ಗಾಲಿಗಳ ಮೇಲೆ ಅರಮನೆ ಪ್ರವಾಸಕ್ಕೆ ಸಚಿವ ರೇವಣ್ಣ ಚಾಲನೆ

Update: 2017-09-22 17:41 GMT

ಮೈಸೂರು, ಸೆ.22: ಮೈಸೂರು ಅರಮನೆಗಳ ಬೀಡು, ಪ್ರವಾಸೋದ್ಯಮ ಇಲಾಖೆ ದಸರಾ ಮಹೋತ್ಸವದ ಅಂಗವಾಗಿ ಗಾಲಿಗಳ ಮೇಲೆ ಅರಮನೆ ( ಪ್ಯಾಲೇಸ್ ಆನ್ ವ್ಹೀಲ್ಸ್) ಕಾರ್ಯಕ್ರಮವನ್ನು ಸಾರಿಗೆ ಸಚಿವ ಎಚ್. ಎಂ. ರೇವಣ್ಣ  ಅರಮನೆ ಉತ್ತರ ದ್ವಾರದಲ್ಲಿ ಶುಕ್ರವಾರ ಉದ್ಘಾಟಿಸಿದರು.

ಈ ವೇಳೆ ಮಾನಾಡಿದ ಅವರು, ಗಾಲಿಗಳ ಮೇಲೆ ಅರಮನೆ ಕಾರ್ಯಕ್ರಮ ಪ್ರವಾಸಿಗರಿಗೆ ಮೈಸೂರಿನ ಅರಮನೆಗಳು ಹಾಗೂ ವಸ್ತು ಸಂಗ್ರಹಾಲಯಗಳನ್ನು ಪರಿಚಯಿಸಲಿದೆ. ಈ ವಿನೂತನವಾದ ಕಾರ್ಯಕ್ರಮಕ್ಕೆ ಎರಡು ಹವಾ ನಿಯಂತ್ರಿತ ಬಸ್ ಗಳನ್ನು ಬಳಸಲಾಗುತ್ತಿದೆ. ಬೆಳಗ್ಗೆ ಅಂಬಾವಿಲಾಸ ಅರಮನೆಯಿಂದ ಪ್ರವಾಸ ಆರಂಭಿಸಿ ಮಧ್ಯಾಹ್ನ ಲಲಿತ ಮಹಲ್ ಅರಮನೆಯಲ್ಲಿ ಊಟದ ವ್ಯವಸ್ಥೆ ಯೊಂದಿಗೆ ರಾತ್ರಿ ಮತ್ತೆ ಅಂಬಾವಿಲಾಸ ಅರಮನೆ ಬಳಿ ಪ್ರವಾಸ ಮುಗಿಯಲಿದೆ ಎಂದು ತಿಳಿಸಿದರು.

ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೆಶಕ ಎಚ್.ಪಿ. ಜನಾರ್ಧನ್ ಮಾತನಾಡಿ, ಒಟ್ಟು ಪ್ರವಾಸದಲ್ಲಿ 8 ಪ್ರಮುಖ ಸ್ಥಳಗಳನ್ನು ಪರಿಚಯಿಸಲಾಗುತ್ತಿದ್ದು, ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ನುರಿತ ಪ್ರವಾಸಿ ಮಾರ್ಗದರ್ಶಿಗಳು ಪಾರಂಪರಿಕ ಕಟ್ಟಡಗಳ ಮಾಹಿತಿ ನೀಡಲಿದ್ದಾರೆ. ಈ ವಿಶೇಷ ಪ್ರವಾಸ ಮಾಡಲು ಪ್ರತಿಯೊಬ್ಬ ಪ್ರವಾಸಿಗರಿಗೆ 99 9ರೂ. ನಿಗದಿಪಡಿಸಲಾಗಿದೆ. ಸೆಪ್ಟಂಬರ್ 22 ರಿಂದ ಅಕ್ಟೋಬರ್ 2 ರವರೆಗೂ ಗಾಲಿಗಳ ಮೇಲೆ ಅರಮನೆ ಮುಂದುವರಿಯಲಿದೆ ಎಂದು ಅವರು ಮಾಹಿತಿ ನೀಡಿದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News