ಮುಕ್ತಶಾಲೆ : ಇಲ್ಲಿ ವಿಷಯವೇ ಕೇಂದ್ರ ಶಿಶುವೇ ಪ್ರಧಾನ

Update: 2017-09-24 08:53 GMT

ಶಿಕ್ಷಣದ ಕೇಂದ್ರ ಯಾವುದಾಗಬೇಕು? ಕಾಲದಿಂದ ಕಾಲಕ್ಕೆ ಶಿಕ್ಷಣವು ತನ್ನ ವ್ಯಾಪ್ತಿ, ಕೇಂದ್ರ, ವಿಧಾನ ಎಲ್ಲವನ್ನೂ ಬದಲಿಸಿಕೊಳ್ಳುತ್ತಾ ಬಂದಿದೆ. ಇದು ಆಯಾ ಕಾಲದ, ಸಂದರ್ಭಗಳ ಅಗತ್ಯವೂ ಕೂಡ ಹೌದು, ವಿಕಾಸಗೊಳ್ಳುವ ರೀತಿಯೂ ಹೌದು. ಪ್ರಾಚೀನ ಶಿಕ್ಷಣ ಪದ್ಧತಿಗಳೇ ಶ್ರೇಷ್ಠ ಎಂದು ಹಲುಬುವವರು ಈಗಲೂ ಇದ್ದಾರೆ. ಅದರಂತೆ ಗುರುಕುಲ ಎಂದು ಹೆಸರಿಟ್ಟುಕೊಂಡು ಅದೇ ರೀತಿಯಲ್ಲಿ ಶಾಲೆಯನ್ನು ನಡೆಸುವವರೂ ಇದ್ದಾರೆ. ಆಗ ಗುರು ಕೇಂದ್ರಿತ ಶಿಕ್ಷಣ ಪದ್ಧತಿ ಇದ್ದು, ಗುರುವಿನ ಅನುಗ್ರಹದಿಂದ ವಿದ್ಯೆಯನ್ನು ಪಡೆಯುವಂತಹ ಅನಿವಾರ್ಯತೆ ಇತ್ತು. ಹಾಗಾಗಿಯೇ ಗುರು ಬ್ರಹ್ಮ, ವಿಷ್ಣು, ಮಹೇಶ್ವರ ಎನ್ನುತ್ತಾ ಗುರುವೇ ಎಲ್ಲವೂ ಎನ್ನುವುದನ್ನು ಮಂತ್ರವಾಗಿಸಿಕೊಂಡಿದ್ದರು. ಗುರುವಿನ ಆಧಿಪತ್ಯದ ಜೊತೆಗೆ ಅವನ ಕರುಣೆ ಮತ್ತು ಔದಾರ್ಯದಿಂದ ವಿದ್ಯೆಯನ್ನು ಕಲಿಯುವ ಅನಿವಾರ್ಯತೆ ಇತ್ತು. ಗುರುವು ತನಗೆ ಲಾಯಕ್ಕಾದ ಶಿಷ್ಯ ಇವನಲ್ಲ ಎನಿಸಿದರೆ ಅವನನ್ನು ತಿರಸ್ಕರಿಸಬಹುದಾಗಿತ್ತು.

