ಭವರೋಗವ ಕಳೆವ ಪರಿ

Update: 2017-09-22 18:37 GMT

ಗುರೂಪದೇಶ ಮಂತ್ರವೈದ್ಯ; ಜಂಗಮೋಪದೇಶ ಶಸ್ತ್ರವೈದ್ಯ ನೋಡಾ.
ಭವರೋಗವ ಕಳೆವ ಪರಿಯ ನೋಡಾ.
ಕೂಡಲಸಂಗನ ಶರಣರ ಅನುಭಾವ
ಮಡಿವಾಳನ ಕಾಯಕದಂತೆ.
 - ಬಸವಣ್ಣ

 ಭವರೋಗವೆಂದರೆ ಐಹಿಕ ವಸ್ತುಗಳಲ್ಲೇ ತಲ್ಲೀನವಾಗುವುದು. ವಸ್ತುಮೋಹಿ ಯಾಗಿಯೇ ಬದುಕುವುದು; ‘ಇಡೀ ಮಾನವಕುಲಕ್ಕೆ ಹಾನಿಯಾದರೂ ಪರವಾಗಿಲ್ಲ ನನಗೆ ಮಾತ್ರ ಲಾಭವಾಗಬೇಕು’ ಎಂಬ ಮನೋಭಾವವನ್ನು ಹೊಂದುವುದು; ಅಂಥ ಲಾಭಕ್ಕಾಗಿ ಏನನ್ನಾದರೂ ಮಾಡಲು ಸಿದ್ಧವಾಗಿರುವುದು; ಸ್ವಾರ್ಥವೇ ಜೀವನವಿಧಾನವಾಗುವುದು ಮತ್ತು ಹೆಣ್ಣು-ಹೊನ್ನು-ಮಣ್ಣು ಎಂಬ ತೀವ್ರತೆಯಲ್ಲೇ ಬದುಕುವುದು.

ಬಸವಣ್ಣನವರು ಇಂಥ ಭವರೋಗವನ್ನು ಕಳೆಯುವ ವಿಧಾನವನ್ನು ತಿಳಿಸುತ್ತಾರೆ. ಈ ಭವರೋಗದ ಕಾರಣವನ್ನು ಕಂಡುಹಿಡಿಯುವವನು ಗುರು. ಆತನ ಉಪದೇಶ ಮಂತ್ರವೈದ್ಯನ ಕೆಲಸ ಮಾಡುತ್ತದೆ. ಅಂದರೆ ಭವರೋಗದ ಮೂಲಗಳನ್ನು ತಿಳಿಸುತ್ತದೆ. ರೋಗದ ಮೂಲ ತಿಳಿಯದೆ ಶಸ್ತ್ರಚಿಕಿತ್ಸೆ ಮಾಡಲಿಕ್ಕಾಗದು. ಹಾಗೆಯೇ ಭವರೋಗ ನಿವಾರಣೆಗೆ ಕಾರ್ಯೋನ್ಮುಖರಾಗುವ ಮೊದಲು ಜಂಗಮರು ಗುರೂಪದೇಶವನ್ನು ಮನನ ಮಾಡಿಕೊಳ್ಳಬೇಕಾಗುತ್ತದೆ. ‘ಜಂಗಮ’ ಎಂಬುದು ಜಾತಿ ಅಲ್ಲ. ಜಂಗಮರು ಅಂದರೆ ಶರಣರ ತತ್ತ್ವಗಳನ್ನು ಜನಮನದಲ್ಲಿ ಬೇರೂರುವಂತೆ ಪ್ರಚಾರ ಮಾಡುವವರು. ಇವರು ಗುರೂಪದೇಶದ ಮೂಲಕ ಸಮತಾ ಸಮಾಜ ನಿರ್ಮಾಣಕ್ಕಾಗಿ ಇಡೀ ಬದುಕನ್ನು ಸವೆಸುವವರು.

