ಸೂಕಿಯ ಧರ್ಮ-ಸಂಕಟ

Update: 2017-09-24 05:44 GMT

‘‘ಧಾರ್ಮಿಕ ನಂಬಿಕೆಗಳು ಅಥವಾ ಜನಾಂಗೀಯ ಕದನಗಳಿಂದ ಇಬ್ಭಾಗವಾದ ರಾಷ್ಟ್ರವಾಗಿ ಮ್ಯಾನ್ಮಾರ್ ಗುರುತಿಸಿಕೊಳ್ಳುವುದು ನಮಗೆ ಬೇಕಿಲ್ಲ. ನಿರಾಶ್ರಿತರನ್ನು ದೇಶದೊಳಗೆ ಕರೆಸಿಕೊಳ್ಳಲು ನಾವು ಸಿದ್ಧರಿದ್ದೇವೆ’’ ಎಂದು 72 ವರ್ಷದ ಆಂಗ್ ಸಾನ್ ಸೂಕಿ ಹೇಳಿದ್ದಾರೆ.

ರೊಹಿಂಗ್ಯಾ ಮುಸ್ಲಿಮರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ, ಹತ್ಯೆ ಮತ್ತು ವಲಸೆ ಕುರಿತು ಮೌನ ವಹಿಸಿದ್ದ, ಆ ಮೌನಕ್ಕಾಗಿಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಟೀಕೆಗೂ ಗುರಿಯಾಗಿದ್ದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ, ಮ್ಯಾನ್ಮಾರ್‌ನ ಸ್ಟೇಟ್ ಕೌನ್ಸಿಲರ್ ಆಂಗ್ ಸಾನ್ ಸೂಕಿ, ಕೊನೆಗೂ ಬಾಯ್ಬಿಟ್ಟಿದ್ದಾರೆ. ರೊಹಿಂಗ್ಯಾ ನಿರಾಶ್ರಿತರಿಗೆ ವಾಪಸ್ ಬನ್ನಿ ಎಂದು ಕರೆ ಕೊಟ್ಟಿದ್ದಾರೆ. ಇದು ಅಲ್ಪಸಂಖ್ಯಾತ ರೊಹಿಂಗ್ಯಾ ನಿರಾಶ್ರಿತರ ಪಾಲಿಗೆ ಸದ್ಯಕ್ಕೆ ಸಣ್ಣ ಬೆಳಕಾಗಿ ಕಂಡರೂ, ಸೂಕಿಯವರಿಗೆ ದೊಡ್ಡ ತೊಡಕಾಗಿ ಇಕ್ಕಟ್ಟಿಗೆ ಸಿಲುಕಿಸಲಿದೆ. ರೊಹಿಂಗ್ಯಾ ಮುಸ್ಲಿಮರ ಬಗ್ಗೆ ಕನಿಕರ ತೋರಿದರೆ, ಅದು ವಿಶ್ವದ ಕಣ್ಣಲ್ಲಿ ಮಾನವೀಯತೆಯ ಪ್ರತೀಕದಂತೆ ಕಂಡು, ಸೂಕಿ ಮುತ್ಸದ್ದಿ ನಾಯಕಿ ಎನಿಸಿಕೊಳ್ಳಬಹುದು. ನೊಬೆಲ್ ಪ್ರಶಸ್ತಿ ಕೊಟ್ಟಿದ್ದು ಸಾರ್ಥಕವಾಯಿತು ಎಂದು ಕೊಳ್ಳಬಹುದು. ಆದರೆ ಸೂಕಿಯವರ ಈ ನಡೆ ಬೌದ್ಧ ಧರ್ಮೀಯರಾದ ಬರ್ಮೀಯನ್ನರನ್ನು ಬಂಡೆಬ್ಬಿಸಲಿದೆ, ಖಳನಾಯಕಿಯನ್ನಾಗಿ ಮಾಡಲಿದೆ. ಬಲಿಷ್ಠ ಮಿಲಿಟರಿಯ ವಿರೋಧವನ್ನು ಎದುರಿಸಬೇಕಾಗಿದೆ.

