ಸಿಎಂ ಸಿದ್ದರಾಮಯ್ಯ ಚರಿತ್ರೆಯಿಂದ ಕಣ್ಮರೆ: ಡಿ.ವಿ.ಸದಾನಂದ ಗೌಡ
ಬೆಂಗಳೂರು, ಸೆ.23: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳದ ತಕ್ಷಣ ಚರಿತ್ರೆಯಿಂದ ಕಣ್ಮರೆ ಆಗುತ್ತಾರೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು, ಸಂಸದರಿಗೆ ಪ್ರಧಾನಿ ಎದುರು ಮಾತನಾಡಲು ಮೀಟರ್(ಧೈರ್ಯ) ಇಲ್ಲ ಎಂದು ಟೀಕಿಸಿದ್ದ ಮುಖ್ಯಮಂತ್ರಿಗೆ ಈ ಮೇಲಿನಂತೆ ತಿರುಗೇಟು ನೀಡಿದರು.
ಸಿದ್ದರಾಮಯ್ಯ ಏನು ಮಾತನಾಡುತ್ತಾರೆ ಅಂತ ಅವರಿಗೇ ಗೊತ್ತಿಲ್ಲ. ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳುತ್ತಿದ್ದೇವೆ ಎಂಬುದು ಸಿದ್ದರಾಮಯ್ಯರಿಗೆ ಗೊತ್ತಾಗಿಬಿಟ್ಟಿದೆ. ಅವರ ವಿರುದ್ಧ ಕಾಂಗ್ರೆಸ್ ಪಕ್ಷದವರು ಮಾಡುತ್ತಿರುವ ಆರೋಪಗಳನ್ನೆ ತಡೆದುಕೊಳ್ಳಲು ಮುಖ್ಯಮಂತ್ರಿಗೆ ಆಗುತ್ತಿಲ್ಲ. ಇದರಿಂದಾಗಿ ಅವರ ಮನಸ್ಸು ವಿಚಲಿತವಾಗಿದೆ ಎಂದು ವ್ಯಂಗ್ಯವಾಡಿದರು.
ರಾಷ್ಟ್ರ ರಾಜಕಾರಣದಲ್ಲಿ ಬಹಳ ಮುಖ್ಯಮಂತ್ರಿಗಳನ್ನು ನಾನು ನೋಡಿದ್ದೇನೆ. ಆದರೆ, ಈ ರೀತಿ ಬಾಲಿಶ ಹೇಳಿಕೆ ಕೊಡುವವರನ್ನು ನೋಡಿಲ್ಲ. ನೀವು ಕೂಡ ಸಿದ್ದರಾಮಯ್ಯನವರ ಹೇಳಿಕೆಗಳ ಬಗ್ಗೆ ಚರ್ಚೆ ಮಾಡಬೇಡಿ ಎಂದು ಮಾಧ್ಯಮಗಳಿಗೆ ಅವರು ಸಲಹೆ ನೀಡಿದರು.
ಈಗ ಅಧಿಕಾರದಲ್ಲಿದ್ದಾರೆ ಅಂತಾ ಜನರು ಸಿದ್ದರಾಮಯ್ಯ ಮುಖ್ಯಮಂತ್ರಿ ಅನ್ನುತ್ತಿದ್ದಾರೆ. ಅವರು ಅಧಿಕಾರದಿಂದ ಇಳಿದ ತಕ್ಷಣ ಸಿದ್ದರಾಮಯ್ಯ ಹೆಸರೆ ಚರಿತ್ರೆಯಿಂದ ಕಣ್ಮರೆ ಆಗುತ್ತದೆ. ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಸಾಂಪ್ರದಾಯಿಕ ಪ್ರಚಾರ ತಂಡದ ನೇತೃತ್ವದ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿ ಚುನಾವಣೆ ಎದುರಿಸಲು ಸಿದ್ಧವಾಗುತ್ತಿದೆ. ರಾಜಕೀಯ ಪಕ್ಷ ಅಂದರೆ ಸಣ್ಣಪುಟ್ಟ ಕೋಪ-ತಾಪ ಸಹಜ. ಎಲ್ಲವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸವನ್ನು ಕೇಂದ್ರ ಬಿಜೆಪಿ ಮಾಡುತ್ತಿದೆ ಎಂದರು.
ನಾನು ನಾಲ್ಕೂವರೆ ವರ್ಷ ಬಿಜೆಪಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ನನ್ನ ಅವಧಿಯಲ್ಲಿ ಪಕ್ಷದ ಕಾರ್ಯಕರ್ತರು ಒಟ್ಟಾಗಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಅಧ್ಯಕ್ಷ ಅಥವಾ ಮೇಲೆ ಕುಳಿತವರು ಎಲ್ಲರೂ ಒಂದೇ ಅನ್ನುವ ಭಾವನೆ ಬರುವಂತೆ ನೋಡಿಕೊಳ್ಳಬೇಕು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ ನಂತರ ಪಕ್ಷದಲ್ಲಿನ ಎಲ್ಲವೂ ಸುಸೂತ್ರವಾಗಿದೆ. ಇನ್ನಿರುವ ಅಲ್ಪವ್ಯತ್ಯಾಸವನ್ನು ಸರಿ ಮಾಡುತ್ತೇವೆ ಎಂದು ಅವರು ಹೇಳಿದರು.
ಪ್ರಚಾರ ಸಮಿತಿ ಸಾರಥ್ಯ ವಹಿಸಿಕೊಳ್ಳಲು ಸಿದ್ಧ: ರಾಜ್ಯದಲ್ಲಿ ಪ್ರಚಾರ ತಂಡದ ನೇತೃತ್ವವನ್ನು ವಹಿಸಿಕೊಳ್ಳುವ ಕುರಿತು ಈವರೆಗೆ ನನಗೆ ಅಧಿಕೃತವಾಗಿ ಯಾವುದೇ ಸೂಚನೆಗಳು ಬಂದಿಲ್ಲ. ಪಕ್ಷ ಕೊಡುವ ಯಾವುದೇ ಜವಾಬ್ದಾರಿಯನ್ನು ವಹಿಸಿಕೊಳ್ಳಲು ನಾನು ಸಿದ್ಧನಾಗಿದ್ದೇನೆ. ನಾವೆಲ್ಲ ಒಂದಾದರೆ 150 ಅಲ್ಲ 170ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತೇವೆ.
-ಸದಾನಂದಗೌಡ, ಕೇಂದ್ರ ಸಚಿವ