ಶಾಸಕ ಕೆ.ಎನ್.ರಾಜಣ್ಣ ಹೇಳಿಕೆಯ ಹಿಂದೆ ದುರುದ್ದೇಶವಿಲ್ಲ: ಸಚಿವ ರಮೇಶ್‌ ಕುಮಾರ್

Update: 2017-09-22 16:55 GMT

ಬೆಂಗಳೂರು, ಸೆ. 22: ಮಧುಗಿರಿ ಕ್ಷೇತ್ರದ ಶಾಸಕ ಕೆ.ಎನ್.ರಾಜಣ್ಣ ಹೇಳಿಕೆಯಲ್ಲಿ ಸತ್ಯಾಂಶವಿದ್ದು, ಅದನ್ನು ತಿರುಚುವುದು ಬೇಡ. ಪಕ್ಷ ನಿಷ್ಠೆ ನೆಪದಲ್ಲಿ ವಿಮರ್ಶೆಯ ಧೋರಣೆ ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಮಾತನಾಡುವ ಸ್ವಾತಂತ್ರವಿದೆ ಎಂದು ಆರೋಗ್ಯ ಸಚಿವ ಕೆ.ಆರ್.ರಮೇಶ್‌ಕುಮಾರ್ ಹೇಳಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿನ ತನ್ನ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜಣ್ಣ ಅವರ ಹೇಳಿಕೆ ಉದ್ದೇಶ ಪಕ್ಷಕ್ಕೆ ಹಾನಿ ಮಾಡುವುದಲ್ಲ. ಅದರ ಹಿಂದೆ ಯಾವುದೇ ದುರದ್ದೇಶ ಇದ್ದಂತಿಲ್ಲ. ಅವರ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ಅವರ ವ್ಯಕ್ತಿತ್ವ ಏನು ಎಂಬುದು ನನಗೆ ಗೊತ್ತು ಎಂದು ಸಮರ್ಥಿಸಿಕೊಂಡರು.

ಪಕ್ಷ ಸಂಘಟನೆಗಾಗಿ ಹೋರಾಟ ಮಾಡಿ ಪಕ್ಷವನ್ನು ಬೆಳೆಸಿದವರು, ಅವರನ್ನು ನಿರ್ಲಕ್ಷಿಸಿದಾಗ ನೋವಾಗುವುದು ಸಹಜ. ಏನೇ ಆದರೂ ರಾಜಣ್ಣ ಅವರ ಧೈರ್ಯವನ್ನು ಮೆಚ್ಚಲೇಬೇಕು. ಕಾಂಗ್ರೆಸ್‌ನಲ್ಲಿದ್ದುಕೊಂಡು ಸರಿ-ತಪ್ಪುಗಳನ್ನು ಹೇಳುವ ಧೈರ್ಯ ಮಾಡಿದ್ದಾರೆ. ತಾನು ಅವರನ್ನು ಬೆಂಬಲಿಸುತ್ತೇನೆ. ಇದು ಪಕ್ಷ ವಿರೋಧಿ ಚಟುವಟಿಕೆಯಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸಮೀಕರಣ ಸಲ್ಲ: ಕಾಫಿ ಡೇ ಮಾಲಕ ಸಿದ್ದಾರ್ಥ ಅವರ ಒಡೆತನದ ಕಚೇರಿ ಹಾಗೂ ಮನೆಯ ಮೇಲೆ ಐಟಿ ದಾಳಿಯನ್ನು ಅವರ ಮಾವ ಎಸ್.ಎಂ.ಕೃಷ್ಣ ಅವರ ರಾಜಕೀಯದೊಂದಿಗೆ ಸಮೀಕರಿಸುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅವರು ಹೇಳಿದರು.

ಸಿದ್ಧಾರ್ಥ ಹೇಳಿ-ಕೇಳಿ ವ್ಯಾಪಾರಸ್ಥರು. ಅವರನ್ನು ವ್ಯಾಪಾರ ಮಾಡಬೇಡಿ ಎಂದು ಹೇಳಲು ಸಾಧ್ಯವಿಲ್ಲ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದು, ತಪ್ಪಿದ್ದರೆ ದಂಡ ಹಾಕಿ ಸರಿಪಡಿಸಲಿದ್ದಾರೆ. ಅದು ಅವರ ಕೆಲಸ ಎಂದು ತಿಳಿಸಿದರು.

ಕೃಷ್ಣ ಅವರು ಐದೂವರೆ ದಶಕಗಳ ರಾಜಕೀಯ ಅನುಭವವುಳ್ಳವರು. ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಬಿಜೆಪಿ ಅವರನ್ನು ಬ್ಲಾಕ್‌ಮೇಲ್ ಮಾಡಿ ಪಕ್ಷಕ್ಕೆ ಸೇರಿಸಿಕೊಂಡರು ಎಂಬ ಹೇಳಿಕೆ ಸರಿಯಲ್ಲ ಎಂದು ಟೀಕಿಸಿದರು.

ಮಾಧ್ಯಮಗಳ ಬೇಹುಗಾರಿಕೆ: ಇತ್ತೀಚೆಗೆ ಮಾಧ್ಯಮ ಪ್ರತಿನಿಧಿಗಳು ವರದಿ ನೀಡುವುದನ್ನು ಬಿಟ್ಟು ಬೇಹುಗಾರಿಕೆ ಮಾಡುವುದರಲ್ಲಿ ತಲೀನರಾಗಿದ್ದಾರೆ. ವಾಸ್ತವ ಸಂಗತಿಗಳನ್ನು ಬಿಟ್ಟು ಹೇಳಿಕೆಗಳನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಮಾಧ್ಯಮಗಳು ನಿಷ್ಪಕ್ಷಪಾತವಾಗಿ ವರದಿ ಮಾಡಬೇಕೆಂದು ಸಲಹೆ ನೀಡಿದರು.

ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ತಿದ್ದುಪಡಿ ವಿಧೇಯಕ’ ಅಕ್ಟೋಬರ್‌ನಲ್ಲಿ ನಡೆಯಲಿರುವ ವಿಧಾನ ಮಂಡಲ ಜಂಟಿ ಅಧಿವೇಶನದಲ್ಲಿ ಮಂಡನೆ ಆಗುವ ಸಾಧ್ಯತೆಗಳಿವೆ. ಈ ಸಂಬಂಧ ರಚನೆ ಮಾಡಿರುವ ಜಂಟಿ ಸದನ ಸಮಿತಿ ಸಭೆ ದಸರಾ ಉತ್ಸವದ ಹಿನ್ನೆಲೆಯಲ್ಲಿ ಅಕ್ಟೋಬರ್ 3ಕ್ಕೆ ಮುಂದೂಡಲಾಗಿದೆ.
-ಕೆ.ಆರ್.ರಮೇಶ್‌ಕುಮಾರ್, ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News