ಆ ಕಾರಣಕ್ಕಾಗಿಯೇ ಸೂಕಿ, ನಾಲ್ಕೂವರೆ ಲಕ್ಷ ರೊಹಿಂಗ್ಯಾ ಮುಸ್ಲಿಮರು ಹಡಗುಗಳಲ್ಲಿ ನೀರಿನ ನಡುವೆ ಅನ್ನ-ನೀರು ಇಲ್ಲದೆ ಕೊಳೆಯುತ್ತಾ ಕೂತಿದ್ದರೂ, ಅವರ ಬಗ್ಗೆ ಒಂದೇ ಒಂದು ಮಾತನಾಡಿರಲಿಲ್ಲ. ಈಗ ಮಾತನಾಡಿದ್ದರೂ ಆ ನಿರಾಶ್ರಿತರನ್ನು ರೊಹಿಂಗ್ಯಾರೆಂದು ನಿರ್ದಿಷ್ಟವಾಗಿ ಹೆಸರಿಸಿಲ್ಲ. ಆ ನಿರಾಶ್ರಿತರನ್ನು ಸೂಕಿ, ಬಂಗಾಳಿಗಳೆಂದೇ ಭಾವಿಸಿದ್ದಾರೆ. ಹೀಗೆ ಭಾವಿಸಿರುವುದು, ಅದನ್ನೇ ಸುದ್ದಿ ಮಾಧ್ಯಮಗಳ ಸಂದರ್ಶನಗಳಲ್ಲಿ ವ್ಯಕ್ತ ಪಡಿಸಿರುವುದು- ಬರ್ಮೀಯರ ಭಾವನೆಗಳಿಗೆ ಧಕ್ಕೆ ತರಬಾರದೆಂದು ಹಾಗೂ ಮಿಲಿಟರಿಯನ್ನು ಎದುರು ಹಾಕಿಕೊಳ್ಳಬಾರದೆಂದು. ಏಕೆಂದರೆ, ಸೇನೆಯೊಂದಿಗೆ ಅಧಿಕಾರ ಹಂಚಿಕೆ ಮಾಡಿಕೊಂಡಿರುವ ಸೂಕಿಗೆ ಸೇನೆ ಯನ್ನು ನಿಯಂತ್ರಿಸುವ ಸಂಪೂರ್ಣ ಅಧಿಕಾರ ಇನ್ನೂ ಸಿಕ್ಕಿಲ್ಲ.

ಅಂದಹಾಗೆ ಈ ರೊಹಿಂಗ್ಯಾ ಮತ್ತು ಬರ್ಮೀಯ ನ್ನರ ಜನಾಂಗೀಯ ಸಮಸ್ಯೆ ಸೂಕಿ ಕಾಲದ್ದಲ್ಲ. ಸೂಕಿಯಿಂದ ಸ್ಫೋಟಿಸಿದ್ದೂ ಅಲ್ಲ. ಸೂಕಿ ಹುಟ್ಟಿದಾಗಿನಿಂದಲೂ(1945), ಅಂದರೆ 50ರ ದಶಕದಿಂದಲೂ ಇರುವಂಥದ್ದೆ. ಸೂಕಿಯ ತಂದೆ ಆಂಗ್ ಸ್ಯಾನ್ ತನ್ನ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಯೋಧ. ದೇಶದಿಂದ ಬ್ರಿಟಿಷರನ್ನು ತೊಲಗಿಸಲು ಜಪಾನ್ ನೆರವು ಕೋರಿದ. ಅವರ ಸಹಾಯದಿಂದ ಬ್ರಿಟಿಷರನ್ನು ನಡುಗಿಸಿದ. ಆದರೆ ನೆರವಾಗಲು ಬಂದ ಜಪಾನೀಯರೇ ದೇಶವನ್ನು ಕೈವಶ ಮಾಡಿಕೊಂಡು ತಲೆನೋವಾದರು. ಆಗ ಆಂಗ್ ಸ್ಯಾನ್ ಗೆರಿಲ್ಲಾ ಸೈನ್ಯ ಕಟ್ಟಿ ಜಪಾನೀಯರನ್ನು ಸದೆಬಡಿದ. ಬರ್ಮೀಯನ್ನರ ಕಣ್ಣಲ್ಲಿ ಹೀರೋ ಆದ. ಫಾದರ್ ಆಫ್ ಬರ್ಮಾ ಎನಿಸಿಕೊಂಡ. ಆದರೆ ವಿರೋಧಿಗಳ ಗುಂಡಿಗೆ ಬಲಿಯಾಗಿ ಸಾವನಪ್ಪಿದ.

