ಬೆಂಗಳೂರು: ದುಷ್ಕರ್ಮಿಗಳಿಂದ ಯುವಕನ ಕೊಲೆ
Update: 2017-09-23 18:19 IST
ಬೆಂಗಳೂರು, ಸೆ.23: ಹಳೆ ದ್ವೇಷದಿಂದ ನಾಲ್ವರು ದುಷ್ಕರ್ಮಿಗಳು ಯುವಕನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಕತಾಳಿಪಾಳ್ಯದ ಮಧನ್‌ಕುಮಾರ್(26) ಕೊಲೆಯಾದ ಯುವಕ ಎಂದು ಪೊಲೀಸರು ಗುರುತಿಸಿದ್ದಾರೆ.
ಕೇಬಲ್ ಅಳವಡಿಸುವ ವೃತ್ತಿ ಮಾಡಿಕೊಂಡಿದ್ದ ಮಧನ್ ಕುಮಾರ್ ಮೂರು ದಿನಗಳ ಹಿಂದೆ ನಾಲ್ವರು ದುಷ್ಕರ್ಮಿಗಳು ಬೆನ್ನಗಾನಹಳ್ಳಿ ಕೆರೆ ಬಳಿ ಕರೆದುಕೊಂಡು ಹೋಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಶುಕ್ರವಾರ ಬೆಳಗ್ಗೆ ಮಧನ್ ಕುಮಾರ್ ಶವ ಪತ್ತೆಯಾಗಿದೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಳೆ ದ್ವೇಷದ ಹಿನ್ನೆಲೆಯಲ್ಲಿ ನಾಲ್ವರು ದುಷ್ಕರ್ಮಿಗಳು ಈ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದ್ದು, ಆರೆಪಿಗಳಿಗಾಗಿ ತನಿಖೆ ಕೈಗೊಳ್ಳಲಾಗಿದೆ.