×
Ad

ಕೃಷಿ ವೇತನ ಆಯೋಗ ರಚನೆಗೆ ಕೆ.ಎಸ್.ಪುಟ್ಟಣ್ಣಯ್ಯ ಆಗ್ರಹ

Update: 2017-09-23 22:09 IST

ಬೆಂಗಳೂರು, ಸೆ.23: ಸರಕಾರಿ ನೌಕರರಿಗೆ ವೇತನ ನಿಗದಿ ಮಾಡಲು ರಚಿಸಿರುವ ವೇತನ ಆಯೋಗದ ಮಾದರಿಯಲ್ಲಿ ರೈತರಿಗಾಗಿ ಕೃಷಿ ವೇತನ ಆಯೋಗ ರಚಿಸಬೇಕು ಎಂದು ಶಾಸಕ, ರೈತ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ ಆಗ್ರಹಿಸಿದ್ದಾರೆ.

ಶನಿವಾರ ನಗರದ ಶಿಕ್ಷಕರ ಸದನದಲ್ಲಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಆಯೋಜಿಸಿದ್ದ ದಕ್ಷಿಣ ಭಾರತ ರೈತ ಮುಕ್ತಿ ಯಾತ್ರಾ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೃಷಿಕರ ಹಿತರಕ್ಷಣೆಯ ಭರವಸೆ ನೀಡಿ ಅಧಿಕಾರ ಚುಕ್ಕಾಣಿ ಹಿಡಿದಿರುವ ಪ್ರಧಾನಿ ಮೋದಿ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಕಳೆದ ಮೂರೂವರೆ ವರ್ಷದಲ್ಲಿ ದೇಶದಲ್ಲಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ದೇಶದಲ್ಲಿ ರೈತರ ಆತ್ಮಹತ್ಯೆಗಳನ್ನು ತಪ್ಪಿಸಬೇಕಾದರೆ ಕೃಷಿ ವೇತನ ಆಯೋಗ ರಚಿಸಬೇಕು ಎಂದು ಒತ್ತಾಯಿಸಿದರು.

ಕೆಟ್ಟ ಮೇಲೆ ಬುದ್ಧಿ ಬಂತು ಅನ್ನುವ ಹಾಗೆ, ದೇಶದಲ್ಲಿ ಕೃಷಿ ಅತಂತ್ರಕ್ಕೆ ಸಿಲುಕಿದ ಬಳಿಕ ದೇಶದ ಎಲ್ಲ ರೈತ ಸಂಘಟಣೆಗಳು ಎಚ್ಚರಗೊಂಡು ಒಂದಾಗಿವೆ. ದೇಶದ ಎಲ್ಲ ರಾಜ್ಯಗಳ ರೈತರಲ್ಲಿ ಯಾತ್ರಾ ಕುರಿತು ಅರಿವು ಮೂಡಿಸಿ, ನ.20 ರಂದು ದೆಹಲಿಯಲ್ಲಿ ನಡೆಯಲಿರುವ ರೈತ ಸಂಸತ್‌ನಲ್ಲಿ ಲಕ್ಷಾಂತರ ರೈತರನ್ನು ಸೇರಿಸಿ ಕೇಂದ್ರ ಸರಕಾರವನ್ನು ನಡುಗಿಸಬೇಕು ಎಂದು ಕರೆ ನೀಡಿದರು.

ಸಂಸದರಿಗೆ ಕೃಷಿ ಕುರಿತು ತರಬೇತಿ ನೀಡಲಿ: ಇಂದಿನ ಸಂಸದರಿಗೆ ಕೃಷಿ ಬಿಕ್ಕಟ್ಟು, ಬರಗಾಲ, ಅತಿವೃಷ್ಟಿ ಎಂದರೆ ಬರಿ ರೈತರಿಗೆ ಸಂಬಂಧಿಸಿದ್ದು ಎಂದು ಸಂಸದರು ವರ್ತಿಸುತ್ತಿದ್ದಾರೆ. ಈ ಸಮಸ್ಯೆಗಳು ರೈತರಿಗೆ ಮಾತ್ರವಲ್ಲ ಇಡೀ ದೇಶಕ್ಕೆ ಸಂಬಂಧಿಸಿದ್ದು. ರೈತ ಆತ್ಮಹತ್ಯೆಗಳೆಂದರೆ ಎರಡೂವರೆ ಗಂಟೆಯ ಸಿನೆಮಾ ಎಂದು ಕೊಂಡಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಎಲ್ಲ ಅಭ್ಯರ್ಥಿಗಳಿಗೆ ಕೃಷಿ ಸಂಬಂಧಿಸಿದ ಸಮಸ್ಯೆಗಳ ಕುರಿತು ತರಬೇತಿ ನೀಡಬೇಕು. ಹೀಗಾದರೂ ದೇಶದಲ್ಲಿ ರೈತರ ಸ್ಥಿತಿ ಸುಧಾರಿಸಬಹುದು ಎಂದರು.

