ಎನ್‌ಡಿಟಿವಿ ಮಾಲಕತ್ವದಲ್ಲಿ ಬದಲಾವಣೆಯಾಗಿಲ್ಲ: ಸುದ್ದಿ ವಾಹಿನಿಯಿಂದ ಸ್ಪಷ್ಟನೆ

Update: 2017-09-22 10:32 GMT

ಮುಂಬೈ, ಸೆ. 22: ತನ್ನ ಪ್ರವರ್ತಕರು ಕಂಪೆನಿಯಲ್ಲಿದ್ದ ತಮ್ಮ ಪಾಲುದಾರಿಕೆಯನ್ನು ಮಾರಿದ್ದಾರೆಂಬ ವರದಿಗಳನ್ನು ಎನ್‌ಡಿಟಿವಿ ಸಂಸ್ಥೆ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಗೆ ನೀಡಿದ ನೋಟಿಫಿಕೇಶನ್ ಒಂದರಲ್ಲಿ ಅಲ್ಲಗಳೆದಿದೆ. ಸ್ಪೈಸ್ ಜೆಟ್ ನ ಮಾಲಕ ಅಜಯ್ ಸಿಂಗ್ ಅವರು ಎನ್‌ಡಿಟಿವಿಯಲ್ಲಿ ಪ್ರಮುಖ ಪಾಲುದಾರಿಕೆ ಪಡೆದಿದ್ದಾರೆಂಬ ಮಾಧ್ಯಮ ವರದಿಯೊಂದರ ಹಿನ್ನೆಲೆಯಲ್ಲಿ ಸಂಸ್ಥೆಯ ಶೇರು ದರಗಳಲ್ಲಿ ಶುಕ್ರವಾರ ಏರಿಕೆಯಾಗಿತ್ತು. ಆದರೆ ಎನ್‌ಡಿಟಿವಿ ಮಾಲಕತ್ವದಲ್ಲಿ ಬದಲಾವಣೆಯಾಗಿದೆ ಎಂಬ ವರದಿಯನ್ನು ಸಂಸ್ಥೆ ಸಂಪೂರ್ಣವಾಗಿ ನಿರಾಕರಿಸಿದೆಯೆನ್ನಲಾಗಿದೆ. ಇತ್ತ ಸ್ಪೈಸ್ ಜೆಟ್ ಕೂಡ ಈ ವರದಿ ಗಳನ್ನು ಸಂಪೂರ್ಣ ಸುಳ್ಳು ಮತ್ತು ಆಧಾರ ರಹಿತ ಎಂದು ಹೇಳಿದೆ.

ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಗೆ ಎನ್‌ಡಿಟಿವಿ ಸಂಸ್ಥೆ ಸಲ್ಲಿಸಿರುವ ಸೂಚನೆಯೊಂದರಲ್ಲಿ ತಿಳಿಸಲಾದಂತೆ ‘‘ಲಿಸ್ಟಿಂಗ್ ನಿಯಮಾವಳಿಗಳಂತೆ ತನ್ನ ಜವಾಬ್ದಾರಿಯನ್ನು ಕಂಪೆನಿ ಅರಿತಿದೆ. ಅಂತೆಯೇ ಏನಾದರೂ ಮಾಹಿತಿಯನ್ನು ನೀಡಬೇಕೆಂಬ ನಿಯಮವಿದ್ದರೆ ಅದನ್ನು ಸೂಕ್ತ ಸಮಯದಲ್ಲಿ ನೀಡಲಾ ಗುವುದು,’’ ಎಂದು ಹೇಳಲಾಗಿದೆ.

ಎನ್‌ಡಿಟಿವಿ ಸ್ಥಾಪಕರಾದ ಪ್ರಣಯ್ ರಾಯ್, ರಾಧಿಕಾ ರಾಯ್ ಮತ್ತು ಪ್ರವರ್ತಕ ಸಂಸ್ಥೆ ಆರ್‌ಆರ್‌ಪಿಆರ್ ಹೋಲ್ಡಿಂಗ್ ಶೇರು ವ್ಯವಹಾರವೊಂದನ್ನು ಗೌಪ್ಯವಾಗಿರಿಸಿದ ಆರೋಪದ ಮೇಲೆ ಪ್ರಸಕ್ತ ಸಿಬಿಐ ತನಿಖೆ ಎದುರಿಸುತ್ತಿದೆ. ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಅವರು ಕಂಪೆನಿಯಲ್ಲಿ ಪ್ರಮುಖ ಪಾಲುದಾರಿಕೆ (ಶೇ 61.45) ಹೊಂದಿದ್ದು ಅದು ಮುಂದುವರಿಯಲಿದೆ ಎಂದು ಈ ಹಿಂದೆ ಕೂಡ ಎನ್‌ಡಿಟಿವಿ ಸ್ಪಷ್ಟ ಪಡಿಸಿದೆ ಎಂದೂ ಸುದ್ದಿ ಸಂಸ್ಥೆಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News