ಕನ್ನಡ ಸಂಘಟನೆಗಳಿಂದ ರಾಜಭವನ ಮುತ್ತಿಗೆ, ಬಂಧನ-ಬಿಡುಗಡೆ
ಬೆಂಗಳೂರು, ಸೆ.23: ಮಹಾದಾಯಿ ನೀರಾವರಿ ಸಮಸ್ಯೆ ತಕ್ಷಣವೇ ಇತರ್ಥ್ಯಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಕೂಡಲೇ ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸಿ ರಾಜ ಭವನಕ್ಕೆ ಮುತ್ತಿಗೆ ಹಾಕಲು ಮುಂದಾದ ಕನ್ನಡ ಒಕ್ಕೂಟದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.
ಪ್ರಧಾನ ಅಂಚೆ ಇಲಾಖೆ ವೃತ್ತದ ಮೂಲಕ ರಾಜಭವನ ರಸ್ತೆಯಲ್ಲಿ ತೆರಳುತ್ತಿದ್ದ ವಾಟಾಳ್ ನಾಗರಾಜ್, ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್. ಕುಮಾರ್ ಕನ್ನಡ ಜಾಗೃತಿ ಸೇನೆಯ ರಾಜ್ಯಾಧ್ಯಕ್ಷ ಮಂಜುನಾಥ ದೇವ, ಕನ್ನಡಪರ ಹೋರಾಟಗಾರ ಎಚ್.ವಿ.ಗಿರೀಶ್ ಗೌಡ ಸೇರಿದಂತೆ ಇತರ ಪದಾಧಿಕಾರಿಗಳನ್ನು ಪೊಲೀಸರು ಬಂಧಿಸಿದರು. ನಂತರ ಪ್ರತಿಭಟನಕಾರರ ಪ್ರಾಥಮಿಕ ಮಾಹಿತಿಯನ್ನು ಪಡೆದು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ್ದ ವಾಟಾಳ್ ನಾಗರಾಜ್, ಕಳೆದೆರಡು ವರ್ಷದಿಂದ ಉತ್ತರ ಕರ್ನಾಟಕದಲ್ಲಿ ಮಹಾದಾಯಿ, ಕಳಸ ಬಂಡೂರಿ, ಸಮಸ್ಯೆ ಇತ್ಯರ್ಥಕ್ಕೆ ಸತ್ಯಾಗ್ರಹ ನಡೆಯುತ್ತಿದ್ದರೂ ಕೇಂದ್ರ ಸರಕಾರ ಗಮನ ವಹಿಸುತ್ತಿಲ್ಲ. ಹೀಗಾಗಿ ಪ್ರಕರಣವನ್ನು ದೇಶದ ಗಮನ ಸೆಳೆಯುವ ನಿಟ್ಟಿ ನಲ್ಲಿ ರಾಜ್ಯಭವನ ಮುತ್ತಿಗೆ ಅನಿವಾರ್ಯವೆಂದರು.
ಅ.7ಕ್ಕೆ ಗೋವಾ ಮುತ್ತಿಗೆ ಕೇಂದ್ರ ಸರಕಾರ ಕೂಡಲೆ ಮಹಾದಾಯಿ ನೀರು ಹಂಚಿಕೆಯನ್ನು ವೈಜ್ಞಾನಿಕವಾಗಿ ಬಗೆಹರಿಸಿ, ದೇಶದ ಸಾರ್ವಭೌಮತೆಯನ್ನು ಕಾಪಾಡಬೇಕು. ಇಲ್ಲದಿದ್ದರೆ ಅಕ್ಟೋಬರ್ 7ರಂದು ಕನ್ನಡ ಪರ ಸಂಘಟನೆಗಳು ಗೋವಾ ಮತ್ತಿಗೆ ಹಾಕಲಿದ್ದೇವೆ. ಆ ವೇಳೆ ಸಂಭವಿಸುವ ಯಾವುದೇ ಅನಾಹುತಕ್ಕೆ ಕೇಂದ್ರವೇ ಹೊಣೆಯಾಗಬೇಕಾಗುತ್ತದೆ.
-ವಾಟಾಳ್ ನಾಗಾರಜ್ , ಅಧ್ಯಕ್ಷ ಕನ್ನಡ ಒಕ್ಕೂಟ