×
Ad

ಬಿಜೆಪಿ ನಾಯಕರಿಗೆ ‘ಮೀಟರ್’ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2017-09-23 20:00 IST

ಬೆಂಗಳೂರು, ಸೆ.23: ರಾಷ್ಟ್ರೀಕೃತ ಹಾಗೂ ಗ್ರಾಮೀಣ ಬ್ಯಾಂಕುಗಳ ಮೂಲಕ ನಮ್ಮ ರಾಜ್ಯದ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಎದುರು ನಿಂತು ಹೇಳಲು ರಾಜ್ಯ ಬಿಜೆಪಿ ನಾಯಕರಿಗೆ ಮೀಟರ್(ಧೈರ್ಯ) ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಶನಿವಾರ ಮಹದೇವಪುರ ವಿಧಾನಸಭಾ ಕ್ಷೇತ್ರದ ಹಗದೂರು ವಾರ್ಡ್‌ನ ರಾಮಗೊಂಡನಹಳ್ಳಿಯಲ್ಲಿ ರಾಜ್ಯ ಸರಕಾರದ ಸಾಧನೆಗಳನ್ನು ಮತದಾರರಿಗೆ ಪರಿಚಯಿಸುವ ‘ಮನೆ ಮನೆಗೆ ಕಾಂಗ್ರೆಸ್’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರೈತರ ಸಾಲ ಮನ್ನಾ ಮಾಡುವಂತೆ ಕೋರಿ ಮನವಿ ಮಾಡಲು ಸರ್ವಪಕ್ಷ ನಿಯೋಗದೊಂದಿಗೆ ಪ್ರಧಾನಿಯನ್ನು ಭೇಟಿ ಮಾಡಿದಾಗ, ಬಿಜೆಪಿ ಮುಖಂಡರಾದ ಅನಂತ್‌ ಕುಮಾರ್, ಸದಾನಂದಗೌಡ, ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಜಗದೀಶ್‌ ಶೆಟ್ಟರ್, ಈಶ್ವರಪ್ಪ ಸೇರಿದಂತೆ ಎಲ್ಲರೂ ಬಾಯಿಗೆ ಬೀಗ ಹಾಕಿಕೊಂಡು ಕೂತಿದ್ದರು.ಅವರೆಲ್ಲ ‘ಗಿರಾಕಿ’ಗಳು ಎಂದು  ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಸರಕಾರವು ಸಹಕಾರ ಬ್ಯಾಂಕ್‌ಗಳ ಮೂಲಕ 22.27 ಲಕ್ಷ ರೈತರು ಪಡೆದಿರುವ 50 ಸಾವಿರ ರೂ.ವರೆಗಿನ ಸಾಲವನ್ನು ಮನ್ನಾ ಮಾಡಿದ್ದೇವೆ. ಇದಕ್ಕಾಗಿ 8165 ಕೋಟಿ ರೂ.ವೆಚ್ಚ ಮಾಡಿದ್ದೇವೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ರೈತರ ಬಗ್ಗೆ ಕಾಳಜಿ ಇದ್ದರೆ ಮೋದಿಯವರಿಗೆ ಹೇಳಿ ರಾಷ್ಟ್ರೀಕೃತ, ಗ್ರಾಮೀಣ ಬ್ಯಾಂಕ್‌ಗಳ ಮೂಲಕ ರೈತರು ಪಡೆದಿರುವ 42 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿಸಲಿ ಎಂದು ಸವಾಲು ಹಾಕಿದರು.

