ಚೀನಾದ ನಿಸರ್ಗ ವಿಸ್ಮಯ

Update: 2017-09-24 07:13 GMT

ಜಗತ್ತಿನ ಬೇರೆಡೆ ಕಾಣಸಿಗದ ವಿಶಿಷ್ಟ ಬಗೆಯ ಅರಣ್ಯವೊಂದು ದಕ್ಷಿಣ ಚೀನಾದ ಹನಾನ್ ಪ್ರಾಂತದಲ್ಲಿದೆ. ಜಂಗ್‌ಜಿಯಾಜಿ ಶಿಲಾ ಗೋಪುರ ಕಾಡುಗಳಿವು. ವಿಶ್ವಪಾರಂಪರಿಕ ತಾಣಗಳ ಪಟ್ಟಿಗೆ ಸೇರಿರುವ ಈ ಕಲ್ಲಿನ ಬೆಟ್ಟಗಳು ಗೋಪುರದಂತೆ ಸರಾಸರಿ ಆರುನೂರು ಅಡಿ ಎತ್ತರವಿದ್ದು ಅವುಗಳ ನೆತ್ತಿಯ ಮೇಲೆ ದಟ್ಟವಾಗಿ ಗಿಡಮರಗಳು ಬೆಳೆದು ಅರಣ್ಯರೂಪ ತಾಳಿವೆ.

ಹಲವು ಲಕ್ಷ ವರ್ಷಗಳಿಂದ ಇಲ್ಲಿನ ಪರ್ವತ ಪ್ರದೇಶದ ಭೂಮಿಯು ಸವೆದು, ಮಣ್ಣು ಕೊಚ್ಚಿಹೋಗಿ ನೆಲದಿಂದ ಗೋಪುರ ನಿರ್ಮಿಸಿದಂತೆ ಇವುಗಳು ನಿಸರ್ಗ ಸಹಜವಾಗಿ ನಿರ್ಮಾಣಗೊಂಡಿವೆ. ಸುಮಾರು ಹನ್ನೆರಡು ಸಾವಿರ ಎಕರೆಯಷ್ಟು ವಿಸ್ತೀರ್ಣದ ಈ ಪ್ರದೇಶವನ್ನು ಚೀನಾ ಸರಕಾರವು ರಕ್ಷಿತಾರಣ್ಯವೆಂದು ಪರಿಗಣಿಸಿದ್ದು ಜಂಗ್‌ಜಿಯಾಜಿ ನ್ಯಾಷನಲ್ ಫಾರೆಸ್ಟ್ ಪಾರ್ಕ್ ಎಂದು ಹೆಸರಿಸಿದೆ.

ಇದೀಗ ಪ್ರವಾಸಿಗರ ಆಕರ್ಷಣೆಯ ತಾಣವೂ ಆಗಿದೆ. ಚೀನಾದ ಜಂಗ್‌ಜಿಯಾಜಿ ಶಿಲಾ ಗೋಪುರಗಳನ್ನು ಹೋಲುವ ಹಲವು ನಿಸರ್ಗ ಸಹಜ ರಚನೆಗಳು ಜಗತ್ತಿನ ಹಲವೆಡೆ ಇವೆ. ಫ್ರಾನ್ಸ್ ದೇಶದ ಮಿನೆರ್ವ, ಸ್ಲೋವಾನಿಯಾ ದೇಶದ ಸೋಜಾನ್ ಗುಹೆಗಳು, ಫಿಲಿಫಿನ್ಸ್‌ನ ಪೊರ್ಟೋ ಪ್ರಿನ್ಸೆಸ್ ಭೂಗತ ನದಿಯು ನಿರ್ಮಿಸಿರುವ ಭೂಗರ್ಭದೊಳಗಿನ ಬೃಹತ್ ಕಿಂಡಿಗಳು ಇಂತಹ ಹಲವು ಉದಾಹರಣೆಗಳಾಗಿವೆ. ಆದರೆ ಇವು ಯಾವುವೂ ಚೀನಾದ ಜಂಗ್‌ಜಿಯಾಜಿ ಶಿಲಾ ಗೋಪುರ ಕಾಡುಗಳಂತೆ ರುದ್ರರಮಣೀಯವಾಗಿಲ್ಲ. ವಿಶಿಷ್ಟವೆನಿಸುವುದಿಲ್ಲ.

