‘ಗೌರಿ ಲಂಕೇಶ್ ಹತ್ಯೆ’ ಪ್ರಜಾಪ್ರಭುತ್ವದ ಕಗ್ಗೊಲೆ: ಡಾ.ಮನ್ಝೂರ್ ಆಲಂ

Update: 2017-09-21 17:15 GMT

ಬೆಂಗಳೂರು, ಸೆ.21: ವಿಚಾರವಾದಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಕೇವಲ ಒಬ್ಬ ವ್ಯಕ್ತಿಯ ಕೊಲೆಯೆಂದು ಪರಿಗಣಿಸಲಾಗದು, ಏಕೆಂದರೆ ಅವರು ಯಾವುದೇ ತರಹದ ಭೇದ ಭಾವವಿಲ್ಲದೆ ಅನ್ಯಾಯ ಮತ್ತು ದೌರ್ಜನ್ಯದ ವಿರುದ್ಧ ಹೋರಾಟ ನಡೆಸಿದ್ದರು ಎಂದು ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಮನ್ಝೂರ್‌ ಆಲಂ ತಿಳಿಸಿದ್ದಾರೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ರಾಜ್ಯ ಘಟಕದ ವತಿಯಿಂದ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಆಯೋಜಿಸಲಾಗಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಗೌರಿ ಲಂಕೇಶ್ ತಮ್ಮ ಬರಹಗಳನ್ನು, ಪತ್ರಿಕೆಯನ್ನು ಹಾಗೂ ತಾವು ಸಕ್ರಿಯವಾಗಿ ಸಂಬಂಧ ಹೊಂದಿದ್ದ ಹತ್ತಾರು ಸಂಘಟನೆಗಳನ್ನು ಅನ್ಯಾಯ ಹಾಗೂ ದೌರ್ಜನ್ಯಕ್ಕೆ ಒಳಗಾದವರ ಪರವಾಗಿ ನಿರಂತರವಾಗಿ ಬಳಸಿಕೊಳ್ಳುತ್ತಿದ್ದರು ಎಂದು ಹೇಳಿದರು.

ಆದುದರಿಂದಲೆ, ಗೌರಿಲಂಕೇಶ್ ಹತ್ಯೆಯನ್ನು ಇಡೀ ಪ್ರಜಾಪ್ರಭುತ್ವ ಮತ್ತು ನ್ಯಾಯದ ಹೋರಾಟದ ಹತ್ಯೆ ಎಂದು ಪರಿಗಣಿಸಬೇಕಾಗುತ್ತದೆ. ದೇಶದಲ್ಲಿ ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ಘಟನೆಗಳು ನಮ್ಮ ಸಂವಿಧಾನದ ಸ್ಫೂರ್ತಿಯ ವಿರುದ್ಧವಾಗಿದೆ ಎಂದು ತಿಳಿಸಿದರು.

ನಮ್ಮ ಸಂವಿಧಾನದ ಮುನ್ನುಡಿಯಲ್ಲಿ ‘ನಾವು ಭಾರತದ ಜನರು, ನಮ್ಮ ದೇಶದಲ್ಲಿ ನ್ಯಾಯ, ಸಮಾನತೆ, ಸಹೋದರತೆಯ ಭಾರತ’ವನ್ನು ಕಟ್ಟುವುದಾಗಿ ಪಣತೊಟ್ಟಿದ್ದೇವೆ. ಆದರೆ, ಈ ಕೆಲವು ದಿನಗಳಿಂದ ಸಂವಿಧಾನದ ಈ ಮೂಲಭೂತ ತತ್ವಗಳನ್ನು ಹಿಮ್ಮೆಟ್ಟಿಸಿ ದೇಶದ ಘನತೆಯನ್ನು ಮಣ್ಣುಪಾಲು ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸಂವಿಧಾನದ ಆಶಯಗಳನ್ನು ಕಾಪಾಡಲು ಹೋರಾಡಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದು ಮನ್ಝೂರ್ ಆಲಂ ಕರೆ ನೀಡಿದರು.

ಸಭೆಯಲ್ಲಿ ಮುಖಂಡರಾದ ಎಸ್.ವೈ.ಗುರುಶಾಂತ್, ಕೆ.ಪ್ರಕಾಶ್, ವಿ.ನಾಗರಾಜ್, ವಕೀಲ ಕಾಶಿನಾಥ್, ಲೇಖಕ ಮಂಗ್ಳೂರು ವಿಜಯ, ಸೈಯ್ಯದ್ ಶಫೀಉಲ್ಲಾ, ಸುಲೈಮಾನ್‌ ಖಾನ್, ಸೈಯ್ಯದ್ ಶಾಹಿದ್ ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News