ಎಚ್ಚರಿಕೆ....ಔಷಧಿಗೂ ಬಗ್ಗದ ‘ಸೂಪರ್ ಮಲೇರಿಯಾ’ ಹರಡುತ್ತಿದೆ!

Update: 2017-09-23 08:44 GMT

ವಿಶ್ವ ಆರೋಗ್ಯ ಸಂಸ್ಥೆಯನುಸಾರ ಮಲೇರಿಯಾ ವಿಶ್ವದಲ್ಲಿಯ ಅತ್ಯಂತ ಸಾಮಾನ್ಯ ಸೋಂಕು ರೋಗವಾಗಿದೆ. ಇದೀಗ ಮಲೇರಿಯಾ ನಿರೋಧಿ ಔಷಧಿಗಳಿಗೂ ಬಗ್ಗದ ‘ಸೂಪರ್ ಮಲೇರಿಯಾ’ದ ಬಗ್ಗೆ ವಿಜ್ಞಾನಿಗಳು ಸುಳಿವು ನೀಡಿದ್ದಾರೆ. ಈ ಮಾರಣಾಂತಿಕ ರೋಗವೀಗ ದಕ್ಷಿಣ ಏಷ್ಯಾದಲ್ಲಿ ವೇಗವಾಗಿ ಹರಡುತ್ತಿದೆ. ಭಾರತಕ್ಕೂ ಕಾಲಿರಿಸಬಹು ದಾದ ದಿನಗಳು ದೂರವಿಲ್ಲ ಎನ್ನುತ್ತಾರೆ ತಜ್ಞರು.

ಆರ್ಟೆಮಿನ್ಸಿನಿನ್ ಮತ್ತು ಪೈಪರ್‌ಕ್ವೀನ್ ಸೊಳ್ಳೆಗಳಿಂದ ಉಂಟಾಗುವ ಈ ಮಲೇರಿಯಾ ರೋಗಕ್ಕೆ ರಾಮಬಾಣಗಳೆಂಬ ಖ್ಯಾತಿಯನ್ನು ಪಡೆದಿದ್ದವು. ಆದರೆ ವಿಶ್ವದ ಕೆಲವು ಭಾಗಗಳಲ್ಲಿಯ ರೋಗಿಗಳಲ್ಲಿ ಈ ಔಷಧಿಗಳಿಗೆ ಪ್ರತಿರೋಧ ಶಕ್ತಿಯನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಇದು ಮಲೇರಿಯಾವನ್ನು ನಿಯಂತ್ರಿಸುವಲ್ಲಿ ಮತ್ತು ನಿರ್ಮೂಲಿಸುವಲ್ಲಿ ದೊಡ್ಡ ಬೆದರಿಕೆ ಆಗಿದೆ ಎಂದು ಅವರು ಭಾವಿಸಿದ್ದಾರೆ. ಇದು ಸಂಭಾವ್ಯ ಬೆದರಿಕೆಯಾಗಿರಬಹುದು. ವಿಶ್ವಾದ್ಯಂತ ಈಗಲೂ ಪ್ರತಿ ವರ್ಷ 4.20 ಲಕ್ಷಕ್ಕೂ ಅಧಿಕ ಜನರು ಮಲೇರಿಯಾ ಮಾರಿಗೆ ಬಲಿಯಾಗುತ್ತಿದ್ದಾರೆ. ಹೀಗಾಗಿ ಮಲೇರಿಯಾಕ್ಕೆ ಗುರಿಯಾಗಿ ಅವಸ್ಥೆ ಪಡುವುದಕ್ಕೆ ಬದಲು ಅದು ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಉತ್ತಮ.

ನಿಮಗೆ ಮಲೇರಿಯಾದ ಅಪಾಯವಿದೆಯೇ ಎನ್ನುವುದನ್ನು ಮೊದಲು ತಿಳಿದುಕೊಳ್ಳಿ. ಮಲೇರಿಯಾದ ಹೆಚ್ಚಿನ ಹಾವಳಿಯಿರುವ ಪ್ರದೇಶಗಳಿಗೆ ನೀವು ಪ್ರವಾಸ ಹೋಗುವು ದಿದ್ದರೆ ಮುನ್ನೆಚ್ಚರಿಕೆ ವಹಿಸಿ. ಅಪಾಯಕಾರಿ ಸೊಳ್ಳೆಗಳ ಕಡಿತಕ್ಕೆ ತೆರೆದುಕೊಳ್ಳುವ ಮುನ್ನ ಮತ್ತು ಬಳಿಕ ಸೂಕ್ತ ಔಷಧಿಯನ್ನು ತೆಗೆದುಕೊಂಡರೆ ಮಲೇರಿಯಾ ಬಾರದಂತೆ ತಡೆಯಲು ಸಾಧ್ಯವಿದೆ. ಇದು ಮಲೇರಿಯಾ ತಡೆಯಲು ಅತ್ಯುತ್ತಮ ವಿಧಾನಗಳಲ್ಲೊಂದಾಗಿದೆ.

