ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆ: ಡಾ.ಯೂನುಸ್ ಸಲೀಮ್

Update: 2017-09-22 16:30 GMT

ಬೆಂಗಳೂರು, ಸೆ.22: ಬಡವರು ಹಾಗೂ ಮಧ್ಯಮ ವರ್ಗದವರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಕಲ್ಪಿಸುವ ದೃಷ್ಟಿಯಿಂದ ಸಮಾನ ಮನಸ್ಕ ವೈದ್ಯರ ತಂಡವು ಮುಂದಾಗಿದೆ ಎಂದು ಹೃದ್ರೋಗ ತಜ್ಞ, ಆಸ್ಪತ್ರೆಯ ನಿರ್ದೇಶಕ ಡಾ.ಮುಹಮ್ಮದ್ ಯೂನುಸ್ ಸಲೀಮ್ ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶಿವಾಜಿನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸವಿರುವ ಬಡವರು ಹಾಗೂ ಮಧ್ಯಮ ವರ್ಗದವರು ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಮೊತ್ತವನ್ನು ಪಾವತಿಸಿ ಆರೋಗ್ಯ ಸೇವೆಯನ್ನು ಪಡೆಯುತ್ತಿದ್ದಾರೆ ಎಂದರು.

ಸಮಾನ ಮನಸ್ಕ ವೈದ್ಯರ ತಂಡವು, ಬಡವರಿಗೆ ನೆರವು ನೀಡುವ ಉದ್ದೇಶದಿಂದ ಶಿವಾಜಿನಗರದ ಅರುಣಾಚಲಂ ಮೊದಲಿಯಾರ್ ರಸ್ತೆಯಲ್ಲಿ ನಮ್ಮದೆ ಆದ ‘ಮೆಟ್ರೋ ಆಸ್ಪತ್ರೆ’ಯನ್ನು ಸೆ.24ರಂದು ಸಂಜೆ 4.30ಕ್ಕೆ ಲೋಕಾರ್ಪಣೆಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು.

ಹೃದ್ರೋಗ, ಜನರಲ್ ಫಿಸಿಷಿಯನ್, ಪಿಡಿಯಾಟ್ರಿಕ್, ಕಾಸ್ಮೋಟಾಲಜಿ ಸೇರಿದಂತೆ ವಿವಿಧ ತಜ್ಞರು ಆಸ್ಪತ್ರೆಯಲ್ಲಿ ಇರಲಿದ್ದು, ಯಾವುದೆ ಬಗೆಯ ಲಾಭದ ನಿರೀಕ್ಷೆಯಿಲ್ಲದೆ, ಕಡಿಮೆ ದರದಲ್ಲಿ ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಲು ಉದ್ದೇಶಿಸಿದ್ದೇವೆ ಎಂದು ವೈದ್ಯಕೀಯ ನಿರ್ದೇಶಕ ಡಾ.ಬಿ.ಆರೀಫ್ ಉಲ್ಲಾ ಖುರೇಷಿ ತಿಳಿಸಿದರು.

35 ಹಾಸಿಗೆಗಳನ್ನು ಹೊಂದಿರುವ ಈ ಆಸ್ಪತ್ರೆಯಲ್ಲಿ, ಐಸಿಯು, ವೆಂಟಿಲೇಟರ್, ಹೆರಿಗೆ ವಿಭಾಗ, ಔಷಧಾಲಯ, ತುರ್ತು ಚಿಕಿತ್ಸಾ ಘಟಕ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಬಡವರಿಗೆ ಕಲ್ಪಿಸಲಾಗುತ್ತಿದೆ. ವೈದ್ಯರ ತಂಡವು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಶೀಘ್ರವೆ ರಕ್ತ ನಿಧಿಯನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಸಿ.ವೈ.ಎಸ್.ಖಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News