾ ಸಭೆ

Update: 2017-09-21 16:37 GMT

ಬೆಂಗಳೂರು, ಸೆ. 21: ಪೂನಾ ಒಪ್ಪಂದವಾಗಿ 85 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ದಲಿತ ಸಮುದಾಯದ ರಾಜಕೀಯ ಪ್ರಾತಿನಿಧ್ಯ ಕುರಿತು ರಾಷ್ಟ್ರಮಟ್ಟದ ಸಂವಾದ ಆಯೋಜಿಸುವ ಸಲುವಾಗಿ ಚರ್ಚಿಸಲು ಸೆ.24 ರಂದು ನಗರದ ಜ್ಞಾನಭಾರತಿ ಆವರಣದಲ್ಲಿ ಸಮಾಲೋಚನಾ ಸಭೆ ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮತಾ ಸೈನಿಕ ದಳದ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ, ದೇಶದ ಎಸ್ಸಿ, ಎಸ್ಟಿ ಸಮುದಾಯದ ಜನರಿಗೆ ರಾಜಕೀಯ ಹಕ್ಕು ಕುರಿತು ಪೂನಾದ ಜೈಲಿನಲ್ಲಿ ನಡೆದ ಗಂಭೀರ ಮಾತುಕತೆ ತಾರ್ಕಿಕ ರೂಪ ಪಡೆದು, ದಲಿತ ಸಮುದಾಯದ ಸಮರ್ಥ ರಾಜಕೀಯ ಪ್ರಾತಿನಿಧ್ಯದ ಬದಲಿಗೆ ರಾಜಕೀಯ ಮೀಸಲಾತಿ ಎಂಬ ಮುಲಾಜಿನ ಪ್ರಾತಿನಿಧ್ಯದ ಒಪ್ಪಂದಕ್ಕೆ ಸಹಿ ಮಾಡಿದರು ಎಂದರು.

ಪೂನಾ ಒಪ್ಪಂದವಾಗಿ 85 ವರ್ಷಗಳು ಕಳೆದಿದೆ. ಸಾವಿರಾರು ದಲಿತ ಸಮುದಾಯದ ಜನರು ಈ ರಾಜಕೀಯ ಸೌಲಭ್ಯವನ್ನು ಬಳಸಿಕೊಂಡಿದ್ದಾರೆ. ಆದರೆ, ದಲಿತ ಸಮುದಾಯದ ವಿಮೋಚನೆಗಾಗಿ ಎಷ್ಟು ಜನರು ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದ್ದಾರೆ. ಇಂದಿನ ದಲಿತ ಪ್ರಾತಿನಿಧ್ಯ ಸಮರ್ಥ ಅನುಷ್ಠಾನಕ್ಕಾಗಿ ಎಂತಹ ರಾಜಕೀಯ ನಿರ್ಣಯ ಕೈಗೊಳ್ಳಬೇಕು ಎಂಬ ಚರ್ಚೆ ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಷ್ಟ್ರಮಟ್ಟದ ಸಂವಾದ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಅವರು ಹೇಳಿದರು.

ಸಮಾಲೋಚನಾ ಸಭೆಯಲ್ಲಿ ನಾಡಿನ ಬುದ್ಧಿಜೀವಿಗಳು, ದಲಿತ ಸಂಘಟನೆಗಳ ಮುಖಂಡರು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನಾಯಕರು, ವಕೀಲರು, ನ್ಯಾಯಾಧೀಶರು, ಚಿಂತಕರು, ಬರಹಗಾರರು, ಪತ್ರಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News