​ಭಾರತದ ಸರಣಿ ಗೆಲುವಿಗೆ ಇನ್ನೊಂದೇ ಮೆಟ್ಟಿಲು

Update: 2017-09-23 18:34 GMT

ಇಂದೋರ್, ಸೆ.23:ಪ್ರವಾಸಿ ಆಸ್ಟ್ರೇಲಿಯ ವಿರುದ್ಧ ಸತತ ಎರಡು ಏಕದಿನ ಪಂದ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ರವಿವಾರ ಇಲ್ಲಿ ನಡೆಯಲಿರುವ ಮೂರನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಗೆಲುವಿನೊಂದಿಗೆ ಐದು ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ವಶಪಡಿಸಿಕೊಳ್ಳಲು ನೋಡುತ್ತಿದೆ.

ಕೋಲ್ಕತಾದಲ್ಲಿ ಎರಡನೆ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಗೆಲುವು ಸುಲಭವಾಗಿರಲಿಲ್ಲ. ಆದರೆ ಬೌಲರ್‌ಗಳು ಗೆಲುವು ತಂದು ಕೊಟ್ಟರು. ಭಾರತದ ಬೌಲಿಂಗ್ ವಿಭಾಗ ಬಲಿಷ್ಠವಾಗಿರುವ ಹಿನ್ನೆಲೆಯಲ್ಲಿ ಕಳೆದ ಎರಡು ಪಂದ್ಯಗಳಲ್ಲೂ ಆಸ್ಟ್ರೇಲಿಯ ಸೋಲು ಅನುಭವಿಸಿದೆ.

ಸ್ವಿಂಗ್ ಮಾಸ್ಟರ್ ಭುವನೇಶ್ವರ ಕುಮಾರ್ ಮತ್ತು ಜಸ್‌ಪ್ರೀತ್ ಬುಮ್ರಾ ಆಸ್ಟ್ರೇಲಿಯದ ಅಗ್ರ ಸರದಿಯನ್ನು ನಿಯಂತ್ರಿಸಿದ್ದರು. ಸ್ಪಿನ್ನರ್‌ಗಳಾದ ಕುಲ್‌ದೀಪ್ ಯಾದವ್ ಮತ್ತು ಯುಜುವೇಂದ್ರ ಚಾಹಲ್ ಆಸ್ಟ್ರೇಲಿಯದ ಮಧ್ಯಮ ಸರದಿು ಬ್ಯಾಟಿಂಗ್‌ನ್ನು ದುರ್ಬಲಗೊಳಿಸಿದರು.

ಚೆನ್ನೈನಲ್ಲಿ ಆಸ್ಟ್ರೇಲಿಯದ 8 ಮಂದಿ ದಾಂಡಿಗರು ಎರಡಂಕಿಯ ಸ್ಕೋರ್ ದಾಖಸುವಲ್ಲಿ ಎಡವಿದರು. ಕೋಲ್ಕತಾದಲ್ಲಿ ಕೇವಲ ನಾಲ್ವರು ಮಾತ್ರ 10ಕ್ಕಿಂತ ಹೆಚ್ಚು ಸ್ಕೋರ್ ದಾಖಲಿಸಿದ್ದರು.

ಮೂರನೆ ಪಂದ್ಯದಲ್ಲಿ ಭಾರತ ಜಯಿಸಿದರೆ, ಹ್ಯಾಟ್ರಿಕ್ ಗೆಲುವಿನೊಂದಿಗೆ ಸರಣಿಯನ್ನು ತನ್ನದಾಗಿಸಿಕೊಳ್ಳಲಿದೆ. ಈ ಕಾರಣದಿಂದಾಗಿ ಆಸ್ಟ್ರೇಲಿಯ ಒತ್ತಡಕ್ಕೆ ಸಿಲುಕಿದೆ. ಆಸ್ಟ್ರೇಲಿಯ ಸರಣಿಯನ್ನು ಉಳಿಸಿಕೊಳ್ಳಲು ಇನ್ನು ಉಳಿದಿರುವ ಮೂರು ಪಂದ್ಯಗಳಲ್ಲಿ ಜಯ ಗಳಿಸಬೇಕಾಗಿದೆ. ಈ ಪರಿಸ್ಥಿತಿಯಲ್ಲಿ ಇದು ಕಷ್ಟ. ಆಸ್ಟ್ರೇಲಿಯ ತಂಡದ ನಾಯಕ ಸ್ಟೀವ್ ಸ್ಮಿತ್ ತಂತ್ರ ಫಲ ನೀಡುತ್ತಿಲ್ಲ. ಭಾರತದ ತಂಡದ ಶಕ್ತಿ ಹಂ ಹಂತವಾಗಿ ಅನಾವರಣಗೊಳ್ಳುತ್ತಿದೆ.

