ಭಾರತೀಯ ಭಾಷಾ ಕಂಪ್ಯೂಟರ್ ಲಿಪಿ ತಂತ್ರಾಂಶದ ಪಿತಾಮಹಾ - ಕನ್ನಡಿಗ ಕೆ.ಪಿ.ರಾವ್

Update: 2017-09-24 10:05 GMT

ನಮ್ಮ ದೇಶದಲ್ಲಿ ಆಧುನಿಕ ಮುದ್ರಣ ತಂತ್ರಜ್ಞಾನದ ಅನುಷ್ಠಾನ, ಭಾರತೀಯ ಭಾಷಾ ಲಿಪಿಗಳ ಫೋಟೊ ಕಂಪೋಸಿಂಗ್ ಮತ್ತು ಸುಂದರ ಮುದ್ರಣದ ಕುರಿತು ಯಾರೂ ಸಹ ಹೆಚ್ಚು ಆಲೋಚನೆಯನ್ನೇ ಮಾಡಿರದ ಸಂದರ್ಭದಲ್ಲಿ ಈ ಕಾರ್ಯಕ್ಷೇತ್ರದಲ್ಲಿ ವಿನೂತನ ಮಾರ್ಗಗಳನ್ನು ಅನ್ವೇಷಿಸಿದ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹತ್ತು ಹಲವು ಹೊಸ ಪ್ರಯೋಗಗಳನ್ನು ಕೈಗೊಂಡು ಅದರಲ್ಲಿ ಯಶಸ್ಸನ್ನು ಕಂಡವರಲ್ಲಿ ಕನ್ನಡಿಗ ನಾಡೋಜ ಡಾ.ಕೆ.ಪಿ.ರಾವ್ ಮೊದಲಿಗರು.

ಸರಳ ಮನಸ್ಸಿನ ತಂತ್ರಜ್ಞಾನಿಯಾದ ಕೆ.ಪಿ.ರಾವ್ (ಕಿನ್ನಿಕಂಬಳ ಪದ್ಮನಾಭ ರಾವ್) ಭಾರತೀಯ ಭಾಷೆಗಳ ಕಂಪ್ಯೂಟರ್ ಲಿಪಿ ತಂತ್ರಾಂಶದ ಪಿತಾಮಹಾ ಎಂದೇ ಖ್ಯಾತರಾಗಿದ್ದಾರೆ. ಪರ್ಸನಲ್ ಕಂಪ್ಯೂಟರ್‌ಗಳಲ್ಲಿ ಬಳಸಲು ‘ಸೇಡಿಯಾಪು’ ಎಂಬ ಕನ್ನಡದ ಪ್ರಥಮ ಲಿಪಿ ತಂತ್ರಾಂಶವನ್ನು 1988ರಲ್ಲಿಯೇ ಸಿದ್ಧಪಡಿಸಿ ಕನ್ನಡ ಸಾರಸ್ವತ ಲೋಕಕ್ಕೆ ಉಚಿತವಾಗಿ ನೀಡಿರುವ ಶ್ರೇಯಸ್ಸು ಅವರಿಗೆ ಸಂದಿದೆ. ಕನ್ನಡ ಲಿಪಿಯನ್ನು ಸುಲಭವಾಗಿ ಕಂಪ್ಯೂಟರ್‌ನಲ್ಲಿ ಮೂಡಿಸಲು ಸರಳ ಹಾಗೂ ತರ್ಕಬದ್ಧವಾದ ಕೀಲಿಮಣೆ ವಿನ್ಯಾಸವನ್ನು ಮೊತ್ತಮೊದಲ ಬಾರಿಗೆ ಆವಿಷ್ಕರಿಸಿದ ಹೆಗ್ಗಳಿಕೆ ಕೆ.ಪಿ.ರಾವ್ ಅವರದು. ಇವರು ಪರಿಚಯಿಸಿದ ಧ್ವನ್ಯಾತ್ಮಕ ಕೀಲಿಮಣೆ ವಿನ್ಯಾಸವು ಕನ್ನಡ ಮಾತ್ರವಲ್ಲದೆ ಇತರ ಭಾರತೀಯ ಭಾಷೆಗಳನ್ನು ಕಂಪ್ಯೂಟರ್‌ನಲ್ಲಿ ಬಳಸುವುದನ್ನು ಸುಲಭಗೊಳಿಸಿತು. ಈ ತಂತ್ರಾಂಶವು ಕನ್ನಡಲಿಪಿಯನ್ನು ಅಂತರ್ಗತವಾಗಿ ಮೂಡಿಸುವ ಸ್ವತಂತ್ರವಾದ ಕನ್ನಡದ ಪ್ರಥಮ ಪದಸಂಸ್ಕಾರಕ ತಂತ್ರಾಂಶವಾಗಿದೆ (ವರ್ಡ್ ಪ್ರೊಸೆಸಿಂಗ್ ಸಾಫ್ಟ್‌ವೇರ್).