ಅದು ನಂತರದ ದಿನಗಳಲ್ಲಿ ಶಿಶು ಕೇಂದ್ರಿತವಾಯಿತು. ಶಿಶುವೇ ಸಮಾಜದ ವರ್ತಮಾನ ಮತ್ತುಭವಿಷ್ಯವಾದ್ದರಿಂದ ಶಿಕ್ಷಕರಿಗೆ ತರಬೇತಿಗಳನ್ನು ನೀಡುವಾಗ ನೀವು ಅವರ ಮನಸ್ಸನ್ನು ಅರಿತು, ಅವರ ದೌರ್ಬಲ್ಯ ಮತ್ತು ಶಕ್ತಿಗಳನ್ನು ಅರಿತು, ಅವರ ಮಟ್ಟಕ್ಕೆ ಇಳಿದು, ಅವರಲ್ಲಿರುವ ಪ್ರತಿಭೆಯನ್ನು ಮತ್ತು ಅರಿವಿನ ಸಾಮರ್ಥ್ಯವನ್ನು ಹೊರದೆಗೆಯುವವರಾಗಬೇಕು ಎಂದು ತಿಳುವಳಿಕೆ ನೀಡಲಾಯಿತು. ಹಾಗಾಗಿಯೇ ಮಕ್ಕಳ ಮನಶಾಸ್ತ್ರ ಮತ್ತು ಕಲಿಕೆಯ ವಿವಿಧ ವಿಧಾನಗಳನ್ನು ಗ್ರಹಿಸುವಲ್ಲಿ ಗಮನ ಹರಿಸಲಾಯಿತು. ಇಲ್ಲಿ ಮಕ್ಕಳು ಗುರುವಿನ ಧೋರಣೆ ಅಥವಾ ಒಲವು ನಿಲುವುಗಳಿಗೆ ಒಗ್ಗುವುದಿಲ್ಲ ಎಂದು ಯಾವುದೋ ಕಾರಣವನ್ನು ಕೊಟ್ಟು ತಿರಸ್ಕರಿಸುವ ಮಾತೇ ಇಲ್ಲವಾಯಿತು. ಶಿಕ್ಷಕರ ತರಬೇತಿಗಳಲ್ಲಿ ಈ ಧೋರಣೆ ಬಹಳ ದಟ್ಟವಾಯಿತು ಮತ್ತು ನೀವು ಅವರಿಗೆ ತಾತ್ವಿಕವಾಗಿ ಬಲವಾಗಬೇಕು ಮತ್ತು ಮಾರ್ಗದರ್ಶಿಗಳಾಗಬೇಕು, ಮುಖ್ಯವಾಗಿ ಅವರಲ್ಲಿರುವ ಸಾಮರ್ಥ್ಯ ಮತ್ತು ಪ್ರತಿಭೆಗಳನ್ನು ಹೊರತರುವವರಾಗಬೇಕು ಎಂಬ ಸ್ಪಷ್ಟ ನಿದೆರ್ೀಶನಗಳಿಂದ ಶಿಕ್ಷಕರಾಗಿಸುವರು.

ಈಗಲೂ ಶಿಕ್ಷಣ ಪದ್ಧತಿ ಶಿಶುಕೇಂದ್ರಿತವಾಗಿಯೇ ಮುಂದುವರಿದರೂ, ಅದು ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿತು. ಅದೇನೆಂದರೆ ವಿಷಯ ಕೇಂದ್ರಿತ ಶಿಕ್ಷಣ. ವಿಷಯ ಕೇಂದ್ರಿತ ಆಸಕ್ತಿಯಿಂದಲೇ ಆಸಕ್ತರು ತಮಗೆ ಗುರುಗಳನ್ನು ಹುಡುಕುತ್ತಿದ್ದದು, ಸಾಧನೆಗಳನ್ನು ಮಾಡುತ್ತಿರುವುದು ಪುರಾತನ ಕಾಲದಿಂದಲೂ ನಿಜವಾದರೂ ಈಗ ಅದಕ್ಕೆ ಇನ್ನೂ ಸರಿಯಾದ ಆಯಾಮ ದೊರಕಿದೆ. ಶಿಕ್ಷಣದ ಕೇಂದ್ರ ಶಿಶು ಮತ್ತು ಆ ಶಿಶುವು ಅಥವಾ ವಿದ್ಯಾರ್ಥಿಯು ಗುರುಮಂತ್ರವನ್ನು ಹೇಳುತ್ತಾ ತನ್ನ ಕಲಿಕೆಯನ್ನು ಗುರುಕೇಂದ್ರಿತವಾಗಿಸಿಕೊಳ್ಳುವ ಅಗತ್ಯವೇನೂ ಇಲ್ಲದೇ ವಿಷಯ ಕೇಂದ್ರಿತವನ್ನಾಗಿಸಿಕೊಳ್ಳುವುದು ಈ ಸದ್ಯದ ಕಲಿಕೆಯ ಮುಖವಾಗಿದೆ. ಇದು ಸರಿಯಾಗಿದೆ ಕೂಡ. ತಾನು ಗುರುವೆಂಬ ಅಹಂಕಾರದಿಂದಲೇ ಶಿಷ್ಯರನ್ನು ನಾನಾ ರೀತಿಯಲ್ಲಿ ಶೋಷಣೆಗಳನ್ನು ಮಾಡುತ್ತಾ ತನ್ನ ಮೇಲ್ಮೈಯನ್ನು ಸಾಧಿಸಿಕೊಳ್ಳುವ ಶಿಕ್ಷಕರು ತಮ್ಮ ಕೆಲಸದ ಮಹತ್ವಕ್ಕಿಂತ, ತನ್ನ ಸ್ಥಾನಮಾನ ಅಗತ್ಯಕ್ಕಿಂತ ಮಾನ್ಯತೆಯನ್ನು ಕ್ಲೈಮ್ ಮಾಡಿಕೊಳ್ಳುವುದನ್ನು ಅಥವಾ ಅಹಂಭಾವದಲ್ಲಿ ಸಾರಿಕೊಳ್ಳುವುದನ್ನು ಇನ್ನಾದರೂ ನಿಲ್ಲಿಸಬೇಕು. ಹಳೆಯ ಗುರುಕೇಂದ್ರಿತ ಶಿಕ್ಷಣ ಪದ್ಧತಿಯಲ್ಲಿದ್ದ ಗುರುವಿನ ಮೇಲರಿಮೆಯನ್ನು ಇಂದಿನ ಶಿಕ್ಷಕರೂ ಮುಂದುವರಿಸಿಕೊಂಡು ಮಾನ್ಯತೆಯ ಭ್ರಮೆಯಲ್ಲಿದ್ದಾರೆ ಎಂದು ಯಾವ ಮುಜುಗರವೂ ಮತ್ತು ಸಂಕೋಚವೂ ಇಲ್ಲದೇ ಹೇಳುತ್ತೇನೆ. ಈಗ ವಿಷಯವೇನೆಂದರೆ, ಯಾವ ಗುರುವಿನ ಅನುಗ್ರಹ ಎಂದೇನೂ ತಲೆ ಕೆಡಿಸಿಕೊಳ್ಳದೇ, ಶಾಲೆಯ ಹೇರಿಕೆಯ ಶಿಸ್ತಿನ ಬಿಗಿತವಿಲ್ಲದೇ ವಿಷಯ ಕೇಂದ್ರಿತವಾಗಿ ಮತ್ತು ಶಿಶು ಪ್ರಧಾನವಾಗಿ ಶಿಕ್ಷಣವನ್ನು ಪಡೆಯುವ ರೀತಿ ನೀತಿಗಳನ್ನು ತಿಳಿಯೋಣ.
ಕಲಿಕೆಯ ಸ್ವಾತಂತ್ರ
ಎನ್‌ಐಒಎಸ್, ನ್ಯಾಷನಲ್ ಇನ್‌ಸ್ಟ್ಟಿಟ್ಯೂಟ್ ಆಪ್ ಓಪನ್ ಸ್ಕೂಲಿಂಗ್. ಇಲ್ಲಿ ಮಗುವಿಗೆ ತನಗೆ ಬೇಕಾದ್ದನ್ನು ಕಲಿಯುವ ಸ್ವಾತಂತ್ರ್ಯವೇ ಪ್ರಧಾನ. ಏನನ್ನು ಕಲಿಯಬೇಕು? ಯಾವಾಗ ಕಲಿಯಬೇಕು? ಹೇಗೆ ಕಲಿಯಬೇಕು ಎಂಬುದನ್ನು ವಿದ್ಯಾರ್ಥಿಯೇ ನಿರ್ಧರಿಸಿ, ಪರೀಕ್ಷೆಯನ್ನು ಯಾವಾಗ ಪಡೆಯಬೇಕು ಎಂಬುದನ್ನೂ ತಾನೇ ನಿರ್ಧರಿಸುತ್ತಾನೆ. ಇಲ್ಲಿ ಕಲಿಕೆಯ ಸ್ಥಳ, ಕಲಿಕೆಯ ಸಮಯ ಮತ್ತು ಕಲಿಕೆಯ ವೇಗ ಸಾಮರ್ಥ್ಯದ ನಿರ್ಬಂಧವಿಲ್ಲ.