ಭಾರತದ ಅಗ್ರ ಸರದಿ ಮೊದಲ ಏಕದಿನ ಪಂದ್ಯದಲ್ಲಿ ವೈಫಲ್ಯ ಅನುಭವಿಸಿತ್ತು. ಎರಡನೆ ಪಂದ್ಯದಲ್ಲಿ ಮಧ್ಯಮ ಸರದಿಯ ಬ್ಯಾಟಿಂಗ್ ಸೊರಗಿತ್ತು. ಆದರೆ ಬೌಲರ್‌ಗಳು ಸಂಘಟಿತ ದಾಳಿಯ ಮೂಲಕ ಭಾರತಕ್ಕೆ ಗೆಲುವು ತಂದು ಕೊಟ್ಟಿದ್ದರು.

ಭಾರತದ ಕೇದಾರ್ ಜಾಧವ್ ಮತ್ತು ಮನೀಷ್ ಪಾಂಡೆ ಮೊದಲ ಎರಡು ಪಂದ್ಯಗಳಲ್ಲಿ ಮಿಂಚಿಲ್ಲ. ಈ ಕಾರಣದಿಂದಾಗಿ ಅವರು ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಮೂರನೆ ಪಂದ್ಯದಲ್ಲಿ ಚೆನ್ನಾಗಿ ಆಡಬೇಕಾಗಿದೆ. ಒಂದು ವೇಳೆ ಅವರು ವಿಫಲರಾದರೆ ಉಳಿದ ಎರಡು ಪಂದ್ಯಗಳಲ್ಲಿ ಅವರಿಗೆ ಅವಕಾಶ ಸಿಗುವುದು ಕಷ್ಟ.

 ಮೂರು ಏಕದಿನ ಪಂದ್ಯಗಳಿಗೆ ತಂಡವನ್ನು ಆಯ್ಕೆ ಮಾಡಲಾಗಿತ್ತು.ಪಾಂಡೆ ಭಾರತ’ಎ’ ತಂಡದಲ್ಲಿ ದಕ್ಷಿಣ ಆಫ್ರಿಕ’ಎ’ ವಿರುದ್ಧದ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಈ ಕಾರಣದಿಂದಾಗಿ ಆಸ್ಟ್ರೇಲಿಯ ವಿರುದ್ಧದ ಸರಣಿಯ ಆರಂಭದ ಮೂರು ಪಂದ್ಯಗಳಲ್ಲಿ ಸ್ಥಾನ ಪಡೆದಿದ್ದರು. 2019ರ ವಿಶ್ವಕಪ್ ವೇಳೆಗ ತಂಡದ ನಂ.4 ಸ್ಥಾನಕ್ಕೆ ಬಲಿಷ್ಠ ಆಟಗಾರನಿಗಾಗಿ ತಂಡದ ಆಯ್ಕೆ ಸಮಿತಿ ಶೋಧ ನಡೆಸುತ್ತಿದೆ, ಪಾಂಡೆ ಅವರನ್ನು ಈ ಸ್ಥಾನಕ್ಕೆ ನೇಮಕ ಮಾಡಲು ಆಯ್ಕೆ ಸಮಿತಿ ನೋಡುತ್ತಿದೆ. ಆದರೆ ಅವರು ವೈಫಲ್ಯದಿಂದಾಗಿ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.