ಆಗ ಸೂಕಿ ಎರಡು ವರ್ಷದ ಹಸುಳೆ. ತಾಯಿ ನರ್ಸ್. ಆಕೆಯ ಸಹಾಯದಿಂದ ಭಾರತದಲ್ಲಿ ಶಾಲೆ ಕಲಿತು, ನಂತರ ಆಕ್ಸ್‌ಫರ್ಡ್‌ನಲ್ಲಿ ಹೆಚ್ಚಿನ ವ್ಯಾಸಂಗ ಮಾಡಿ, ನ್ಯೂಯಾರ್ಕ್‌ಗೆ ತೆರಳಿ ವಿಶ್ವಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದರು. ಸಂಕೋಚದ ಸ್ವಭಾವದ ಸುಂದರಿ ಸೂಕಿ ಓದುವಾಗಲೇ ಮೆಚ್ಚಿದ್ದ ಮೈಕೆಲ್ ಹಾರಿಸ್‌ನನ್ನು ಮದುವೆಯಾಗಿ ಎರಡು ಮಕ್ಕಳ ತಾಯಿಯೂ ಆದರು. ನಂತರ ಲಂಡನ್ ವಿವಿಯಲ್ಲಿ ಪಿಎಚ್.ಡಿ ಮಾಡಿ, ಸಿಮ್ಲಾದಲ್ಲಿ ಎರಡು ವರ್ಷ ವಾಸವಿದ್ದರು.

1988ರಲ್ಲಿ ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದಾಗ, ನೋಡುವ ನೆಪದಲ್ಲಿ ಸೂಕಿ ತನ್ನ ತಾಯ್ನೆಲ ಬರ್ಮಾಕ್ಕೆ ಬಂದರು. ಆಗ ಬರ್ಮಾ ಮಿಲಿಟರಿ ಆಡಳಿತಕ್ಕೆ ಒಳಪಟ್ಟಿತ್ತು. ಸೈನ್ಯದ ದಬ್ಬಾಳಿಕೆ ತೀವ್ರವಾಗಿ, ದೇಶ ದಿವಾಳಿ ಎದ್ದಿತ್ತು. ಮಿಲಿಟರಿ ಆಡಳಿತದ ವಿರುದ್ಧ ಮಾತನಾಡಿದವರನ್ನು, ದಬ್ಬಾಳಿಕೆಯ ವಿರುದ್ಧ ಪ್ರಜಾಸತ್ತಾತ್ಮಕ ರೀತಿಯಲ್ಲಿ ಹೋರಾಟಕ್ಕಿಳಿದವರನ್ನು ಬರ್ಬರವಾಗಿ ಕೊಂದಿತ್ತು. ಬರ್ಮಾದ ನೈಸರ್ಗಿಕ ಸಂಪತ್ತು ಮಾಯವಾಗಿತ್ತು. ಖನಿಜಗಳು ಖಾಲಿಯಾಗಿತ್ತು. ಪ್ರಪಂಚದ ಬಡ ದೇಶಗಳ ಸಾಲಿನಲ್ಲಿ ಬರ್ಮಾ ದಾಖಲಾಗಿತ್ತು.

