ಅಸ್ಸಾಮಿನಲ್ಲಿ ಸಿದ್ಧಗೊಳ್ಳುತ್ತಿದೆ ವಿಶ್ವದ ಅತ್ಯಂತ ಎತ್ತರದ ಬಿದಿರಿನ ದುರ್ಗಾದೇವಿಯ ಮೂರ್ತಿ

Update: 2017-09-24 07:51 GMT

ಅಸ್ಸಾಮಿನಲ್ಲಿ ಸಿದ್ಧಗೊಳ್ಳುತ್ತಿರುವ 100 ಅಡಿ ಎತ್ತರದ ದುರ್ಗಾದೇವಿಯ ಮೂರ್ತಿಯು ವಿಶ್ವದಲ್ಲಿಯ ಅತ್ಯಂತ ಎತ್ತರದ ಬಿದಿರಿನ ಮೂರ್ತಿ ಎಂಬ ಗಿನ್ನೆಸ್ ದಾಖಲೆಯ ಹೆಗ್ಗಳಿಕೆ ಪಡೆಯಲಿದೆ.

ಗುವಾಹಟಿಯ ವಿಷ್ಣುಪುರ ದುರ್ಗಾ ಪೂಜಾ ಸಮಿತಿಯು ಈ ಮೂರ್ತಿಯನ್ನು ಸಿದ್ಧಗೊಳಿಸುತ್ತಿದೆ.ಮೂರ್ತಿಯು ಶೇ.100ರಷ್ಟು ಬಿದಿರಿನದ್ದಾಗಿದೆ. ಇದಕ್ಕೂ ಮೊದಲು ಅತ್ಯಂತ ಎತ್ತರದ ದುರ್ಗಾದೇವಿ ಮೂರ್ತಿಯನ್ನು ಕಳೆದ ವಾರ ಕೋಲ್ಕತಾದಲ್ಲಿ ಸ್ಥಾಪಿಸಲಾಗಿತ್ತು. 83 ಅಡಿ ಎತ್ತರದ ಆ ಮೂರ್ತಿಯನ್ನು ಫೈಬರ್‌ನಿಂದ ನಿರ್ಮಿಸಲಾಗಿದ್ದು, ಕಬ್ಬಿಣದ ರಚನೆಯ ಮೇಲೆ ಅಳವಡಿಸಲಾಗಿತ್ತು. ಆದರೆ ಅಸ್ಸಾಮಿನಲ್ಲಿ ಇಡೀ ಮೂರ್ತಿಯನ್ನು ಬಿದಿರಿನಿಂದಲೇ ಸಿದ್ಧಗೊಳಿಸಲಾಗುತ್ತಿದೆ. ಪ್ಲಾಸ್ಟಿಕ್ ಅಥವಾ ಲೋಹದ ಒಂದೇ ಒಂದು ತುಣುಕನ್ನು ಬಳಸಲಾಗುತ್ತಿಲ್ಲ.

ಕಲಾ ನಿರ್ದೇಶಕ ನೂರುದ್ದೀನ್ ಅಹ್ಮದ್ ಅವರು ಮೂರ್ತಿಯ ವಿನ್ಯಾಸವನ್ನು ಸಿದ್ಧಗೊಳಿಸಿದ್ದು, ಈ ಬೃಹತ್ ಮೂರ್ತಿಯ ತಯಾರಿಕೆಗೆ ಆ.1ರಂದು ಚಾಲನೆ ನೀಡಲಾಗಿತ್ತು. ಮೂರ್ತಿಯ ರಚನೆಯಲ್ಲಿ 40 ಕಲಾವಿದರು ಅಹ್ಮದ್‌ಗೆ ನೆರವಾಗುತ್ತಿದ್ದಾರೆ.

ಅಹ್ಮದ್ 1975ರಲ್ಲಿ ಮೊದಲ ಬಾರಿಗೆ ದುರ್ಗಾದೇವಿ ಮಂಟಪವನ್ನು ರಚಿಸಿದ್ದರು. ತನ್ನ ಕಲಾ ಕಾರ್ಯವು ಮಾನವತೆಗೆ ತನ್ನ ಸೇವೆ ಎಂದು ಅವರು ಭಾವಿಸಿದ್ದಾರೆ.