ವಿದ್ಯಾರ್ಥಿಯು ತನ್ನ ಆಸಕ್ತಿ ಮತ್ತು ಮುಂದೆ ತಾನು ಏನಾಗಬೇಕು ಅಥವಾ ಯಾವ ವಿಷಯದಲ್ಲಿ ಮುಂದುವರಿಯಬೇಕು ಎಂದು ಪಡುವ ಆಸೆಗೆ ಅನುಗುಣವಾಗಿ ವಿಷಯಗಳನ್ನು ಆಯ್ದುಕೊಳ್ಳುವ ಸ್ವಾತಂತ್ರ ಇರುತ್ತದೆ. ಉದಾಹರಣೆಗೆ, ಪತ್ರಿಕೋದ್ಯಮವನ್ನೋ, ಮಾನವಶಾಸ್ತ್ರವನ್ನೋ ಅಥವಾ ಇತಿಹಾಸ ಅಧ್ಯಯನವನ್ನೋ ಮಾಡುವವರಿಗೆ ಗಣಿತ, ರಸಾಯನಶಾಸ್ತ್ರ ಅಥವಾ ಭೌತಶಾಸ್ತ್ರ ಇತ್ಯಾದಿ ಬೇಡದ ವಿಷಯಗಳನ್ನು ಪ್ರಾರಂಭದಲ್ಲಿಯೇ ಕೈ ಬಿಟ್ಟು ತಮ್ಮ ಅಧ್ಯಯನ ಮತ್ತು ವೃತ್ತಿಗೆ ಪೂರಕವಾಗಿರುವಂತಹ ಸಮಾಜ ಶಾಸ್ತ್ರ, ಭಾರತದ ಸಂಸ್ಕೃತಿ ಮತ್ತು ಇತಿಹಾಸ ಅಧ್ಯಯನ ಇತ್ಯಾದಿಗಳನ್ನು ಮಾತ್ರವೇ ತೆಗೆದುಕೊಳ್ಳಬಹುದು. ಇದರಿಂದ ತಮ್ಮ ಆಸಕ್ತಿಗೆ ಒಗ್ಗದ ಹಾಗೂ ತಮ್ಮ ವೃತ್ತಿಗೆ ಮತ್ತು ಹೆಚ್ಚಿನ ಅಧ್ಯಯನಕ್ಕೆ ಬೇಡದ ವಿಷಯಗಳನ್ನು ಕಡ್ಡಾಯವಾಗಿ ಓದುವುದರಿಂದ ತಪ್ಪಿಸಿಕೊಳ್ಳಬಹುದು. ಅಗತ್ಯಕ್ಕೆ ಮಾನ್ಯತೆ, ಅನಗತ್ಯಕ್ಕೆ ವಿದಾಯ
ನಾನಾ ಕಾರಣಗಳಿಂದ ಶಾಲೆಗಳಿಗೆ ಹೋಗಲಾಗದ ಮಕ್ಕಳು ವಿಷಯ ಕೇಂದ್ರಿತವಾಗಿ ಕಲಿಕೆಯನ್ನು ಹೊಂದಬಹುದು. ತಮ್ಮ ಶಿಕ್ಷಣವನ್ನೂ ಮುಂದುವರಿಸುವುದಲ್ಲದೇ, ಮುಂದಿನ ಉನ್ನತ ವ್ಯಾಸಂಗಕ್ಕೂ ಪ್ರಾಥಮಿಕ ಹಂತದಿಂದಲೇ ಳಪಾಯವನ್ನು ಹಾಕಿಕೊಳ್ಳಬಹುದು.
ನನಗೆ ತಿಳಿದ ಒಂದು ವಿದ್ಯಾರ್ಥಿನಿ ಶಿಕ್ಷಣ ಸಂಸ್ಥೆ ನಡೆಸುವ, ಪತ್ರಿಕೋದ್ಯಮದ ಬಗ್ಗೆ ಒಲವಿರುವ ಹಾಗೂ ಕಲೆ ಮತ್ತು ಸಾಹಿತ್ಯದ ಬಗ್ಗೆ ಅತೀವ ಆಸಕ್ತಿಯಿದ್ದು, ಅವಳು ಈಗ ಮನಶಾಸ್ತ್ರ, ಸಮಾಜ ಶಾಸ್ತ್ರ, ಭಾರತದ ಸಂಸ್ಕೃತಿ ಮತ್ತು ಪರಂಪರೆ, ಕಲೆಯನ್ನು ತೆಗೆದುಕೊಂಡಿದ್ದಾಳೆ. ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಗಳು ಜೊತೆಗಿವೆ. ಅವಳೀಗ ಸಾಮಾನ್ಯ ತರಗತಿಗಳ ಮಾನದಂಡದ ಪ್ರಕಾರ ಏಳನೆ ತರಗತಿ. ಈಗ ಅವಳಿಗೆ ಮುಂದೆ ಲಲಿತ ಕಲೆ ಅಥವಾ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟಂತಹ ಯಾವುದೇ ವಿಷಯದಲ್ಲಿ ತನ್ನ ಅಧ್ಯಯನ ಮುಂದುವರಿಸಿದರೂ, ಈಗಾಗಲೇ ವಿಷಯ ಕೇಂದ್ರಿತವಾಗಿ ಮನಶಾಸ್ತ್ರ, ಸಮಾಜ ಶಾಸ್ತ್ರಗಳನ್ನು ಕಲಿಯಲು ಸಾಧ್ಯ. ನಿಜಕ್ಕೂ ಆಶ್ಚರ್ಯದ ಸಂಗತಿ ಎಂದರೆ, ಮನಶಾಸ್ತ್ರ ಮತ್ತು ಮಾನವಶಾಸ್ತ್ರದ ಬಗ್ಗೆ ಯಾವ ವಿಷಯಗಳನ್ನೂ ಸಾಮಾನ್ಯ ಪಠ್ಯ ಕ್ರಮದಲ್ಲಿ ಅಳವಡಿಸದೇ ಇರುವುದು. ಅವಳ ತಂಗಿ ವೈದ್ಯಕೀಯ ಮತ್ತು ಇತರ ವಿಜ್ಞಾನ ಸಂಬಂಧದ ವಿಷಯಗಳಲ್ಲಿ ಆಸಕ್ತಿ ವಹಿಸಿರುವುದರಿಂದ ಗಣಿತ, ವಿಜ್ಞಾನ, ಮನಶಾಸ್ತ್ರ ಇತ್ಯಾದಿ ವಿಷಯಗಳನ್ನು ತೆಗೆದುಕೊಂಡಿದ್ದಾಳೆ. ಅವಳು ಸಾಮಾನ್ಯ ತರಗತಿಗಳ ಮಾನದಂಡದ ಪ್ರಕಾರ ನಾಲ್ಕನೆ ತರಗತಿ.
ಹೀಗೆ ತಮ್ಮ ಕಲಿಕೆಯ ಆಸಕ್ತಿಯ ಪ್ರಕಾರ ಅವರು ತಮಗೆ ಬೇಕಾದ ವಿಷಯವನ್ನು ಪ್ರಾಥಮಿಕ ಹಂತದಿಂದಲೇ ತೆಗೆದುಕೊಂಡು ಅದರಲ್ಲಿ ಸಂಪೂರ್ಣ ಹಿಡಿತವನ್ನು ಸಾಧಿಸುವ ಮತ್ತು ಅಧ್ಯಯನವನ್ನು ಗಾಢ ಗೊಳಿಸಿಕೊಳ್ಳುವ ರೀತಿಯನ್ನು ಎನ್‌ಐಒಎಸ್‌ನಲ್ಲಿ ಕಾಣಬಹುದಾಗಿದೆ.
ಕರ್ನಾಟಕದಲ್ಲಿ ಎನ್‌ಐಒಎಸ್

ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ನಿಮ್ಮ ಮಕ್ಕಳ ಕಲಿಕೆಗೆ ಎನ್‌ಐಒಎಸ್ ನೆರವಾಗುತ್ತದೆ. ಇಂಟರ್ನೆಟ್‌ನಲ್ಲಿ ಬೇಕಾದ ಎಲ್ಲಾ ಮಾಹಿತಿಯೂ ದೊರಕುತ್ತದೆ. ಅಷ್ಟೇ ಅಲ್ಲ, ಎಲ್ಲಾ ಅಧ್ಯಯನದ ಪಠ್ಯ ಸಾಮಗ್ರಿಯೂ ದೊರಕುತ್ತದೆ. ಮಗುವು ತನ್ನ ಆಸಕ್ತಿ ಮತ್ತುಸಾಮರ್ಥ್ಯದ ಪ್ರಕಾರ ಕಲಿಯಬಹುದು. ಕೆಲವು ಶಾಲೆಗಳಲ್ಲಿ ಸುಲಿಗೆಗೆ ಒಳಗಾಗುವುದರಿಂದಲೂ ಮುಕ್ತಿಯನ್ನು ಹೊಂದಬಹುದು. ನಮ್ಮ ಕರ್ನಾಟಕದಲ್ಲಿ ಮಲ್ಲೇಶ್ವರಂನಲ್ಲಿ ಪಿಯು ಬೋರ್ಡ್‌ನ ನಾಲ್ಕನೆ ಅಂತಸ್ತಿನಲ್ಲಿ ಎನ್‌ಐಒಎಸ್ ಕಾರ್ಯಾಲಯವಿದ್ದು, ಅದರ ನಿರ್ದೇಶಕರಾಗಿ ಚಂದ್ರಶೇಖರ್ ಇದ್ದಾರೆ. ಮೆದು ಭಾಷೆಯ ಮತ್ತು ಸಕಾರಾತ್ಮಕ ಧೋರಣೆಯ ಅವರು ಮುಕ್ತಶಾಲೆಯ ಕಲಿಕೆಯ ಆಳ ಮತ್ತು ಎತ್ತರಗಳನ್ನು ಬಹು ವಿಸ್ತಾರವಾಗಿ ತಿಳಿಸಿಕೊಡುತ್ತಾರೆ. ಅಲ್ಲದೇ ಇದಕ್ಕೆ ಸಂಬಂಧಪಟ್ಟಂತೆ ಅಗತ್ಯವಿರುವ ಉಪನ್ಯಾಸಗಳನ್ನಾಗಲಿ ಮತ್ತು ತಿಳುವಳಿೆಗಳನ್ನಾಗಲಿ ಅವರು ಕೊಡುತ್ತಾರೆ.

ಮಗುವಿನ ನೋಂದಣಿ ಆನ್‌ಲೈನ್‌ನಲ್ಲೇ ಮಾಡುವುದು. ನಂತರ ಮಗುವಿನ ಆಯ್ಕೆಯ ಎಲ್ಲಾ ವಿಷಯಗಳ ಪಠ್ಯಗಳು ಆನ್‌ಲೈನ್‌ನಲ್ಲಿಯೇ ದೊರಕುವುದು. ಮಗುವು ತನ್ನ ಓದಿನ ಪ್ರಕಾರ ಒಂದೊಂದಾಗಿ ಡೌನ್ ಲೋಡ್ ಮಾಡಿಕೊಂಡು ಓದಿಕೊಳ್ಳಬಹುದು. ಹಾಗೆಯೇ, ಈ ಮುಕ್ತ ಶಾಲೆಯ ಕಲಿಕೆಗೆ ಸಂಬಂಧಪಟ್ಟಂತೆ ಅಧ್ಯಯನ ಕೇಂದ್ರ, ಕಲಿಕೆಗೆ ಪೂರಕವಾಗಿರುವ ಪ್ರಾದೇಶಿಕ ಕೇಂದ್ರಗಳು, ಸೌಲಭ್ಯ ಕೇಂದ್ರಗಳೂ ಕೂಡ ಇವೆ. ಇವು ನಿಮ್ಮ ಮಗುವಿನ ಮುಕ್ತಶಾಲೆಯ ಕಲಿಕೆಗೆ ಪೂರಕವಾಗಿ ಕೆಲಸ ಮಾಡುವವು. ಕೆಲವು ವಿಷಯಗಳಿಗೆ ಪ್ರಾಯೋಗಿಕ ತರಗತಿಗಳ, ತರಬೇತಿಗಳ ಅಗತ್ಯವಿರುವುದನ್ನು ಇವು ಪೂರೈಸುತ್ತವೆ. ಹಾಗೆಯೇ ಇಲ್ಲಿನ ಈ ಪೂರಕ ಕೇಂದ್ರಗಳು ಮಾರ್ಗದರ್ಶನ ಮಾಡುತ್ತವೆಯೇ ಹೊರತು ಶಾಲೆಯ ರೀತಿಯಲಿಲ್ಲ ಬೋಧನೆ ಮಾಡುವುದಿಲ್ಲ.