ಸಮಾಜದ ಹೊಲಸನ್ನು ತೊಳೆಯುವಲ್ಲಿ ಶರಣರ ವಚನಗಳು ಮಹತ್ವದ ಪಾತ್ರ ವಹಿಸುತ್ತವೆ. ಅಂತೆಯೇ ‘ಕೂಡಲಸಂಗನ ಶರಣರ ಅನುಭಾವ ಮಡಿವಾಳನ ಕಾಯಕದಂತೆ’ ಎಂದು ಬಸವಣ್ಣನವರು ಹೇಳುತ್ತಾರೆ. ಸಮಾಜದ ಹೊಲಸೆಂಬುದು ಅಸಮಾನತೆಯನ್ನು ಸಾರುವ ಜನರ ಮನಸ್ಸಿನಲ್ಲಿ ಇರುತ್ತದೆ. ಎಲ್ಲ ತೆರನಾದ ಭೇದಭಾವಕ್ಕೆ ಮಾನವನ ಮನಸ್ಸಿನಲ್ಲಿರುವ ಕೊಳಕೇ ಕಾರಣವಾಗಿದೆ. ಜನರ ಮನಸ್ಸು ಸ್ವಚ್ಛವಾಗುವವರೆಗೆ ಸಮಾಜದಲ್ಲಿ ಸಮಭಾವದ ಸ್ವಚ್ಛತೆ ಎಂಬುದು ಇರುವುದಿಲ್ಲ. ಆದ್ದರಿಂದ ಸಮಾಜವನ್ನು ಸುಧಾರಿಸುವುದು ಎಂದರೆ ಸಮಾಜದೊಳಗಿನ ಜನರನ್ನು ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ಸುಧಾರಿಸುವುದು ಎಂಬುದನ್ನು ಬಸವಣ್ಣನವರು ಕಂಡುಹಿಡಿದರು.

ಗುರುವಾದವನು ವ್ಯಕ್ತಿ ಮತ್ತು ಸಮಾಜದ ಸ್ವಚ್ಛತೆಯ ಮಂತ್ರಗಳನ್ನು ನುಡಿಯುತ್ತಾನೆ. ಜಂಗಮ ಅವುಗಳನ್ನು ಕಾರ್ಯಗತಗೊಳಿಸುತ್ತಾನೆ. ಹೀಗೆ ಪ್ರತಿಯೊಬ್ಬರು ತಮ್ಮನ್ನು ಮತ್ತು ಸಮಾಜವನ್ನು ಸ್ವಚ್ಛಗೊಳಿಸುತ್ತ ಆತ್ಮಗೌರವದೊಂದಿಗೆ ಬದುಕುವಂಥ ವಾತಾವರಣವನ್ನು ಸೃಷ್ಟಿಸುವುದೇ ಶರಣರ ಬಹುದೊಡ್ಡ ಗುರಿಯಾಗಿತ್ತು. ಜೀವಿಸಲು ಎಷ್ಟು ಬೇಕೋ ಅಷ್ಟೇ ಐಹಿಕ ವಸ್ತುಗಳನ್ನು ಪ್ರಸಾದದ ಹಾಗೆ ಸ್ವೀಕರಿಸಿ ಬಳಸಬೇಕು. ಅದಕ್ಕಿಂತಲೂ ಹೆಚ್ಚಿನ ಐಹಿಕ ವಸ್ತುಗಳು ಪ್ರಸಾದವಾಗಿ ಉಳಿಯದೆ ವಿಷವಸ್ತುಗಳಾಗಿ ಪರಿಣಮಿಸುವವು. ಅವುಗಳ ಬಳಕೆಯಿಂದ ಭವರೋಗ ಬರುವುದು. ಆದ್ದರಿಂದ ಆವಶ್ಯಕತೆಗಿಂತ ಹೆಚ್ಚಿನ ವಸ್ತುಗಳನ್ನು ವಿಷವಸ್ತುವಾಗಿಸದೆ ದಾಸೋಹ ರೂಪದಲ್ಲಿ ಸಮಾಜಕ್ಕೆ ಅರ್ಪಿಸುವುದೇ ಭವರೋಗದಿಂದ ಮುಕ್ತವಾಗುವ ಕ್ರಮವಾಗಿದೆ. ವಸ್ತುಮೋಹದಿಂದ ಬರುವ ಭವರೋಗವನ್ನು ಹಚ್ಚಿಕೊಂಡಾತನಿಗೆ ಭವಿ ಎಂದು ಕರೆಯುತ್ತಾರೆ. ಭವರೋಗದಿಂದ ಮುಕ್ತನಾದವನೇ ಭಕ್ತ. ಭಕ್ತನು ವಸ್ತುಮೋಹಿ ಆಗಿರುವುದಿಲ್ಲ. ಆದರೆ ಆತ ಪರವಸ್ತುಮೋಹಿ ಆಗಿರುತ್ತಾನೆ. ಪರವಸ್ತು ಎಂದರೆ ಮೂಲಚೈತನ್ಯಸ್ವರೂಪವಾದ ದೇವರು. ಆ ದೇವರ ಸಂಕೇತವೇ ಲಿಂಗ. ಹೀಗೆ ಲಿಂಗಮೋಹಿಯಾದ ಭಕ್ತನು ವಸ್ತುಮೋಹದಿಂದ ಹೊರಬಂದು ದಾಸೋಹಿ ಆಗುತ್ತಾನೆ.