ದೇಶದಿಂದ ದೂರವಾಗಿದ್ದ ಸೂಕಿಗೆ, ಬರ್ಮಾದ ಬರ್ಬರತೆ, ಅರಾಜಕತೆ, ಅನ್ಯಾಯ ಸಂಕಟ ಹುಟ್ಟಿಸಿತು. ಅಲ್ಲಿಯವರೆಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ, ರಾಜಕೀಯ-ಚಳವಳಿ-ಹೋರಾಟ ಎಂದರೆ ಏನೆಂದು ಗೊತ್ತಿಲ್ಲದ ಸೂಕಿ, ಅನಿವಾರ್ಯವಾಗಿ ತನ್ನ ಜನರ ರಕ್ಷಣೆಗೆ ನಿಂತರು. ಬಂಡಾಯದ ದನಿಗಳನ್ನು ಒಗ್ಗೂಡಿಸಿದರು. ಬರ್ಮಾದ ಜನರ ಮನ ಗೆದ್ದರು. ಅವರ ನಾಯಕಿಯಾಗಿ ಹೊರಹೊಮ್ಮಿದರು.

ಸೂಕಿಯ ನಡೆಯನ್ನು ಸೂಕ್ಷ್ಮವಾಗಿ ಗಮನಿಸಿದ ಸೈನ್ಯಾಧಿಕಾರಿಗಳು 1989ರಲ್ಲಿ ಬಂಧಿಸಿ, ಗೃಹಬಂಧನದಲ್ಲಿಟ್ಟರು. ಅದನ್ನು ಸಮರ್ಥಿಸಿಕೊಳ್ಳಲು ಚುನಾವಣೆ ಘೋಷಿಸಿದರು. 1990ರ ಸಾರ್ವತ್ರಿಕ ಚುನಾವಣೆಯಲ್ಲಿ ಸೂಕಿ ನೇತೃತ್ವದ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ಪಕ್ಷವು ಪಾರ್ಲಿಮೆಂಟಿನಲ್ಲಿ ಶೇ. 81 ಸ್ಥಾನಗಳನ್ನು ಗೆದ್ದಿತಾದರೂ, 1989ರಿಂದಲೇ ಸೂಕಿಯನ್ನು ಬಂಧನದಲ್ಲಿಟ್ಟಿದ್ದ ಅಲ್ಲಿನ ಮಿಲಿಟರಿ ಆಡಳಿತ, ಅಧಿಕಾರ ಹಸ್ತಾಂತರಕ್ಕೊಪ್ಪದೆ ಚುನಾವಣೆಯ ಫಲಿತಾಂಶವನ್ನು ಅಸಿಂಧುಗೊಳಿಸಿತು. ಹೀಗಾಗಿ ಸೂಕಿ ಸುಮಾರು ಹದಿನೈದು ವರ್ಷಗಳ ಕಾಲ ಸೆರೆಮನೆಯಲ್ಲೇ ಕಳೆಯುವಂತಾಯಿತು.

ಬಂಧನದಲ್ಲಿರುವಾಗಲೇ 1991ರಲ್ಲಿ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿಯನ್ನೊಳಗೊಂಡ ಅನೇಕ ಜಾಗತಿಕ ಪ್ರಶಸ್ತಿಗಳು ಸೂಕಿಯನ್ನು ಹುಡುಕಿಕೊಂಡು ಬಂದು ಸತ್ಕರಿಸಿದವು. ಸೂಕಿ ಜಾಗತಿಕ ವ್ಯಕ್ತಿಯಾಗಿ ಪ್ರಸಿದ್ಧಿ ಮತ್ತು ಪ್ರಚಾರ ಪಡೆಯತೊಡಗಿದರು. ತನಗೆ ಬಂದ ಪ್ರಶಸ್ತಿಗಳ ಹಣವನ್ನೆಲ್ಲಾ ಬರ್ಮಾ ದೇಶದ ಜನರ ಆರೋಗ್ಯ ಮತ್ತು ಶಿಕ್ಷಣದ ಅಭಿವೃದ್ಧಿಗಾಗಿ ವಿನಿಯೋಗಿಸಿ ದೊಡ್ಡ ವ್ಯಕ್ತಿ ಎನಿಸಿಕೊಂಡರು.