  ವೇಗದ ಬೌಲರ್ ಹಾರ್ದಿಕ್ ಪಾಂಡ್ಯ ಚೆನ್ನೈನಲ್ಲಿ ಬ್ಯಾಟಿಂಗ್‌ನಲ್ಲಿ ಚೆನ್ನಾಗಿ ಪ್ರದರ್ಶನ ನೀಡಿದರು. ಕೋಲ್ಕತಾದಲ್ಲಿ ಬೌಲಿಂಗ್‌ನಲ್ಲಿ ಮಿಂಚಿದ್ದಾರೆ.ಇವರ ಸೇರ್ಪಡೆಯೊಂದಿಗೆ ಭಾರತದ ಆಲ್‌ರೌಂಡರ್ ಕೊರತೆ ನಿವಾರಣೆಯಾಗಿದೆ.

ಇಂದೋರ್‌ನಲ್ಲಿ ಕಳೆದ ವರ್ಷ ನಡೆದ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ(211) ಮತ್ತು ಅಜಿಂಕ್ಯ ರಹಾನೆ(188)ಚೆನ್ನಾಗಿ ಆಡಿದ್ದರು, ಕೊಹ್ಲಿ ದ್ವಿಶತಕ ದಾಖಲಿಸಿದ್ದರು. ಆದರೆ ರಹಾನೆ ದ್ವಿಶತಕ ವಂಚಿಗೊಂಡಿದ್ದರು.

ಆಸ್ಟ್ರೇಲಿಯದ ಬೌಲಿಂಗ್ ಚೆನ್ನಾಗಿದ್ದರೂ, ಭಾರತವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಎಡವಿದೆ.

 ಕುಲ್‌ದೀಪ್ ಹ್ಯಾಟ್ರಿಕ್: ಕಳೆದ ಪಂದ್ಯದಲ್ಲಿ ಕುಲ್‌ದೀಪ್ ಯಾದವ್ ಹ್ಯಾಟ್ರಿಕ್ ಪಡೆದಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಪಡೆದ ಭಾರತ ಮೂರನೆ ಬೌಲರ್ ಎನಿಸಿಕೊಂಡಿದ್ದಾರೆ.

ಸತತ ಮೂರು ಎಸೆತಗಳಲ್ಲಿ ಕುಲ್‌ದೀಪ್ ಯಾದವ್ ಅವರು (54ಕ್ಕೆ 3) ಮೂರು ವಿಕೆಟ್ ಪಡೆದಿದ್ದರು. ಮ್ಯಾಥ್ಯೂ ವೇಡ್, ಅಸ್ಟನ್ ಅಗರ್ ಮತ್ತು ಪ್ಯಾಟ್ ಕಮಿನ್ಸ್ ಅವರಿಗೆ 33ನೆ ಓವರ್‌ನಲ್ಲಿ ಕುಲದೀಪ್ ಯಾದವ್ ಪೆವಿಲಿಯನ್ ಹಾದಿ ತೋರಿಸಿದ್ದರು.

 ಈ ಮೊದಲು ಭಾರತದ ಚೇತನ್ ಶರ್ಮಾ 1987ರಲ್ಲಿ ಮತ್ತು ಕಪಿಲ್ ದೇವ್ 1991ರಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಕಪಿಲ್ ದೇವ್ ಈಡನ್ ಗಾರ್ಡನ್ಸ್‌ನಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಸಾಧನೆ ಮಾಡಿದ್ದರು. ಅದೇ ಕ್ರೀಡಾಂಗಣದಲ್ಲಿ ಕುಲದೀಪ್ ಈ ಸಾಧನೆ ಮಾಡಿದ್ದಾರೆ.

ಸ್ಪಿನ್ನರ್‌ಗಳಾದ ಆರ್.ಅಶ್ವಿನ್ ಮತ್ತು ರವೀಂದ್ರ ಜಡೇಜ ಅನುಪಸ್ಥಿತಿಯಲ್ಲಿ ಯುಜುವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ಮಿಂಚಿದ್ದಾರೆ. ಈ ಅವರು ಸ್ಥಾನ ಭದ್ರಪಡಿಸುವತ್ತ ನೋಡುತ್ತಿದ್ದಾರೆ. ಒಂದು ವೇಳೆ ಇವರು ತಳವೂರಿದರೆ ಅಶ್ವಿನ್ ಮತ್ತು ಜಡೇಜಗೆ ಮುಂದೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

