ನೋಟು ರದ್ದತಿ ಅನಗತ್ಯ ಕಸರತ್ತು: ಮನಮೋಹನ್ ಸಿಂಗ್

Update: 2017-09-23 04:17 GMT

ಮೊಹಾಲಿ, ಸೆ. 23: ಆರ್ಥಿಕ ಪ್ರಗತಿ ಕುಂಠಿತಕ್ಕೆ ಕಳೆದ ವರ್ಷದ ನೋಟು ರದ್ದತಿಯ "ಸಾಹಸ" ವೇ ಕಾರಣ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಟೀಕಿಸಿದ್ದಾರೆ. ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿಯೂ ಇದನ್ನು ಮಾಡುವ ಅಗತ್ಯವೇ ಇರಲಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಭಾರತ 1990ರ ದಶಕದಲ್ಲಿ ಜಾರಿಗೆ ತಂದ ಸುಧಾರಣಾ ಪರ್ವದ ಹರಿಕಾರ ಎನಿಸಿಕೊಂಡಿರುವ ಎಂಎಂಎಸ್, ಕೆಲ ಲ್ಯಾಟೀನ್ ಅಮೆರಿಕ ದೇಶಗಳನ್ನು ಹೊರತುಪಡಿಸಿ ನಾಗರಿಕತೆಯ ಯಾವ ದೇಶಗಳಲ್ಲೂ ನೋಟು ರದ್ದತಿ ಯಶಸ್ವಿಯಾಗಿಲ್ಲ ಎಂದು ಅಭಿಪ್ರಾಯಪಟ್ಟರು.

"ನೋಟು ರದ್ದತಿಯ ಅಗತ್ಯವಿತ್ತು ಎಂದು ನನಗೆ ಅನ್ನಿಸುವುದಿಲ್ಲ. ಈ ಸಾಹಸವನ್ನು ಮೆರೆಯುವ ಯಾವುದೇ ತಾಂತ್ರಿಕ ಅಥವಾ ಆರ್ಥಿಕ ಅಗತ್ಯತೆ ಇರಲಿಲ್ಲ" ಎಂದು ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ ಲೀಡರ್‌ಶಿಪ್ ಶೃಂಗದಲ್ಲಿ ಅವರು ಸ್ಪಷ್ಟಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ 2016ರ ನವೆಂಬರ್ 8ರಂದು 500 ಹಾಗೂ 1000 ರೂಪಾಯಿಯ ನೋಟುಗಳನ್ನು ಚಲಾವಣೆಯಿಂದ ರದ್ದು ಮಾಡಿದ್ದರು.
ಆರ್ಥಿಕತೆಯಲ್ಲಿ ಚಲಾವಣೆಯಲ್ಲಿದ್ದ ಶೇಕಡ 86ರಷ್ಟು ನೋಟುಗಳನ್ನು ತೆಗೆಯುವ ಪ್ರಕ್ರಿಯೆ ಕೂಡಾ ದೋಷಯುಕ್ತವಾಗಿದ್ದನ್ನು ನಾವೆಲ್ಲ ಕಂಡಿದ್ದೇವೆ ಎಂದು ಸಿಂಗ್ ನುಡಿದರು.

ನಾನು ಕೆಲ ತಿಂಗಳ ಹಿಂದೆ ನಿರೀಕ್ಷಿಸಿದಂತೆಯೇ ನೋಟುರದ್ದತಿಯಿಂದಾಗಿ ಆರ್ಥಿಕತೆಯ ವೇಗ ಕುಸಿದಿದೆ. ಇದೀಗ ಜಿಎಸ್‌ಟಿ ಕೂಡಾ ಇದಕ್ಕೆ ಸೇರಿಕೊಂಡಿದೆ. ಜಿಎಸ್‌ಟಿ ಧೀರ್ಘಾವಧಿಯಲ್ಲಿ ಉತ್ತಮ ಫಲಿತಾಂಶ ನೀಡಬಹುದಾದರೂ ಅಲ್ಪಾವಧಿಯಲ್ಲಿ ಇರುವ ಸಣ್ಣಪುಟ್ಟ ಲೋಪಗಳನ್ನು ಸರಿಪಡಿಸಿ ಕೊಳ್ಳಬೇಕಾಗುತ್ತದೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News