ರೈತರ ಸಾಲ ಮನ್ನಾ ವಿಚಾರದಲ್ಲಿ ಯಡಿಯೂರಪ್ಪದ್ದು ಉತ್ತರನ ಪೌರುಷ. ನಾವು ಮಾಡಿರುವ ರೈತರ ಸಾಲ ಮನ್ನಾವನ್ನು ‘ಲಾಲಿಪಪ್’ ಎಂದು ಬಿಜೆಪಿ ಮುಖಂಡರು ಟೀಕಿಸಿದ್ದಾರೆ. ಹಾಗಾದರೆ, 42 ಸಾವಿರ ಕೋಟಿ ರೂ.ಸಾಲವನ್ನು ಅವರು ಮನ್ನಾ ಮಾಡಿಸಲಿ, ಇಲ್ಲದಿದ್ದರೆ ಯಡಿಯೂರಪ್ಪಗೆ ರೈತರ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ, ಇವರು ರೈತರ ವಿರೋಧಿ ಎನ್ನಬೇಕಾಗುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ ಇರುವ ಢೋಂಗಿ ರಾಜಕಾರಣಿ ಯಡಿಯೂರಪ್ಪರವರು ನನ್ನ ಹಾಗೂ ನನ್ನ ಸಚಿವ ಸಂಪುಟದ ಸಹೋದ್ಯೋಗಿಗಳ ವಿರುದ್ಧ ಚಾರ್ಜ್‌ಶೀಟ್ ಬಿಡುಗಡೆ ಮಾಡುತ್ತೇನೆ ಎಂದು ಹೇಳಿಕೊಂಡೆ ಬರುತ್ತಿದ್ದಾರೆ. ಅದಕ್ಕೆ ಮುಹೂರ್ತ ಯಾಕೆ ಹುಡುಕಬೇಕು. ಯಡಿಯೂರಪ್ಪನವರೆ ವಿವಿಧ ಪ್ರಕರಣಗಳಲ್ಲಿ ಸಿಲುಕಿ ಕಷ್ಟದಲ್ಲಿ ಇದ್ದೀರಿ. ಜೈಲಿಗೆ ಬೇರೆ ಹೋಗಿ ಬಂದಿದ್ದೀರಿ. ಹೀಗಿರುವಾಗ ನಮ್ಮ ಮೇಲೆ ಯಾವ ಚಾರ್ಜ್‌ಶೀಟು ಹಾಕುತ್ತೀರಾ ಎಂದು ಪ್ರಶ್ನಿಸಿದರು.

ನಮ್ಮ ಸರಕಾರ ಕಳೆದ ನಾಲ್ಕು ವರ್ಷಗಳಲ್ಲಿ ಒಂದೇ ಒಂದು ಹಗರಣ ಮಾಡಿಲ್ಲ. ಭ್ರಷ್ಟಾಚಾರದ ಆರೋಪಗಳಿಲ್ಲ. ನಮ್ಮ ಪಕ್ಷದ ಕಾರ್ಯಕರ್ತರು ಎದೆಯುಬ್ಬಿಸಿ ಓಡಾಡುವ ಕೆಲಸ ಮಾಡಿದ್ದೇವೆಯೇ ಹೊರತು ಅವರು ತಲೆ ತಗ್ಗಿಸುವ ಕಾರ್ಯ ಮಾಡಿಲ್ಲ ಎಂದರು.

ಸಚಿವರಾದ ಡಿ.ಕೆ.ಶಿವಕುಮಾರ್, ರಮೇಶ್ ಜಾರಕಿಹೊಳಿ, ಶಾಸಕ ಎಂ.ಟಿ.ಬಿ.ನಾಗರಾಜ್ ಸೇರಿದಂತೆ ಇನ್ನಿತರ ಕಾಂಗ್ರೆಸ್ ನಾಯಕರ ಮೇಲೆ ಆದಾಯ ತೆರಿಗೆ ದಾಳಿ ನಡೆಸಿ ನಮ್ಮನ್ನು ಕುಗ್ಗಿಸುವ ಪ್ರಯತ್ನ ಕೇಂದ್ರ ಸರಕಾರ ಮಾಡುತ್ತಿದೆ. ಆದರೆ, ಬಿಜೆಪಿಯವರನ್ನು ಈ ಬಾರಿಯೂ ರಾಜ್ಯದ ಜನ ತಿರಸ್ಕರಿಸುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಯಡಿಯೂರಪ್ಪ ಮಿಷನ್ 150 ಎಂದರೆ, ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ 150 ಪ್ಲಸ್ ಎನ್ನುತ್ತಾರೆ. ಮತದಾರರನ್ನು ತಮ್ಮ ಜೇಬಿನಲ್ಲಿಟ್ಟುಕೊಂಡು ಇವರು ತಿರುಗಾಡುತ್ತಿದ್ದಾರೆಯೆ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಬಿಜೆಪಿ ಹಾಗೂ ಜೆಡಿಎಸ್ ಏನೆ ತಿಪ್ಪರಲಾಗ ಹಾಕಿದರೂ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್, ಸಂಸದರಾದ ಡಾ.ಕೆ.ರಹ್ಮಾನ್ ಖಾನ್, ಕೆ.ಎಚ್.ಮುನಿಯಪ್ಪ, ಸಚಿವರು, ಶಾಸಕರು, ಕೆಪಿಸಿಸಿ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್, ಪಾಲಿಕೆ ಸದಸ್ಯ ಉದಯ್‌ ಕುಮಾರ್, ನಲ್ಲೂರಹಳ್ಳಿ ನಾಗೇಶ್ ಸೇರಿದಂತೆ ಇನ್ನಿತತರರು ಉಪಸ್ಥಿತರಿದ್ದರು.