ಮಲೇರಿಯಾದ ವಿರುದ್ಧ ಯಾವುದೇ ಲಸಿಕೆಯಿಲ್ಲ. ಮಲೇರಿಯಾ ಚಿಕಿತ್ಸೆಗೆ ನಿಮ್ಮ ವೈದ್ಯರು ಅಂತಹುದೇ ಮಾತ್ರೆಗಳನ್ನು ನೀಡುತ್ತಾರೆ. ನೀವು ಮಲೇರಿಯಾಕ್ಕೆ ತುತ್ತಾಗುವ ಅಪಾಯವಿದ್ದಷ್ಟು ಕಾಲವೂ ನಿಮ್ಮ ವೈದ್ಯರು ನೀಡುವ ಮಾತ್ರೆಗಳನ್ನು ಸೇವಿಸುತ್ತಿರಬೇಕು.

ಸೊಳ್ಳೆಗಳ ಕಡಿತದಿಂದ ತಪ್ಪಿಸಿಕೊಳ್ಳಿ. ರಾತ್ರಿ ಮಲಗುವ ಕೋಣೆಯಲ್ಲಿ ಸೊಳ್ಳೆಪರದೆಗಳ ರಕ್ಷಣೆಯಿದ್ದರೆ ಅಥವಾ ಏರ್ ಕಂಡಿಷನ್ಡ್ ಕೋಣೆಯಾಗಿದ್ದರೆ ಸೊಳ್ಳೆಗಳ ಕಡಿತದಿಂದ ಪಾರಾಗಬಹುದು. ನಿಮ್ಮ ಪರಿಸರದಲ್ಲಿ ನೀರು ನಿಲ್ಲಲು ಅವಕಾಶ ನೀಡಬೇಡಿ, ಏಕೆಂದರೆ ಅದು ಸೊಳ್ಳೆಗಳ ಸಂತಾನ ವೃದ್ಧಿಗೆ ಅತ್ಯುತ್ತಮ ತಾಣವಾಗುತ್ತದೆ.

ಮಲೇರಿಯಾದ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ. ಪ್ರವಾಸದ ವೇಳೆ ಅಥವಾ ಪ್ರವಾಸದ ಬಳಿಕ ನಿಮ್ಮನ್ನು ಅಸ್ವಸ್ಥತೆ ಕಾಡಿದರೆ ಮತ್ತು ಮಲೇರಿಯಾಕ್ಕೆ ತೆರೆದುಕೊಂಡಿರಬಹುದು ಎಂಬ ಚಿಂತೆಯಾಗಿದ್ದರೆ ನೀವು ತಕ್ಷಣ ವೈದ್ಯರನ್ನು ಕಾಣಲೇಬೇಕು. ಸಾಧ್ಯವಾದಷ್ಟು ಶೀಘ್ರ ಚಿಕಿತ್ಸೆ ಪಡೆದುಕೊಳ್ಳುವುದು ಮುಖ್ಯವಾಗಿದೆ. ತೀವ್ರ ಜ್ವರ, ಮೈ ನಡುಗಿಸುವ ಚಳಿ, ಅತಿಯಾಗಿ ಬೆವರುವಿಕೆ, ತಲೆನೋವು, ವಾಂತಿ, ಅತಿಸಾರ ಇತ್ಯಾದಿಗಳು ಮಲೇರಿಯಾದ ಲಕ್ಷಣಗಳಾಗಿವೆ. ಮಲೇರಿಯಾ ಪೀಡಿತ ಪ್ರದೇಶಗಳಿಗೆ ಪ್ರವಾಸದ ಬಳಿಕ ಫ್ಲೂ ಜ್ವರದಂತಹ ಮಲೇರಿಯಾದ್ದಾಗಿರಬಹುದಾದ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರ ದರ್ಶನ ಮಾಡಿ. ನೀವು ಅಂತಹ ಪ್ರದೇಶದಿಂದ ಮರಳಿದ್ದರೂ ಮಲೇರಿಯಾದ ಅಪಾಯ ನಿಮ್ಮನ್ನು ಕಾಡುತ್ತಿರುತ್ತದೆ ಎನ್ನುವುದನ್ನು ಮರೆಯಬೇಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News