ಸೆಕೆಂಡರಿ ಮತ್ತು ಸೀನಿಯರ್ ಸೆಕೆಂಡರಿ ಎಂಬ ಎರಡು ಹಂತಗಳಿದ್ದು, ಸೆಕೆಂಡರಿ ಎಂದರೆ ಹದಿನಾಲ್ಕು ವರ್ಷಗಳ ನಂತರ ತೆಗೆದುಕೊಳ್ಳುವ ಪರೀಕ್ಷೆಯಾಗಿದ್ದು, ಸೀನಿಯರ್ ಸೆಕೆಂಡರಿಯು ಹದಿನಾರು ವರ್ಷಗಳ ನಂತರ ತೆಗೆದುಕೊಳ್ಳುವ ಪರೀಕ್ಷೆಯಾಗಿರುತ್ತದೆ. ಇವು ಕ್ರಮವಾಗಿ ಎಸೆಸೆಲ್ಸಿ ಮತ್ತು ಪಿಯುಸಿಗಳ ಮಟ್ಟದ್ದಾಗಿರುತ್ತದೆ. ಈ ಪರೀಕ್ಷೆಯಿಂದ ದೊರಕುವ ಅರ್ಹತಾ ಪತ್ರವು ಸಿಬಿಎಸ್‌ಸಿ ಸಿಲಬಸ್‌ನ ಮಟ್ಟದ್ದೇ ಆಗಿರುತ್ತದೆ. ಸ್ಟೇಟ್ ಅಥವಾ ಸಿಬಿಎಸ್‌ಸಿ ಮಾನದಂಡದ ಮಾನ್ಯತೆ ಇದಕ್ಕಿದೆ. ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ಒರಿಯಾ, ತೆಲುಗು, ಗುಜರಾತಿ, ತಮಿಳು ಮತ್ತು ಮಲಯಾಳಂ ಭಾಷೆಯ ಮಾಧ್ಯಮಗಳಲ್ಲಿ ಸೆಕೆಂಡರಿ ಕೋರ್ಸ್ (ಹತ್ತನೆ ತರಗತಿಗೆ ಸಮಾನವಾದ) ಮಾಡಬಹುದು. ಕನ್ನಡ ಐಚ್ಛಿಕ ಭಾಷೆಯಾಗಿ ತೆಗೆದುಕೊಳ್ಳಬಹುದು. ಆದರೆ ಮಾಧ್ಯಮ ಇಲ್ಲ. ಮುಂದಿನ ದಿನಗಳಲ್ಲಿ ಕನ್ನಡ ಮಾಧ್ಯಮವೂ ಮುಕ್ತಶಾಲೆಯಲ್ಲಿ ಇದ್ದರೆ ಅನೇಕ ವರ್ಗಗಳ ಮಕ್ಕಳಿಗೆ ವರದಾನವಾಗುತ್ತದೆ. ಇಂಗ್ಲಿಷ್, ಹಿಂದಿ, ಒರಿಯಾ, ಬೆಂಗಾಲಿ, ಗುಜರಾತಿ ಮತ್ತು ಉರ್ದು ಮಾಧ್ಯಮಗಳಲ್ಲಿ ಸೀನಿಯರ್ ಸೆಕೆಂಡರಿ (ಪಿಯುಸಿ) ಕೋರ್ಸ್‌ಗಳಿವೆ. ಕನ್ನಡವೂ ಸೇರಿದಂತೆ, ಹಿಂದಿ, ಇಂಗ್ಲಿಷ್, ಉರ್ದು, ಸಂಸ್ಕೃತ, ಬೆಂಗಾಲಿ, ಒರಿಯಾ, ಮರಾಠಿ, ತೆಲುಗು, ಗುಜರಾತಿ, ಪಂಜಾಬಿ, ಪರ್ಷಿಯನ್, ತಮಿಳ್, ಅರೇಬಿಕ್, ನೇಪಾಳಿ, ಅಸ್ಸಾಮಿ, ಮಲಯಾಳಂ; ಹೀಗೆ ಐಚ್ಛಿಕ ವಿಷಯಗಳೊಡನೆ, ಗಣಿತ, ವಿಜ್ಞಾನ ಮತ್ತು ತಂತ್ರಜ್ಞಾನ, ಸಮಾಜ ವಿಜ್ಞಾನ, ಅರ್ಥಶಾಸ್ತ್ರ, ವಾಣಿಜ್ಯ ಶಾಸ್ತ್ರ, ಗೃಹ ವಿಜ್ಞಾನ, ಮನಶಾಸ್ತ್ರ, ಭಾರತದ ಸಂಸ್ಕೃತಿ ಮತ್ತು ಪರಂಪರೆ, ಕಲೆ, ಡಾಟಾ ಎಂಟ್ರಿ ಆಪರೇಶನ್, ಅಂಕಶಾಸ್ತ್ರ; ಹೀಗೆ ಹದಿನೇಳು ಭಾಷೆಗಳು ಸೇರಿದಂತೆ ಇಪ್ಪತ್ತೆಂಟು ವಿಷಯಗಳು ಹತ್ತನೇ ತರಗತಿಯ ಮಟ್ಟದ ಅಧ್ಯಯನಕ್ಕೆ ತೆರೆದಿಡಲಾಗಿದೆ.