 ದಾಸೋಹಿ ಅಂದರೆ ಜಗತ್ತಿನ ವಸ್ತುಗಳೆಲ್ಲ ಸಕಲ ಜೀವಾತ್ಮರಿಗೆ ಸೇರಿದವು ಎಂಬುದರಲ್ಲಿ ಅಚಲ ನಂಬಿಕೆಯುಳ್ಳವನು. ಕಾಯಕದಿಂದ ಪಡೆದದ್ದನ್ನು ದೇವರ ಪ್ರಸಾದವೆಂದು ಸ್ವೀಕರಿಸುವವನು. ಅದನ್ನು ದೇವರ ಸೊತ್ತೆಂದು ಭಾವಿಸಿ ಹಿತಮಿತವಾಗಿ ಬಳಸುವವನು. ‘ಸಮಾಜವೆಂಬುದು ದೇವರ ಕಾಣುವ ರೂಪ’ ಎಂದು ತಿಳಿದವನು. ಕಾಯಕದಿಂದ ಬಂದ ಹೆಚ್ಚಿನದನ್ನು ತನಗಾಗಿ ಕೂಡಿಸಿ ಇಡದೆ, ದಾಸೋಹದ ಮೂಲಕ ಸಮಾಜವೆಂಬ ದೇವರಿಗೆ ಅರ್ಪಿಸುವವನು. ಹೀಗೆ ಸಕಲಜೀವಾತ್ಮರು ಆನಂದಮಯವಾಗಿರಲಿ ಎಂಬ ಆಶಯದೊಂದಿಗೆ ಕ್ರಿಯಾಶೀಲವಾಗಿ ಬದುಕುವವನು.

ಗುರೂಪದೇಶವೆಂಬುದು ಮಂತ್ರವೈದ್ಯ ಇದ್ದ ಹಾಗೆ. ಜಂಗಮೋಪದೇಶವೆಂಬುದು ಶಸ್ತ್ರವೈದ್ಯ ಇದ್ದ ಹಾಗೆ. ಇಲ್ಲಿ ಮಂತ್ರವೈದ್ಯ ಎಂದರೆ ಸಮಾಜಕ್ಕೆ ಅಂಟಿದ ರೋಗದ ಕಾರಣವನ್ನು ಕಂಡುಹಿಡಿದು ಅದನ್ನು ನಿವಾರಿಸುವ ಬಗೆಯನ್ನು ತಿಳಿಸುವಂಥ ಗುರುವಿನ ಉಪದೇಶ. ಶಸ್ತ್ರವೈದ್ಯ ಎಂದರೆ ಆ ಪ್ರಕಾರ ಸಮಾಜಕ್ಕೆ ಬದಲಾವಣೆಯ ಶಸ್ತ್ರಕ್ರಿಯೆ ಮಾಡಿ ಭವರೋಗವನ್ನು ನಿವಾರಿಸುವ ಜಂಗಮೋಪದೇಶ.

ಗುರು, ಹೃದ್ರೋಗ ಕಂಡುಹಿಡಿಯುವ ಕಾರ್ಡಿಯಾಲಾಜಿಸ್ಟ್ ಇದ್ದ ಹಾಗೆ. ಜಂಗಮ, ಹಾರ್ಟ್ ಆಪರೇಷನ್ ಮಾಡುವ ಸರ್ಜನ್ ಇದ್ದ ಹಾಗೆ. ಬಸವಣ್ಣನವರ ‘ಷಟ್‌ಸ್ಥಲದ ವಚನಗಳು’, ಪ್ರಭುದೇವರ ‘ಮಂತ್ರಗೋಪ್ಯ’ ಮತ್ತು ಚನ್ನಬಸವಣ್ಣನವರ ‘ಕರಣಹಸಗೆ’ ಎಂಬ ಮೂರು ವಚನಕಟ್ಟುಗಳು ಕೂಡಿ ಗುರೂಪದೇಶವಾಗುತ್ತದೆ. ಬಸವಣ್ಣನವರ ವಚನಗಳು ಭೂಮಿಪ್ರಧಾನ, ಪ್ರಭುದೇವರ ಮಂತ್ರಗೋಪ್ಯ ವ್ಯೋಮಪ್ರಧಾನ ಮತ್ತು ಚನ್ನಬಸವಣ್ಣನವರ ಕರಣಹಸಗೆ ದೇಹ, ಮನಸ್ಸು ಮತ್ತು ಇಂದ್ರಿಯ ಪ್ರಧಾನ. ಹೀಗೆ ಈ ಮೂವರ ಗ್ರಂಥಗಳ ಸಂಕಲನವೇ ‘ಲಿಂಗಾಯತ ಧರ್ಮಗ್ರಂಥ’ ಭೂಮಿ, ವಿಶ್ವ ಮತ್ತು ಮಾನವನ ಕುರಿತು ತಿಳಿಸುವಂಥ ಧರ್ಮಗ್ರಂಥವಿದು. ಜಂಗಮದೀಕ್ಷೆಯ ಸಂದರ್ಭದಲ್ಲಿ ಈ ವಚನಕಟ್ಟುಗಳಿಂದ ಕೂಡಿದ ಧರ್ಮಗ್ರಂಥವನ್ನು ದೀಕ್ಷೆ ಪಡೆಯುವವರ ಜೋಳಿಗೆಯಲ್ಲಿ ಹಾಕಲಾಗುವುದು. ಜಂಗಮ ಎಂದರೆ ಜಾತಿಜಂಗಮ ಅಲ್ಲ. ಹೀಗೆ ಗುರೂಪದೇಶದ ದೀಕ್ಷೆ ಪಡೆದನಂತರ ಎಲ್ಲಿಯೂ ನೆಲೆನಿಲ್ಲದ ಪರಿವ್ರಾಜಕನಂತೆ ಹಳ್ಳಿ ಮತ್ತು ಪಟ್ಟಣಗಳಲ್ಲಿ ತಿರುಗುತ್ತ, ಈ ಗುರೂಪದೇಶವೆಂಬ ಜ್ಞಾನವು ಸಮಾಜದಲ್ಲಿ ಕ್ರಿಯಾರೂಪ ತಾಳುವಂತೆ ಮಾಡುವವನು.

ಕ್ರಿಯೆ ಇಲ್ಲದ ಜ್ಞಾನ ನಿಷ್ಪ್ರಯೋಜಕ. ಜ್ಞಾನವಿಲ್ಲದ ಕ್ರಿಯೆ ಗಂಡಾಂತರಕಾರಿ. ಅಂತೆಯೆ ಬಸವಾದಿ ಪ್ರಮಥರು ನುಡಿದಂತೆ ನಡೆದು ಜ್ಞಾನವನ್ನು ಕ್ರಿಯಾರೂಪಕ್ಕೆ ತರುವ ಮಾರ್ಗವನ್ನು ತೋರಿಸಿಕೊಟ್ಟರು. ಲಿಂಗಭೇದ, ವರ್ಗಭೇದ ಮತ್ತು ವರ್ಣಭೇದ ಮುಂತಾದ ಅಸಮಾನತೆಯ ರೋಗಗಳಿಂದ ಸಮಾಜವನ್ನು ಮುಕ್ತಗೊಳಿಸಿ ಆರೋಗ್ಯಕರವಾದ ವಾತಾವರಣವನ್ನು ಸೃಷ್ಟಿಸುವುದೇ ಶರಣರ ಗುರಿಯಾಗಿತ್ತು.

ಅನುಭಾವವೆಂಬುದು ಮೂಲಚೈತನ್ಯದ ಅರಿವಿನಿಂದ ಉಂಟಾಗುವಂಥದ್ದು. ಅನುಭವವೆಂಬುದು ವಸ್ತುವಿನ ಪ್ರಜ್ಞೆಯಿಂದ ಬರುವಂಥದ್ದು. ಹೀಗೆ ಅರಿವು ಚೈತನ್ಯಜನ್ಯವಾದರೆ, ಪ್ರಜ್ಞೆ ಎಂಬುದು ವಸ್ತುಜನ್ಯ. ಚೈತನ್ಯಮಯವಾದ ಅನುಭಾವದ ಜಗತ್ತಿನಲ್ಲಿ ಸರ್ವಸಮತ್ವಭಾವವಿರುತ್ತದೆ. ವಸ್ತುಮಯವಾದ ಅನುಭವ ಜಗತ್ತಿನಲ್ಲಿ ವಸ್ತುಮೋಹವಿರುತ್ತದೆ. ವಸ್ತುವಿನಲ್ಲಿ ಕೂಡ ಚೈತನ್ಯವಿದೆ. ಆದ್ದರಿಂದ ವಸ್ತುಜಗತ್ತಿನಲ್ಲಿ ಕೂಡ ಚೈತನ್ಯಜಗತ್ತಿನ ಸರ್ವಸಮತ್ವಭಾವ ತರಲು ಸಾಧ್ಯ ಎಂಬುದು ಬಸವಾದಿ ಪ್ರಮಥರ ಅಚಲ ನಂಬಿಕೆಯಾಗಿದೆ.

***

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News