ಸೆರೆಮನೆಯಲ್ಲಿದ್ದ ಹದಿನೈದು ವರ್ಷಗಳಲ್ಲಿ ಅವರು ವಿರೋಧ ಪಕ್ಷವಾಗಿ ಕೆಲಸ ಮಾಡಿದರು. 2015ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದು ಮ್ಯಾನ್ಮಾರ್‌ನ ಸ್ಟೇಟ್ ಕೌನ್ಸಿಲರ್ ಅಂದರೆ ಪ್ರಧಾನಮಂತ್ರಿಗೆ ಸಮಾನಾಂತರವಾದ ಹುದ್ದೆಯನ್ನು ಅಲಂಕರಿಸಿದರು. ದುರದೃಷ್ಟಕರ ಸಂಗತಿ ಎಂದರೆ, ಸೂಕಿ ಅಧಿಕಾರಕ್ಕೇರುವ ಸಮಯಕ್ಕೆ ಬರ್ಮಾ ಇನ್ನಷ್ಟು ದಿಕ್ಕೆಟ್ಟ ದರಿದ್ರ ಸ್ಥಿತಿ ತಲುಪಿತ್ತು. ಒಂದು ಕಡೆ ಮಿಲಿಟರಿಯ ದುರಾಡಳಿತ. ಮತ್ತೊಂದು ಕಡೆ ವಲಸಿಗರ ಪರ ನಿಂತ ಬಂಡುಕೋರರ ಆಕ್ರಮಣ. ಬರ್ಮಾ ಪುಟ್ಟ ದೇಶ. ಇಲ್ಲಿ ಬೌದ್ಧ ಧರ್ಮೀಯರೇ ಬಹುಸಂಖ್ಯಾತರು. ಬಾಂಗ್ಲಾದಿಂದ ಬಂದ ವಲಸಿಗರಾದ ಮುಸ್ಲಿಮರು ಅಲ್ಪಸಂಖ್ಯಾತರು. ಸಹನೆ, ಸಹಬಾಳ್ವೆ, ಪ್ರೀತಿಯನ್ನು ಬೋಧಿಸುವ ಬೌದ್ಧ ಧರ್ಮ ಕೂಡ ಈಗ ಮತಾಂಧತೆಯನ್ನು ಒಳಗೆಳೆದುಕೊಂಡಿದೆ. ಮುಸ್ಲಿಮರ ವಿರುದ್ಧ ಕಾದಾಟಕ್ಕೆ ನಿಂತಿದೆ.

ಬರ್ಮಾದಲ್ಲಿ ಸದ್ಯಕ್ಕೆ ಹತ್ತು ಲಕ್ಷ ಮುಸ್ಲಿಮರಿದ್ದು ಅವರಲ್ಲಿ ಸುಮಾರು ಎಂಟು ಲಕ್ಷ ಜನ ಬಾಂಗ್ಲಾದೊಂದಿಗೆ ಗಡಿ ಹಂಚಿಕೊಂಡಿರುವ ಪಶ್ಚಿಮದ ರಖೈನೆ ಪ್ರಾಂತದವರು. ಈ ರಖೈನೆ ಪ್ರಾಂತ ಒಂದು ರೀತಿಯಲ್ಲಿ ಭಾರತದ ಆಕ್ರಮಿತ ಕಾಶ್ಮೀರದಂತೆ. ಇಲ್ಲಿನ ಜನಭಾಷೆಯಲ್ಲಿ ರೂಯಿಂಗಾ ಎಂದರೆ ಬೆಟ್ಟಗುಡ್ಡಗಳ ಪ್ರದೇಶದಿಂದ ಬಂದವರು ಎಂದರ್ಥ. ಹಾಗಾಗಿ ಇವರನ್ನು ರೊಹಿಂಗ್ಯಾ ಎಂದು ಕರೆಯಲಾಗುತ್ತದೆ. ಇವರು ಬರ್ಮಾದ ಬೌದ್ಧರಿಗಿಂತ ಭಾಷೆಯಲ್ಲಿ, ಧರ್ಮದಲ್ಲಿ, ಬದುಕಲ್ಲಿ ಭಿನ್ನರು.