  ಆಸ್ಟ್ರೇಲಿಯದ ಅಗ್ರ ಸರದಿಯಲ್ಲಿ ಆರಂಭಿಕ ದಾಂಡಿಗ ಡೇವಿಡ್ ವಾರ್ನರ್ ಚೆನ್ನಾಗಿ ಆಡಬೇಕಾಗಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ಮಧ್ಯಮ ಸರದಿಯಲ್ಲಿ ಮಿಂಚಬೇಕಾಗಿದೆ. ಐಪಿಎಲ್‌ನಲ್ಲಿ ಕಳೆದ ಕೆಲವು ವರ್ಷಗಳಿಂದ ಇಬ್ಬರು ಆಟಗಾರರು ಆಡುತ್ತಿದ್ದಾರೆ. ಈ ಕಾರಣದಿಂದಾಗಿ ಅವರಿಗೆ ಭಾರತದ ಪಿಚ್‌ಗಳಲ್ಲಿ ಹಲವು ಪಂದ್ಯಗಳಲ್ಲಿ ಆಡಿರುವ ಅನುಭವ ಇದೆ. ನಾಯಕ ಸ್ಟೀವ್ ಸ್ಮಿತ್ ಹೋರಾಟಗಾರ. ಈ ಕಾರಣದಿಂದಾಗಿ ಮೂರನೆ ಪಂದ್ಯದಲ್ಲೂ ಚೆನ್ನಾಗಿ ಆಡಿ ಭಾರತದ ವಿರುದ್ಧ ಗೆಲುವಿಗೆ ಹೋರಾಟ ನಡೆಸುವ ಸಾಧ್ಯತೆ ಇದೆ.

ಆ್ಯರೊನ್ ಫಿಂಚ್ ಗಾಯದ ಕಾರಣದಿಂದಾಗಿ ಕಳೆದ ಎರಡು ಪಂದ್ಯಗಳಲ್ಲಿ ಆಡಿಲ್ಲ. ಮೂರನೆ ಪಂದ್ಯದಲ್ಲಿ ಅವರು ತಂಡದ ಸೇವೆಗೆ ಲಭ್ಯರಾಗುವ ಸಾಧ್ಯತೆ ಇದೆ. ಇಂದೋರ್‌ನ ಮೂರನೆ ಪಂದ್ಯಕ್ಕೆ ಮಳೆಯ ಭೀತಿ ಇದೆ. ಆದರೆ ಅಭಿಮಾನಿಗಳು ಪಂದ್ಯಕ್ಕೆ ಮಳೆಯ ಅಡಚಣೆ ಉಂಟಾಗದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

►ಭಾರತ: ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ಮನೀಷ್ ಪಾಂಡೆ, ಕೇದಾರ್ ಜಾಧವ್, ಎಂ.ಎಸ್.ಧೋನಿ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಭುವನೇಶ್ವರ ಕುಮಾರ್, ಕುಲ್‌ದೀಪ್ ಯಾದವ್, ಯುಜುವೇಂದ್ರ ಚಾಹಲ್, ಜಸ್‌ಪ್ರೀತ್ ಬುಮ್ರಾ, ಲೋಕೇಶ್ ರಾಹುಲ್, ರವೀಂದ್ರ ಜಡೇಜ, ಉಮೇಶ್ ಯಾದವ್ ಮತ್ತು ಮುಹಮ್ಮದ್ ಶಮಿ.