ಹಾಗೆಯೇ ಪಿಯುಸಿ ಅಥವಾ ಪ್ಲಸ್ ಟೂ ಹಂತಕ್ಕೆ ಹಿಂದಿ, ಇಂಗ್ಲಿಷ್, ಬೆಂಗಾಳಿ, ಒರಿಯಾ, ತಮಿಳು, ಉರ್ದು, ಸಂಸ್ಕೃತ, ಗುಜರಾತಿ, ಪಂಜಾಬಿ, ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಚರಿತ್ರೆ, ಭೂಗೋಳ ಶಾಸ್ತ್ರ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ವಾಣಿಜ್ಯ ಶಾಸ್ತ್ರ, ಅಂಕಶಾಸ್ತ್ರ, ಗೃಹವಿಜ್ಞಾನ, ಮನಶಾಸ್ತ್ರ, ಕಂಪ್ಯೂಟರ್ ವಿಜ್ಞಾನ, ಸಮಾಜ ಶಾಸ್ತ್ರ, ಕಲೆ, ಪರಿಸರ ವಿಜ್ಞಾನ, ಸಮೂಹ ಮಾಧ್ಯಮ (ಮಾಸ್ ಕಮ್ಯೂನಿಕೇಶನ್) ಡಾಟಾ ಎಂಟ್ರಿ ಆಪರೇಶನ್, ಕಾನೂನು, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ; ಹೀಗೆ ಒಂಬತ್ತು ಭಾಷೆಗಳನ್ನು ಒಳಗೊಂಡಂತೆ ಇಪ್ಪತ್ತೊಂಬತ್ತು ವಿಷಯಗಳಿವೆ. ನಿಜಕ್ಕೂ ಮಕ್ಕಳು ತಾವು ಮುಂದೆ ಉನ್ನತ ವ್ಯಾಸಂಗ ಮಾಡುವಂತಹ ವಿಷಯಗಳನ್ನು ಪ್ರಾಥಮಿಕ ಹಂತದಲ್ಲಿಯೇ ಪರಿಚಯಿಸಿಕೊಳ್ಳುವುದು ಮತ್ತು ಶಾಸ್ತ್ರೀಯವಾಗಿ ಅಧ್ಯಯನ ನಡೆಸಲು ಪ್ರಾರಂಭಿಸುವುದರಿಂದ ಅವರಿಗೆ ಆಯಾ ಕ್ಷೇತ್ರದಲ್ಲಿ ನೈಪುಣ್ಯತೆಯನ್ನು ಸಾಧಿಸಲು ನೆರವಾಗುತ್ತದೆ.

ಆದರೆ ಈ ಮುಕ್ತ ಶಾಲೆಯಲ್ಲಿ ಕಲಿಕೆಯನ್ನು ಪಡೆಯಲು ಎಲ್ಲರಿಗೂ ಸಾಧ್ಯವೇ? ಇದು ಎಲ್ಲರಿಗೂ ತೆರೆದಿರುವುದಂತಹುದ್ದೇ ನಿಜ. ಆದರೆ, ಇಲ್ಲಿ ಓದಲು ವ್ಯಕ್ತಿಗತವಾಗಿ ವಿದ್ಯಾರ್ಥಿಗೂ ಮತ್ತು ಮನೆಯವರಿಗೂ ಕೆಲವು ಅರ್ಹತೆಗಳು ಇರಬೇಕು. ಹಾಗೆಯೇ ಈ ಮುಕ್ತ ಶಾಲೆಯಲ್ಲಿ ಪಡೆದುಕೊಳ್ಳುವುದೆಷ್ಟೋ ಇದ್ದರೂ ಕಳೆದುಕೊಳ್ಳುವುದೂ ಕೆಲವಿವೆ. ಇದು ಎಷ್ಟೇ ಮುಕ್ತವೆಂದರೂ ಕೂಡ ಕೆಲವು ಶಿಸ್ತನ್ನು ಬೇಡುತ್ತದೆ. ಅವು ಏನೆಂದು ಮುಂದೆ ನೋಡೋಣ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News