ಸೆ. 25ಕ್ಕೆ ಸುಪ್ರೀಂ ಕೋರ್ಟ್ ಆದೇಶ ಜಾರಿಗೆ ಆಗ್ರಹಿಸಿಸಿ ಜಾಥಾ

Update: 2017-09-22 17:01 GMT

ಬೆಂಗಳೂರು, ಸೆ. 22: ಕೆಪಿಟಿಸಿಎಲ್‌ನಲ್ಲಿ ಜಾರಿಗೊಳಿಸಿರುವ ಸಾಂದರ್ಭಿಕ ಜೇಷ್ಠತೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶದ ಜಾರಿಗೆ ಆಗ್ರಹಿಸಿ ಕೆಪಿಟಿಸಿಎಲ್ ಜನರಲ್ ಕ್ಯಾಟಗರಿ ಅಸೋಸಿಯೇಶನ್ ಸೆ. 25ರಂದು ಜಾಥಾ ಹಮ್ಮಿಕೊಂಡಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಶಿವಪ್ರಕಾಶ್ ಮಾತನಾಡಿ, ಸಾಂದರ್ಭಿಕ ಜೇಷ್ಠತೆಗೆ ಸಂಬಂಧಿಸಿದಂತೆ 30 ದಿನಗಳ ಆಕ್ಷೇಪಣಾ ಅವಧಿಯೊಂದಿಗೆ ಆದೇಶ ಪ್ರಕಟವಾಗಿದೆ. ಆಕ್ಷೇಪಣ ಅವಧಿ ಪೂರ್ಣಗೊಂಡು 3 ತಿಂಗಳಾಗಿದ್ದರೂ ಕೆಪಿಟಿಸಿಎಲ್‌ನಲ್ಲಿ ಮುಂಭಡ್ತಿ ಹಾಗೂ ಹಿಂಭಡ್ತಿಯನ್ನು ಇದುವರೆಗೂ ಜಾರಿಗೊಳಿಸದೇ ರಾಜ್ಯ ಸರಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದರು.

ರಾಜ್ಯ ಸರಕಾರ 1978ರಲ್ಲಿ ಕೆಇಬಿಯಲ್ಲಿ ಪದೋನ್ನತಿ ಮೀಸಲಾತಿ ಹಾಗೂ ಸಾಂದರ್ಭಿಕ ಜೇಷ್ಠತೆ ನೀತಿಯನ್ನು ಜಾರಿಗೊಳಿಸಿದೆ. ಆದರೆ ಇದರ ವಿರುದ್ಧ ಬಂಡಪ್ಪನವರ್ ಸುಪ್ರೀಂನಲ್ಲಿ ಪ್ರಶ್ನಿಸಿದ ಕಾರಣ, ವಿಚಾರಣೆ ನಡೆಸಿದ ನ್ಯಾಯಾಲಯ ಸಾಂದರ್ಭಿಕ ಜೇಷ್ಠತೆಯನ್ನು ವಜಾಗೊಳಿಸಿದ್ದರೂ ಸಹ ಕೆಪಿಟಿಸಿಎಲ್‌ನಲ್ಲಿ ಸುಪ್ರೀಂ ಆದೇಶ ಪಾಲನೆಯಾಗುತ್ತಿಲ್ಲ ಎಂದು ತಿಳಿಸಿದರು.

2002 ರಲ್ಲಿ ಸಂವಿಧಾನದ ತಿದ್ದುಪಡಿ ಹಾಗೂ ಕರ್ನಾಟಕ ಸರಕಾರದ ನಿಯಮವನ್ನು ಸುಪ್ರೀಂನಲ್ಲಿ ಪ್ರಶ್ನಿಸಲಾಗಿತ್ತು. ಸಂದರ್ಭಕ್ಕೆ ಅನುಗುಣವಾಗಿ ಮೀಸಲಾತಿ ನೀಡಲು ಇರುವ ಅವಶ್ಯಕತೆಗಳನ್ನು ಪೂರೈಸದಿದ್ದ ಸಂದರ್ಭದಲ್ಲಿ ಮೀಸಲಾತಿ ಕಾನೂನು ಅಸಿಂಧು ಎಂದು ಸ್ಪಷ್ಟವಾಗಿ ಆದೇಶ ನೀಡಿದೆ ಎಂದು ಹೇಳಿದರು.

ಸೇವಾ ಜೇಷ್ಠತಾ ಪಟ್ಟಿಯನ್ನು ಮೂರು ತಿಂಗಳೊಳಗೆ ಪರಿಷ್ಕರಿಸಬೇಕು ಹಾಗೂ ಇದರದೇ ಭಾಗವಾದ ಮುಂಭಡ್ತಿ ಹಾಗೂ ಹಿಂಭಡ್ತಿಗಳನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಕೋರ್ಟ್ ಆದೇಶಿಸಿದೆ ಎಂದರು.

ಸಾಮಾಜಿಕ ನ್ಯಾಯದ ಹಿತದೃಷ್ಟಿಯಿಂದ ಸಂವಿಧಾನದ ಸಮಾನತೆ ಆಶಯದಂತೆ ಸುಪ್ರೀಂಕೋರ್ಟ್ ನೀಡಿರುವ ಈ ಆದೇಶವನ್ನು ತಕ್ಷಣ ಕೆಪಿಟಿಸಿಎಲ್‌ನಲ್ಲಿ ಯಥಾವತ್ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ಜಾಥಾ ನಡೆಸಲಾಗುತ್ತಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News