ಸೆ.26ರಿಂದ ರಾಷ್ಟ್ರೀಯ ವಿಚಾರ ಸಂಕಿರಣ: ಜಿಲ್ಲಾಧಿಕಾರಿ ಡಿ.ರಂದೀಪ್

Update: 2017-09-22 15:21 GMT

ಮೈಸೂರು,ಸೆ.22: ದಸರಾ ಮಹೋತ್ಸವದ ಅಂಗವಾಗಿ ಸೆ.26 ಮತ್ತು 27ರಂದು ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ದಸರಾ ವಿಶೇಷಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದ್ದಾರೆ.

ತಮ್ಮ ಕಚೇರಿಯಲ್ಲಿ  ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.26ರಂದು ಬೆಳಗ್ಗೆ 10ಕ್ಕೆ ಸೆನೆಟ್ ಭವನದಲ್ಲಿ 'ಸಂವಿಧಾನ-ಪ್ರಜಾಸತ್ತೆ-ಸಮಾನತೆ' ಕರ್ನಾಟಕ ಒಂದು ಆದರ್ಶ ಮಾದರಿ ಆಶಯದಡಿ ದಸರಾ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸುಬ್ರತೋ ಕಮಲ್ ಮುಖರ್ಜಿ ಉದ್ಘಾಟಿಸಲಿದ್ದು, ನವದೆಹಲಿಯ ಜವಹರಲಾಲ್ ನೆಹರು ವಿವಿಯ ಪ್ರೊ.ಗೋಪಾಲ್ ಗುರು ಮಾತನಾಡಲಿದ್ದಾರೆ. ಮೈಸೂರು ವಿವಿ ಪ್ರಭಾರ ಕುಲಪತಿ ಪ್ರೊ.ದಯಾನಂದ ಮಾನೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.

'ಸಾಮಾಜಿಕ ನ್ಯಾಯ, ಸಮಾನಜತೆಯ ಸಮಾಜ ಮತ್ತು ಒಳಗೊಳ್ಳುವಿಕೆ' ಕುರಿತಾಗಿ ನಾಲ್ವಡಿ ಒಡೆಯರ್, ದೇವರಾಜ ಅರಸು ಅವರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರವರೆಗೆ ವಿಚಾರ ಕುರಿತು ಸರ್ವ ಸದಸ್ಯರ ಗೋಷ್ಠಿಯನ್ನು ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್ ಮಾತನಾಡಲಿದ್ದು, ಮೈಸೂರು ವಿವಿ ವಿಶ್ರಾಂತ ನಿರ್ದೇಶಕ ಪ್ರೊ.ವಿ.ಕೆ.ನಟರಾಜ್ ಅಧ್ಯಕ್ಷತೆ ವಹಿಲಿದ್ದಾರೆ ಎಂದರು.

ಸಮಾನತೆ, ಸ್ವಾತಂತ್ರ್ಯ ಹಾಗೂ ಅಭಿವೃದ್ಧಿ: 'ಕರ್ನಾಟಕದ ಪಾತ್ರ ಮತ್ತು ಕೊಡುಗೆ ವಿಚಾರ' ಕುರಿತು 1ನೆ ಗೋಷ್ಠಿಯಲ್ಲಿ ರಾಜ್ಯ ಹಣಕಾಸು ಆಯೋಗದ ಸಮಾಲೋಚಕ ಪ್ರೊ.ಬಿ.ಆರ್.ಚಂದ್ರಶೇಖರ್, ಚೆನ್ನೈ ಹೋರಾಟಗಾರ್ತಿ ದೀಪ್ತಿ ಸುಕುಮಾರ್ ಮಾತನಾಡಲಿದ್ದು, ಹಂಪಿ ಕನ್ನಡ ವಿವಿ ಕುಲಪತಿ ಪ್ರೊ.ಮಲ್ಲಿಕಾ ಘಂಟಿ ಅಧ್ಯಕ್ಷತೆ ವಹಿಸುವರು ಎಂದು ಮಾಹಿತಿ ನೀಡಿದರು.