ಜನಪ್ರತಿನಿಧಿಗಳು ಇಂದು ಜಾತಿ-ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಸತ್ಯ ಹೇಳುವವರನ್ನು ಕೊಲೆ ಮಾಡಲಾಗುತ್ತಿದೆ. ದೇಶದಲ್ಲಿ ಸುಳ್ಳು ಹೇಳುವವರು ಖಾಯಂ ನಾಯಕರಾಗಿ ಉಳಿದು ಕೊಳ್ಳುತ್ತಿದ್ದಾರೆ. ಇದನ್ನು ಅರಿತಿರುವ ಮೋದಿ ಬರೀ ಸುಳ್ಳೇ ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯ ಸಂಚಾಲಕ ವಿ.ಎಂ. ಸಿಂಗ್ ಮಾತನಾಡಿ, ರೈತರ ಸಮಸ್ಯೆಗಳನ್ನು ಬಗೆಹರಿಸುವ, ರೈತರನ್ನು ಋಣಮುಕ್ತಿಗೊಳಿಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಮೋದಿ ಬಳಿಕ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಕಾರ್ಪೊರೇಟ್ ವಲಯಕ್ಕೆ ತೋರುತ್ತಿರುವ ಮುತುವರ್ಜಿ ರೈತರ ಮೇಲೆ ತೋರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಫಸಲ್ ಭಿಮಾ ಯೋಜನೆಯಲ್ಲಿ ರೈತನ್ನು ವಂಚಿಸಲಾಗುತ್ತಿದೆ. ಬೆಳೆ ವಿಮೆಗೆ ಎಂದು ರೈತರಿಂದ ಭರಿಸುವ ಮೊತ್ತದಲ್ಲಿ ಬೆಳೆ ನಷ್ಟ ಪರಿಹಾರಕ್ಕೆ ಶೇ. 2ರಷ್ಟು ಹಣವನ್ನು ನೀಡುತ್ತಿಲ್ಲ. ರೈತರ ಹಣವೂ ಕಾರ್ಪೋರೇಟ್ ಕುಳಗಳ ಪಾಲಾಗುತ್ತಿದೆ. ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಲು ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡುವ ಮೂಲಕ ಕೇಂದ್ರ ಸರಕಾರ ರೈತ ವಿರೋಧಿ ನಿಲುವು ತಾಳುತ್ತಿದೆ ಎಂದು ಕಿಡಿಕಾರಿದರು.

ದೇಶದ ಬಹುಪಾಲು ಪ್ರದೇಶದಲ್ಲಿ ಮೂರು ವರ್ಷಗಳಿಂದ ಆವರಿಸಿರುವ ಭೀಕರ ಬರಗಾಲಕ್ಕೆ ರೈತರು ಕಂಗಾಲಾಗಿದ್ದಾರೆ. ರೈತರನ್ನು ಸಾಲದಿಂದ ಸಂಪೂರ್ಣವಾಗಿ ಮುಕ್ತಗೊಳಿಸಲು ಕೂಡಲೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಕನಿಷ್ಠ ಬೆಂಬಲ ನಿಗದಿಪಡಿಸಲು ಎಂ.ಎಸ್.ಸ್ವಾಮಿನಾಥನ್ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಎಐಎಡಬ್ಲೂಯು ಉಪಾಧ್ಯಕ್ಷ ಜಿ.ಎನ್.ನಾಗರಾಜ್, ಕೆಪಿಆರ್‌ಎಸ್ ಉಪಾಧ್ಯಕ್ಷ ಜಿ.ಸಿ.ಬಯ್ಯಿರೆಡ್ಡಿ, ಎಐಕೆಎಸ್‌ಯುನ ಕವಿತಾ ಕುರುಗುಂಟಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಬಾಕ್ಸ್..1
ನ.20ರಂದು ದೆಹಲಿಯಲ್ಲಿ ನಡೆಯಲಿರುವ ‘ಕಿಸಾನ್ ಮುಕ್ತಿ ಸಂಸತ್’ ರೈತ ಆಂದೋಲನಕ್ಕೆ ಹೊಸ ಆಯಾಮ ನೀಡಲಿದೆ. ದೇಶದ 170ಕ್ಕೂ ಹೆಚ್ಚಿನ ರೈತ ಸಂಘಟನೆಗಳಲ್ಲಿ ಐಕ್ಯತೆ ಮೂಡಿಸಲು ಈ ವೇದಿಕೆ ಸಾಕ್ಷಿಯಾಗಲಿದೆ.
 -ಯೋಗೇಂದ್ರ ಯಾದವ್, ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ

ಬಾಕ್ಸ್..2
ದೇಶದಲ್ಲಿ ಬರಗಾಲಕ್ಕೆ ಹೆದರಿ ರೈತರು ಯಾರು ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ. ಕೇಂದ್ರ ಸರಕಾರ ರೂಪಿಸುವ ನೀತಿಗಳೇ ರೈತರನ್ನು ಬಲಿ ಪಡೆಯುತ್ತಿವೆ.
-ಮೀನಾಕ್ಷಿ ಸುಂದರಂ, ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News