ಪ್ರಖ್ಯಾತ ಸಿನೆಮಾ ‘ಅವತಾರ್’ನ ಶೂಟಿಂಗ್ ಸಹ ಇದೇ ತಾಣದಲ್ಲಿ ನಡೆದಿತ್ತು ಜಂಗ್‌ಜಿಯಾಜಿ ರಮ್ಯ ತಾಣಕ್ಕೆ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಚೀನಾದ ಪ್ರವಾಸೋದ್ಯಮ ಇಲಾಖೆಯು ಪ್ರವಾಸಿಗರನ್ನು ಸೆಳೆಯಲು ಹಲವು ಆಕರ್ಷಕ ಕ್ರಮಗಳನ್ನು ಕೈಗೊಂಡಿದೆ. ಈ ಶಿಲಾಗೋಪುರಗಳ ತುತ್ತತುದಿಗೇರಲು ಅನುವಾಗುವಂತೆ ಲಿಫ್ಟ್ ಗಳನ್ನು ಅಳವಡಿಸಲಾಗಿದೆ. ಒಮ್ಮೆಗೆ ಐವತ್ತು ಪ್ರವಾಸಿಗರು ನಿಲ್ಲಬಹುದಾದ ಲಿಫ್ಟ್‌ಗಳು ಕೇವಲ ಎರಡು ನಿಮಿಷಗಳಲ್ಲಿ ಒಂದು ಸಾವಿರ ಅಡಿಗಳಷ್ಟು ಎತ್ತರಕ್ಕೆ ಸಾಗಿ ಈ ಶಿಲಾ ಗೋಪುರಗಳ ತುದಿಗೆ ತಲುಪುತ್ತವೆ. ಒಮ್ಮೆ ಈ ಗೋಪುರಾರಣ್ಯಗಳ ತುದಿಗೆ ಹೋದ ಪ್ರವಾಸಿಗರಿಗೆ ಮೈ-ಮನಸ್ಸು ಜುಂ ಎನಿಸುವಂತಹ ದೃಶ್ಯಗಳು ನೋಡಸಿಗುತ್ತವೆ.

ಸುಮಾರು ನೂರಾ ನಲುವತ್ತೊಂಬತ್ತು ಪ್ರಾಣಿ-ಪಕ್ಷಿಗಳು ಈ ಶಿಲಾಗೋಪುರ ಅರಣ್ಯದಲ್ಲಿ ನೆಲೆಸಿವೆ. ಹಲವು ನೀರಿನ ಝರಿಗಳಿದ್ದು ಸ್ಫಟಿಕ ಶುಭ್ರವಾಗಿ ಹರಿಯುತ್ತವೆ. ಜಂಗ್‌ಜಿಯಾಜಿ ಶಿಲಾಗೋಪುರ ಕಾಡುಗಳನ್ನು ನೋಡದವರು ‘ತಾವು ಜಗತ್ತನ್ನೆಲ್ಲಾ ಸುತ್ತಿದ್ದೇವೆ’ ಎಂದು ಹೇಳಲು ಸಾಧ್ಯವಿಲ್ಲ ಎಂಬುದು ಅಲ್ಲಿ ಹೋಗಿ ಬಂದವರು ಹೇಳುವ ಮಾತು.

Writer - ಆಂಟೋನಿ ಡಿಸೋಜ

contributor

Editor - ಆಂಟೋನಿ ಡಿಸೋಜ

contributor

Similar News