ಆಡಳಿತ, ನೀತಿ, ನಿರೂಪಣೆ, ಮಾದ್ಯಮ ಮತ್ತು ಆಡಳಿತ: 'ಕರ್ನಾಟಕ ಒಂದು ಮಾದರಿ' ವಿಷಯ ಕುರಿತು 2ನೆ ಗೋಷ್ಠಿಯಲ್ಲಿ ಚಿಂತಕ ಡಾ.ಬಂಜೆಗೆರೆ ಜಯಪ್ರಕಾಶ್, ಅಂಕಣಕಾರ ಡಿ.ಉಮಾಪತಿ ಮಾತನಾಡಿಲಿದ್ದು, ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರ ನಾಯಕ್ ಅಧ್ಯಕ್ಷತೆ ವಹಿಸುವರು ಎಂದು ವಿವರಿಸಿದರು.

27ರಂದು ನವ ಪ್ರಜಾತಂತ್ರ ಕಲ್ಪನೆಗಳು, ರಾಜಕೀಯ ಅಸ್ಮಿತೆ ಮತ್ತು ಜನಪ್ರಿಯ ಚರ್ಚೆಗಳು: 'ಕರ್ನಾಟಕದ ಅನುಭವ' ಕುರಿತ ಸರ್ವಸದಸ್ಯರ ಗೋಷ್ಠಿಯಲ್ಲಿ ಹೈದರಾಬಾದ್ ಲೇಖಕ ಪ್ರೊ.ಕಾಂಚಾ ಈಲಯ್ಯ ಮಾತನಾಡಿಲಿದ್ದು, ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.

ಜಾತ್ಯತೀತತೆ, ಕೋಮುಸೌಹಾರ್ದ ಮತ್ತು ಬಹು ಸಾಂಸ್ಕೃತಿಕತೆ: ಕರ್ನಾಟಕದ ಉದಾಹರಣೆಗಳು ಕುರಿತು ಮೂರನೇ ಗೋಷ್ಠಿಯಲ್ಲಿ ನ್ಯಾಯವಾದಿ ಭಾನು ಮುಸ್ತಾಕ್ ಹಾಗೂ ಚಿಂತಕ ಪ್ರೊ.ರಾಜೇಂದ್ರ ಚೆನ್ನಿ ಮಾತನಾಡಲಿದ್ದಾರೆಂದರು.

ಸಾಮಾಜಿಕ ಚಳವಳಿಗಳು, ನಾಯಕತ್ವ, ನಾಗರಿಕ ಸಮಾಜ ಮತ್ತು ರಾಷ್ಟ್ರ ನಿರ್ಮಾಣ: ನಾಲ್ಕನೆ ಗೋಷ್ಠಿಯಲ್ಲಿ 'ಕರ್ನಾಟಕ ಕೊಡುಗೆ' ಕುರಿತು ಹೋರಾಟಗಾರ ಹೆಬ್ಬಾಲೆ ಲಿಂಗರಾಜು, ಮಹಿಳಾ ಹೋರಾಟಗಾರ್ತಿ ಸಾವಿತ್ರಿ ಮಂಜುದಾರ್ ಮಾತನಾಡಲಿದ್ದು, ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸುವರು. ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಇಕನಾಮಿಕ್ಸ್ ವಿಶ್ರಾಂತ ನಿರ್ದೇಶಕ ಡಾ.ಆರ್.ಎಸ್.ದೇಶಪಾಂಡೆ ಸಮಾರೋಪ ನುಡಿಗಳನ್ನಾಡಲಿದ್ದು, ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷ ಪ್ರೊ.ಅರವಿಂದ ಮಾಲಗತ್ತಿ ಅಧ್ಯಕ್ಷತೆ ವಹಿಸುವರು. ಕಾನೂನು ಕಾಲೇಜು ವಿದ್ಯಾರ್ಥಿಗಳಿಂದ ಸಂಸತ್ತಿನ ಚರ್ಚೆಗಳು ಕುರಿತ ಛಾಯಾಭಿನಯ ಹಾಗೂ ಏಕತಾರಿ, ವಸುಂಧರೆ ತಂಡದವರಿಂದ ಸಮಾನತೆಯ ಗೀತೆಗಳ ಗಾಯನ ನಡೆಯಲಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಆಹಾರ ಇಲಾಖೆ ಉಪನಿರ್ದೇಶಕ ಕಾ.ರಾಮೇಶ್ವರಪ್ಪ,  ಮೈಸೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಡಾ.ಸೋಮಶೇಖರ್, ಮೈಸೂರು ವಕೀಲರ ಸಂಘದ ಅಧ್ಯಕ್ಷ ಹಾಗೂ ನಗರದ ವಿವಿಧ ಕಾನೂನು ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News