ಬರ್ಮಾದ ಮಿಲಿಟರಿ ಆಡಳಿತ, ಅವರು ನಮ್ಮ ನೆಲದವರಲ್ಲ, ಅವರಿಗೆ ನಮ್ಮ ದೇಶದ ಬಗ್ಗೆ ಪ್ರೀತಿ ಇಲ್ಲ, ಅವರಿಗೆ ನಾಗರಿಕ ಹಕ್ಕು ನೀಡಲು ಸಾಧ್ಯವಿಲ್ಲ ಎಂಬ ವಾದವನ್ನು ಮುಂದಿಟ್ಟು ನಿರ್ಲಕ್ಷಿಸಿದೆ. ಮುಂದುವರಿದು ರೊಹಿಂಗ್ಯಾ ಎನ್ನುವುದು ಇತ್ತೀಚೆಗೆ ಬಳಸಲಾಗುತ್ತಿದೆಯೇ ಹೊರತು ಅದು ಅವರ ಸಾಂಸ್ಕೃತಿಕ ಅಸ್ಮಿತೆ ಅಲ್ಲ ಎನ್ನುತ್ತದೆ. ಅಷ್ಟೇ ಅಲ್ಲ, ನೀವು ಇಲ್ಲಿ ಉಳಿಯಲೇಬೇಕೆಂದರೆ ಬಂಗಾಳಿ ಎಂದು ದಾಖಲಿಸಿ ಎನ್ನುತ್ತದೆ. ಹಾಗಾಗಿ ಅವರು ಬಂಗಾಳಿಗಳಾಗಿ ಗುರುತಿಸಿಕೊಳ್ಳಲಾಗದೆ, ವಲಸಿಗರಾಗಿ ಪೌರತ್ವ ಪಡೆಯಲಾಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ನಿರಂತರ ಹಿಂಸೆಯನ್ನು ಸಹಿಸಲಾರದೆ ದೇಶವನ್ನೇ ತೊರೆದಿದ್ದಾರೆ.

ಆ ಮೂಲ ಮತ್ತು ವಲಸಿಗರ ಕಾದಾಟಕ್ಕೆ ಈಗ ಧರ್ಮ ಥಳಕು ಹಾಕಿಕೊಂಡಿದೆ. ಅದಕ್ಕೆ ಅಶಿನ್ ವಿರತು ಎಂಬ ಬೌದ್ಧ ಭಿಕ್ಕು ಬುದ್ಧನ ಧರ್ಮವನ್ನು ಮೂಲಭೂತವಾದಿ ವ್ಯಾಖ್ಯಾನಗಳಿಗೆ ಸರಿ ಹೊಂದಿಸಿ ಚಳವಳಿಯ ನೇತಾರನಾಗಿ ಹೊರಹೊಮ್ಮಿದ್ದಾರೆ. ಅಶಿನ್‌ರದು, ಮುಸ್ಲಿಮರು ಬೌದ್ಧರಿಗಿಂತ ಹೆಚ್ಚಾಗುವುದನ್ನು ತಪ್ಪಿಸುವ, ಅವರನ್ನು ಶಿಕ್ಷಿಸುವುದನ್ನು ಸಮರ್ಥಿಸುವ ಮೂಲಭೂತವಾದಿ ಧಾರ್ಮಿಕ ಚಳವಳಿ. ಇದು ಬೌದ್ಧರ ಅಸಹನೆಗೆ, ಅಸಹಿಷ್ಣುತೆಯ ಬೆಂಕಿಗೆ ತುಪ್ಪಸುರಿಯುವ, ಕೋಮುಗಲಭೆಗೆ ಪ್ರಚೋದಿಸುವ ಕೆಲಸ ಮಾಡುತ್ತಿದೆ.

