ನೈಜೀರಿಯಾ ಪ್ರಜೆಯ ಕಾರಿಗೆ ಬೆಂಕಿ
ಬೆಂಗಳೂರು, ಸೆ.23: ನಗರದಲ್ಲಿ ವಿದೇಶಿ ವಿದ್ಯಾರ್ಥಿಗಳ ಪುಂಡಾಟಿಕೆ ಮುಂದುವರೆದಿದ್ದು, ಮದ್ಯದ ಅಮಲಿನಲ್ಲಿ ನೈಜೀರಿಯಾ ಪ್ರಜೆಯ ಕಾರಿಗೆ ಬೆಂಕಿ ಹಚ್ಚಿರುವ ಘಟನೆ ಇಲ್ಲಿನ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶುಕ್ರವಾರ ನಗರದ ವಡ್ಡರಪಾಳ್ಯದಲ್ಲಿ ಆಫ್ರಿಕನ್ ವಿದ್ಯಾರ್ಥಿಗಳು ಜಗಳ ತೆಗೆದು ನೈಜೀರಿಯಾ ಪ್ರಜೆಯ ಕಾರಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಅಲ್ಲದೆ, ಕೆಲ ದಿನಗಳ ಹಿಂದೆ ಆಫ್ರಿಕನ್ ಪ್ರಜೆಗಳ ಎರಡು ಗುಂಪಿನ ನಡುವೆ ಜಗಳ ನಡೆದಿತ್ತು.
ಮದ್ಯದ ಬಾಟಲಿಯಿಂದ ಹೊಡೆದಾಡಿಕೊಂಡಿದ್ದರು. ಆ ಗಲಾಟೆಯಲ್ಲಿ ಚಿಗೋಚಿ ಎಂಬಾತ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ. ಈ ಬಗ್ಗೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು.
ಇದೇ ದ್ವೇಷಕ್ಕೆ ಚಿಗೋಚಿ ಕಡೆಯವರು ಶುಕ್ರವಾರ ತಡರಾತ್ರಿ ನೈಜೀರಿಯಾ ಪ್ರಜೆ ಎಲ್ವಿನ್ ಮನೆ ಬಳಿ ಹೋಗಿ ಆತನೊಂದಿಗೆ ಜಗಳ ತೆಗೆದು ಗಲಾಟೆ ಮಾಡಿದ್ದಾರೆ. ನಂತರ ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಹೆಣ್ಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.