ಕಾಂಗ್ರೆಸ್-ಜೆಡಿಎಸ್ ಮಧ್ಯೆ ಯಾವುದೇ ಗೊಂದಲ ಇಲ್ಲ: ಸಚಿವ ರಾಮಲಿಂಗಾರೆಡ್ಡಿ

Update: 2017-09-22 16:59 GMT

ಬೆಂಗಳೂರು, ಸೆ. 22: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮೇಯರ್ ಆಯ್ಕೆ ಸಂಬಂಧ ಕಾಂಗ್ರೆಸ್-ಜೆಡಿಎಸ್ ಮಧ್ಯೆ ಯಾವುದೇ ಗೊಂದಲ ಇಲ್ಲ. ಮೇಯರ್ ಯಾರಾಗಬೇಕು ಎಂದು ಸಿಎಂ, ಕೆಪಿಸಿಸಿ ಅಧ್ಯಕ್ಷರು, ಶಾಸಕರು ಚರ್ಚಿಸಿ ನಿರ್ಧರಿಸಲಿದ್ದಾರೆಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ವಿಕಾಸ ಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬಿಬಿಎಂಪಿ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಸಂಬಂಧ ಈಗಾಗಲೇ ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದರು.

ಮೇಯರ್ ಆಯ್ಕೆ ಸಂಬಂಧ ಯಾವುದೇ ಗೊಂದಲವಿಲ್ಲ. ಜೆಡಿಎಸ್ ನಾಲ್ಕು ಸ್ಥಾಯಿ ಸಮಿತಿಗಳನ್ನು ಕೇಳಿದೆ. ಕಾಂಗ್ರೆಸ್ ಪಕ್ಷದಲ್ಲಿ ನಾಲ್ಕು ಮಂದಿ ಸದಸ್ಯ ಮೇಯರ್ ಸ್ಥಾನದ ಆಕಾಂಕ್ಷಿಗಳಿದ್ದಾರೆಂದ ಅವರು, ಮೇಯರ್ ಸ್ಥಾನದ ಆಕಾಂಕ್ಷಿ, ದೇವರಜೀವನಹಳ್ಳಿ ವಾರ್ಡ್ ಸದಸ್ಯ ಸಂಪತ್ ರಾಜ್ ತನನ್ನು ಭೇಟಿ ಮಾಡಿದರು ಎಂದರು.

ಪುತ್ರಿಗೆ ರಾಜಕೀಯ ಆಸಕ್ತಿ: ನನ್ನ ಪುತ್ರಿ ಮೊದಲಿನಿಂದಲೂ ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದು, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದು, ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಸ್ಪಷ್ಟಣೆ ನೀಡಿದರು.

ಟೆಲಿಫೋನ್ ಕದ್ಧಾಲಿಕೆ ಬಗ್ಗೆ ಬಿಜೆಪಿ ದಾಖಲೆ ಕೊಡಬೇಕು. ಅದು ಬಿಟ್ಟು ಸುಮ್ಮನೆ ಆರೋಪ ಸರಿಯಲ್ಲ. ಆರ್.ಅಶೋಕ್ ಗೃಹ ಸಚಿವರಾಗಿ ಕೆಲಸ ಮಾಡಿದ್ದು, ದಾಖಲೆ ಇಲ್ಲದೆ ಏನೂ ಮಾಡಲು ಆಗುವುದಿಲ್ಲ. ಹೀಗಾಗಿ ಬಿಜೆಪಿ ಈ ಬಗ್ಗೆ ಕೂಡಲೇ ದಾಖಲೆ ನೀಡಿ ತನಿಖೆಗೆ ಸಹಕರಿಸಬೇಕು.
-ರಾಮಲಿಂಗಾರೆಡ್ಡಿ, ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News