ಬೆಂಗಳೂರಿನ 198 ವಾರ್ಡುಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿದೆ. ಮಾರ್ಚ್ ಒಳಗೆ ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿಯೂ ಇಂದಿರಾ ಕ್ಯಾಂಟೀನ್ ಆರಂಭಿಸುತ್ತೇವೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ


ಮನೆ ಮನೆಗೆ ಕಾಂಗ್ರೆಸ್ ಕಿರುಹೊತ್ತಿಗೆಯನ್ನು ಬೂತ್‌ಮಟ್ಟದ 6.50 ಲಕ್ಷ ಕಾರ್ಯಕರ್ತರು 15-20 ದಿನಗಳಲ್ಲಿ ಮತದಾರರ ಮನೆಗಳಿಗೆ ತಲುಪಿಸಬೇಕು. ಮಹದೇವಪುರ ಕ್ಷೇತ್ರದಲ್ಲಿ ಚಾಲನೆ ನೀಡಿರುವ ಕಾರ್ಯಕ್ರಮವು 224 ಕ್ಷೇತ್ರಗಳಲ್ಲಿ ಏಕಕಾಲಕ್ಕೆ ಆರಂಭವಾಗಿದೆ. ಬೆಂಗಳೂರು ನಗರದ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡದಿರುವ ಬಿಜೆಪಿ, ನಮ್ಮ ಸರಕಾರದ ಅಭಿವೃದ್ಧಿ ಬಗ್ಗೆ ಪ್ರಶ್ನಿಸುತ್ತಿದೆ.
-ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ


ರಾಜ್ಯ ಸರಕಾರದ ಸಾಧನೆಗಳ ಬಗ್ಗೆ ಬಿಜೆಪಿ ಜೊತೆ ಬಹಿರಂಗ ಚರ್ಚೆಗೆ ಸಿದ್ಧ. ನವೆಂಬರ್ 1ರಂದು ರಾಜ್ಯದ ಸರ್ವರಿಗೂ ಆರೋಗ್ಯ ಕಲ್ಪಿಸುವ ಯೋಜನೆಯನ್ನು ಮುಖ್ಯಮಂತ್ರಿ ಘೋಷಣೆ ಮಾಡಲಿದ್ದಾರೆ. ಕಚ್ಚಾ ತೈಲ ಬೆಲೆ ಇಳಿಕೆಯಾದರೂ ಪೆಟ್ರೋಲ್-ಡಿಸೇಲ್ ಬೆಲೆ ಇಳಿಕೆ ಮಾಡದಿರಲು ಕಾರಣವೇನು ಎಂಬುದರ ಕುರಿತು ಕೇಂದ್ರ ಸರಕಾರ ಶ್ವೇತಪತ್ರ ಹೊರಡಿಸಲಿ. ಮುಂದಿನ ತಿಂಗಳು ರಾಜ್ಯ ಪ್ರವಾಸ ಕೈಗೊಂಡು ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದ ಕುರಿತು ಪರಿಶೀಲನೆ ನಡೆಸುತ್ತೇನೆ. ಇದರಲ್ಲಿ ಮುಖ್ಯಮಂತ್ರಿ ಸೇರಿದಂತೆ ಎಲ್ಲ ಶಾಸಕರು, ಸಚಿವರು, ಕೆಪಿಸಿಸಿ ಪದಾಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳಬೇಕು.
-ಕೆ.ಸಿ.ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News