ರಾಯಚೂರಿನಲ್ಲಿ ವಿವಿ ಸ್ಥಾಪನೆ: ಬಸವರಾಜ ರಾಯರೆಡ್ಡಿ

Update: 2017-09-22 16:44 GMT

ರಾಯಚೂರು, ಸೆ.22: ಹೈದರಾಬಾದ್-ಕರ್ನಾಟಕ ಪ್ರದೇಶದ ಶೈಕ್ಷಣಿಕ ಕ್ಷೇತ್ರ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ರಾಯಚೂರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.

ನಗರದಲ್ಲಿ ಆಯೋಜಿಸಿದ್ದ ವೀರಶೈವ ವಿದ್ಯಾವರ್ಧಕ ಸಂಘದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಹೊಸಪೇಟೆಯ ಶ್ರೀ ಪ್ರೌಢದೇವರಾಯ ತಾಂತ್ರಿಕ ಸಂಸ್ಥೆಯ ಸಿವಿಲ್ ವಿಭಾಗದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೈ-ಕರ್ನಾಟಕ ಪ್ರದೇಶದ ಶೈಕ್ಷಣಿಕ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶೈಕ್ಷಣಿಕ ಕ್ಷೇತ್ರದಲ್ಲಿ ಕರ್ನಾಟಕವು ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಆದರೆ, ಇದೇ ಸಾಧನೆಯನ್ನು ಹೈ-ಕರ್ನಾಟಕದ ಭಾಗದಲ್ಲಿ ಸಾಧಿಸಲು ವಿಫಲರಾಗಿದ್ದೇವೆ. ಹೈ-ಕರ್ನಾಟಕ ಭಾಗದ ಬಳ್ಳಾರಿಯಲ್ಲಿ ಶೇ.12, ಕೊಪ್ಪಳದಲ್ಲಿ ಶೇ.11, ರಾಯಚೂರಿನಲ್ಲಿ ಶೇ.19, ಯಾದಗಿರಿಯಲ್ಲಿ ಶೇ.04 ವಿದ್ಯಾರ್ಥಿಗಳು ಮಾತ್ರ ಉನ್ನತ ಶಿಕ್ಷಣದಲ್ಲಿ ದಾಖಲಾಗುತ್ತಿರುವುದು ಈ ಭಾಗದ ಶೈಕ್ಷಣಿಕ ಹಿಂದುಳಿದಿರುವಿಕೆಗೆ ಕಾರಣವಾಗಿದೆ ಎಂದು ಅವರು ವಿಷಾದಿಸಿದರು.

ಲ್ಯಾಪ್‌ಟಾಪ್ ವಿತರಣೆ: ರಾಜ್ಯ ಸರಕಾರವು ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುತ್ತಿದ್ದು, ಮುಂದಿನ ನವೆಂಬರ್‌ನಿಂದಲೇ ಕಾಲೇಜ್ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಗುತ್ತದೆ. ಸರಕಾರಿ ಮತ್ತು ಅನುದಾನಿತ ಕಾಲೇಜ್‌ಗಳ ಎಲ್ಲ ಪ್ರಥಮ ವರ್ಷದ ವಿದ್ಯಾರ್ಥಿಗಳು ಲ್ಯಾಪ್‌ಟಾಪ್ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News