ಮತ್ತೊಂದು ಕಡೆ, ಐಎಸ್ ಉಗ್ರರು ವಲಸಿಗ ಮುಸ್ಲಿಮರ ಪರ ನಿಂತು ನಡೆಸುತ್ತಿರುವ ದಾಳಿಗಳಿಂದಾಗಿ, ಅದು ಜನಾಂಗೀಯ ಕದನವಾಗಿ ಮಾರ್ಪಟ್ಟಿದೆ. ಸಾವಿರಾರು ಜನರ ಸಾವು ನೋವಿಗೆ ಕಾರಣವಾಗಿದೆ. ಅಳಿದುಳಿದವರು ನೆರೆಯ ಥಾಯ್ಲೆಂಡ್, ಮಲೇಶ್ಯಾ, ಇಂಡೋನೇಶ್ಯಾಗಳತ್ತ ಮುಖ ಮಾಡಿದ್ದಾರೆ. ಇನ್ನೊಂದಷ್ಟು ಜನ ಬಾಂಗ್ಲಾದೇಶಕ್ಕೂ, ಭಾರತಕ್ಕೂ ಬಂದಿದ್ದಾರೆ. ಎಲ್ಲೂ ಹೋಗಲಾಗದ ಅಸಹಾಯಕರು ಹಸಿವಿನಿಂದ ಕೂತಲ್ಲೇ ಕರಗಿಹೋಗುತ್ತಿದ್ದಾರೆ.

ಬರ್ಮಾದ ಸಮಸ್ಯೆ ಧರ್ಮದ, ರಾಷ್ಟ್ರೀಯತೆಯ, ರಾಜಕಾರಣದ ಹಿತಾಸಕ್ತಿಗಳ ಮೇಲಾಟ. ಇಲ್ಲಿ ಜನಸಾಮಾನ್ಯರು, ಅಮಾಯಕರು ಧರ್ಮಾಂಧರ ಅವಿವೇಕದ ಧರ್ಮಯುದ್ಧಗಳಿಗೆ ಬಲಿಯಾಗಬೇಕಾಗಿದೆ. ಬಹುಸಂಖ್ಯಾತ ಬೌದ್ಧರು ಮೂಲಭೂತವಾದಿಗಳಾಗಿ ಪರಿವರ್ತನೆ ಹೊಂದಿದ್ದಾರೆ. ಹತ್ಯೆಗೊಳಗಾದ ಅಲ್ಪಸಂಖ್ಯಾತ ಮುಸ್ಲಿಮರು ದೇಶಭ್ರಷ್ಟರಾಗುತ್ತಿದ್ದಾರೆ. ತಣ್ಣನೆಯ ಬುದ್ಧನ ಪುಟ್ಟ ಬರ್ಮಾ ಮನುಷ್ಯರ ಸಣ್ಣತನಗಳಿಗೆ ಬಲಿಯಾಗಿ ಕೊತ ಕೊತ ಕುದಿಯುತ್ತಿದೆ. ಬಿಕ್ಕಟ್ಟಿನಿಂದ ಬಿಕ್ಕಟ್ಟಿಗೆ ಜಾರುತ್ತಿದೆ. ಪರಿಹಾರ ಮರೀಚಿಕೆ ಯಾಗುತ್ತಿದೆ. ಇವರನ್ನು ಕಾಪಾಡಲು ಜೀವಕಾರುಣ್ಯದ ಬುದ್ಧನೇ ಬರಬೇಕೇನೋ?

Writer - ಬಸು ಮೇಗಲಕೇರಿ

contributor

Editor - ಬಸು ಮೇಗಲಕೇರಿ

contributor

Similar News