ಆಸ್ಟ್ರೇಲಿಯ: ಸ್ಟೀವ್ ಸ್ಮಿತ್(ನಾಯಕ), ಡೇವಿಡ್ ವಾರ್ನರ್, ಹಿಲ್ಟನ್ ಕಾರ್ಟ್‌ರೈಟ್, ಮಾಥ್ಯೂ ವೇಡ್(ವಿಕೆಟ್ ಕೀಪರ್), ನಥಾನ್ ಕೌಲ್ಟರ್ ನೀಲ್, ಪ್ಯಾಟ್ ಕಮಿನ್ಸ್, ಆ್ಯರೊನ್ ಫಿಂಚ್, ಜೇಮ್ಸ್ ಫಾಕ್ನರ್, ಪೀಟರ್ ಹ್ಯಾಂಡ್ಸ್‌ಕಂಬ್, ಟ್ರಾವಿಸ್ ಹೆಡ್, ಗ್ಲೆನ್ ಮ್ಯಾಕ್ಸ್‌ವೆಲ್, ಆ್ಯಡಮ್ ಝಾಂಪ, ಕೇವೆ ರಿಚರ್ಡ್ಸನ್, ಮಾರ್ಕುಸ್ ಸ್ಟೋನಿಸ್ ಮತ್ತು ಆ್ಯರೊನ್ ಫಿಂಚ್.

ಕುಲ್‌ದೀಪ್ ಮತ್ತೊಮ್ಮೆ ಪ್ರಮುಖ ಪಾತ್ರದ ನಿರೀಕ್ಷೆ

ಇಂದೋರ್‌ನಲ್ಲಿ ನಡೆಯಲಿರುವ 3ನೆ ಏಕದಿನ ಪಂದ್ಯದಲ್ಲಿ ಕುಲ್‌ದೀಪ್ ಮತ್ತೊಮ್ಮೆ ತನ್ನ ಮಿಂಚು ಹರಿಸಲಿದ್ದಾರೆ ಎಂದು ಕ್ಯುರೇಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 ಪಿಚ್ ಬ್ಯಾಟಿಂಗ್‌ಗೆ ಸಹಕಾರಿಯಾಗಲಿದೆ. ದೊಡ್ಡ ಮೊತ್ತದ ಸ್ಕೋರ್‌ನ್ನು ನಿರೀಕ್ಷಿಸಲಾಗಿದೆ. ಆದರೆ, ಸ್ಪಿನ್ನರ್‌ಗಳು ಮಿಂಚಲಿದ್ದಾರೆ ಎಂದು ಮಧ್ಯಪ್ರದೇಶದ ಕ್ಯುರೇಟರ್ ಚೌಹಾನ್ ಕಿವಿಮಾತು ಹೇಳಿದ್ದಾರೆ.

  ಸ್ಪಿನ್ನರ್‌ಗಳಾದ ಕುಲ್‌ದೀಪ್ ಹಾಗೂ ಚಹಾಲ್ ದಾಳಿಯನ್ನು ಎದುರಿಸಲು ಆಸ್ಟ್ರೇಲಿಯದ ಬ್ಯಾಟ್ಸ್‌ಮನ್‌ಗಳು ಒದ್ದಾಡುತ್ತಿದ್ದಾರೆ. ‘‘ಸೆಪ್ಟಂಬರ್ 7 ಮತ್ತು 8ರಂದು ಎರಡು ದಿನಗಳ ರಣಜಿ ಪಂದ್ಯಗಳನ್ನಾಡಲು ಈ ಪಿಚ್‌ನ್ನು ಬಳಸಿದ್ದೆವು. 2 ದಿನಗಳಲ್ಲಿ ಕೂಡಾ 90 ಓವರ್‌ಗಳಲ್ಲಿ ಉತ್ತಮ ರನ್‌ಗಳು ಬಂದಿವೆ’’ ಎಂದು ಚೌಹಾನ್ ತಿಳಿಸಿದರು.

   ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಸವಾಲನ್ನು ಬೆನ್ನಟ್ಟಲು ಹೋಲ್ಕರ್ ಕ್ರೀಡಾಂಗಣ ಅತ್ಯುತ್ತಮವಾಗಿದೆ. 2011ರ ಡಿಸೆಂಬರ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ಅವರು ಜೀವನ ಶ್ರೇಷ್ಠ 219 ರನ್ ದಾಖಲಿಸಿದ್ದರು.

 ಇಂದೋರ್‌ನಲ್ಲಿ ಮಳೆಯ ಭೀತಿಯ ಹಿನ್ನೆಲೆಯಲ್ಲಿ ಗುರುವಾರ ಕ್ರೀಡಾಂಗಣಕ್ಕೆ ಹೊದಿಕೆ ಹಾಕಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News