‘ನಾನು ಮುಸ್ಲಿಮನಾಗಿರುವುದರಿಂದ ಇಂತಹ ವಿಗ್ರಹಗಳನ್ನು ಏಕೆ ರಚಿಸುವುದು ಎಂದು ಹಲವರು ನನ್ನನ್ನು ಪ್ರಶ್ನಿಸುತ್ತಾರೆ. ಆದರೆ ನಾನು 1975ರಿಂದಲೇ ಈ ಕೆಲಸವನ್ನು ಮಾಡುತ್ತಿದ್ದೇನೆ. ಕಲಾವಿದನಿಗೆ ಯಾವುದೇ ಧರ್ಮವಿಲ್ಲ ಮತ್ತು ಮಾನವತೆಯ ಸೇವೆಯೇ ಆತನ ಧರ್ಮ ಮತ್ತು ಕರ್ತವ್ಯವಾಗಿದೆ ಎಂದು ನಾನು ನಂಬಿಕೊಂಡು ಬಂದಿದ್ದೇನೆ ’ಎನ್ನುತ್ತಾರೆ ಅಹ್ಮದ್.

ಗುವಾಹಟಿಯಲ್ಲಿ ಸಿದ್ಧಗೊಳ್ಳುತ್ತಿರುವ ಮೂರ್ತಿಗಾಗಿ ಅವರು ಸುಮಾರು 5000 ಬಿದಿರುಗಳನ್ನು ಬಳಸಿದ್ದಾರೆ.

ಎರಡು ತಿಂಗಳ ಹಿಂದೆ ಕೆಲಸ ಆರಂಭಗೊಂಡಿತ್ತು ಮತ್ತು 110 ಅಡಿ ಎತ್ತರದ ವಿಗ್ರಹ ರಚನೆಗೆ ನಿರ್ಧರಿಸಲಾಗಿತ್ತು. ಅದಕ್ಕಾಗಿ 110 ಅಡಿ ಎತ್ತರದ ಚೌಕಟ್ಟು ಸಹ ನಿರ್ಮಾಣಗೊಂಡಿತ್ತು. ಆದರೆ ಬಲವಾದ ಗಾಳಿಯಿಂದಾಗಿ ಅದು ಕುಸಿದು ಬಿದ್ದಿತ್ತು. ಇದಾದ ಬಳಿಕ ಕೇವಲ ಆರು ದಿನಗಳಲ್ಲಿ ಮೂರ್ತಿಯನ್ನು ಸಿದ್ಧಗೊಳಿಸುವ ಬೃಹತ್ ಸವಾಲು ನಮಗೆದುರಾಗಿತ್ತು. ಇಲ್ಲಿಯ ಎಲ್ಲ ವ್ಯಾಪಾರಿಗಳು ಮತ್ತು ಜನರು ನಮ್ಮ ಬಳಿಗೆ ಬಂದು, ಈಗೇನು ಸಂಭವಿಸಿದೆಯೋ ಅದನ್ನು ಮರೆತುಬಿಡಿ. ಹೊಸದಾಗಿ ಕೆಲಸ ಆರಂಭಿಸೋಣ ಎಂದು ವಿಶ್ವಾಸ ತುಂಬಿದ್ದರು. ನಾವು ಮೂರ್ತಿ ನಿರ್ಮಾಣದ ಕೆಲಸವನ್ನು ಹೊಸದಾಗಿ ಆರಂಭಿಸಿದ್ದು, ಈಗಾಗಲೇ ಶೇ.70ರಷ್ಟು ಕೆಲಸ ಪೂರ್ಣಗೊಂಡಿದೆ ಎಂದು ಸ್ಥಳದಲ್ಲಿ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿರುವ ದೀಪ್ ಅಹ್ಮದ್ ತಿಳಿಸಿದರು.

ನೂರು ಅಡಿ ಎತ್ತರದ ಈ ದುರ್ಗಾದೇವಿಯ ಮೂರ್ತಿಯು ವಿಶ್ವದ ಅತ್ಯಂತ ಎತ್ತರದ ಬಿದಿರಿನ ವಿಗ್ರಹವೆಂಬ ಗಿನ್ನೆಸ್ ದಾಖಲೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News