ತುಳು ಭಾಷೆಯ ಅರ್ಥಕೋಶವನ್ನು ಸಿದ್ಧಪಡಿಸುವ ಉದ್ದೇಶದಿಂದ ತಮ್ಮ ವಿದ್ಯಾಗುರುಗಳಾದ ಸೇಡಿಯಾಪು ಕೃಷ್ಣಭಟ್ಟರಿಗೆ ಸಮರ್ಪಿಸಲಾದ ‘ಸೇಡಿಯಾಪು’ ಹೆಸರಿನ ತಂತ್ರಾಶವನ್ನು ಇವರು ಮೊದಲಿಗೆ ಸಿದ್ಧಪಡಿಸಿದರು. ಇದರ ಪರಿಷ್ಕೃತ ಆವೃತ್ತಿ ಕನ್ನಡದ ಎಡಿಟರ್ ತಂತ್ರಾಂಶವನ್ನು ಅದೇ ಹೆಸರಿನಲ್ಲಿಯೇ ಕನ್ನಡಿಗರ ಬಳಕೆಗೆ 1988ರಲ್ಲಿ ಬಿಡುಗಡೆ ಮಾಡಿದರು. ಅದರ ಪ್ರತಿಯೊಂದನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಂದಿನ ನಿರ್ದೇಶಕರಿಗೆ ನೀಡಲು ಹೋಗಿದ್ದಾಗ ಭೇಟಿಯಾದ ಡಾ.ಚಂದ್ರಶೇಖರ ಕಂಬಾರರು ಇದರ ಬಗ್ಗೆ ಬಹುವಾಗಿ ವಿಚಾರಿಸಿ ತಿಳಿದುಕೊಂಡು ಕನ್ನಡ ವಿ.ವಿ.ಯಲ್ಲಿ ಅದನ್ನು ವ್ಯಾಪಕವಾಗಿ ಬಳಕೆಗೆ ತಂದರು. ಭಾಷಾ ಶಾಸ್ತ್ರಜ್ಞರಾದ ಡಾ.ಕೆ.ವಿ.ನಾರಾಯಣರ ಮಿತ್ರರೂ ಹಾಗೂ ಬ್ರಿಟಿಷ್ ಕೊಲಂಬಿಯಾ ವಿ.ವಿ.ಯ ಪ್ರೊಫೆಸರ್ ಆಗಿದ್ದ ಶ್ರೀಧರ್ ‘ಸೇಡಿಯಾಪು’ವನ್ನು ತಮ್ಮ ಲ್ಯಾಪ್‌ಟಾಪ್‌ನಲ್ಲಿ ಒಯ್ದು ಅದನ್ನು ಇಂಟರ್‌ನೆಟ್‌ನಲ್ಲಿ ಇರಿಸಿದರು. ಅಲ್ಲಿಂದಾಚೆಗೆ ಅದು ವಿಶ್ವದ ಎಲ್ಲ ಕನ್ನಡಿಗರ ಬಳಕೆಗೆ ಸುಲಭವಾಗಿ ಮತ್ತು ಉಚಿತವಾಗಿ ದೊರೆಯುವಂತಾಗಿ ವ್ಯಾಪಕವಾಗಿ ಬಳಕೆಗೆ ಬಂತು.

‘ಫಾಂಟ್ ತಂತ್ರಜ್ಞಾನ’ ಆವಿಷ್ಕಾರಗೊಂಡ ನಂತರದಲ್ಲಿ, ಕನ್ನಡಕ್ಕೆ ತಂತ್ರಜ್ಞಾನವನ್ನು ಬಳಸಲು ಅನುವಾಗುವಂತೆ ಕನ್ನಡದ ಫಾಂಟುಗಳನ್ನು ಸಿದ್ಧಪಡಿಸಿದವರಲ್ಲಿ ಇವರು ಮೊದಲಿಗರು. ಕನ್ನಡಕ್ಕೆ ಮಾತ್ರವಲ್ಲದೆ ಅದೇ ಕಾಲಘಟ್ಟದಲ್ಲಿ ಇತರ ಭಾರತೀಯ ಭಾಷೆಗಳಿಗೆ ದೇವನಾಗರಿ, ಕನ್ನಡ, ತುಳು ಮತ್ತು ತೆಲುಗು ಭಾಷೆಗಳ ಫಾಂಟ್‌ಗಳನ್ನು ಸಿದ್ಧಪಡಿಸಿ ಒಂದೇ ಕೀಲಿಮಣೆ ವಿನ್ಯಾಸವನ್ನು ಎಲ್ಲ ಭಾಷೆಗಳಿಗೂ ಅಳವಡಿಸಿದ ಕೀರ್ತಿಗೆ ಇವರು ಭಾಜನರಾಗಿದ್ದಾರೆ. ಹೀಗಾಗಿ, ಇವರನ್ನು ಭಾರತೀಯ ಭಾಷಾ ಕಂಪ್ಯೂಟರ್ ಲಿಪಿತಂತ್ರಾಂಶದ ಪಿತಾಮಹಾ ಎಂದು ಕರೆಯಲಾಗಿದೆ. ಭಾರತ ದೇಶದಲ್ಲಿ ಆಧುನಿಕ ಮುದ್ರಣ ತಂತ್ರಜ್ಞಾನವನ್ನು ಬಳಕೆಗೆ ತಂದವರಲ್ಲಿ ಇವರು ಪ್ರಮುಖರು. ಖ್ಯಾತ ಮುದ್ರಣ ತಂತ್ರಜ್ಞಾನ ಸಂಸ್ಥೆಯಾದ ‘ಮೊನೋಟೈಪ್’ ಕಂಪೆನಿಯ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಇವರು ‘ಫೋಟೊಕಂಪೋಸಿಂಗ್ ತಂತ್ರಜ್ಞಾನ’ವನ್ನು ಅಳವಡಿಸಿಕೊಂಡು ದೇಶೀಯ ಭಾಷೆಗಳಲ್ಲಿ ಸುಂದರವಾದ ಅಕ್ಷರಗಳನ್ನು ಮುದ್ರಿಸುವ ಕನಸನ್ನು ನನಸಾಗಿಸಿದರು. ಇವರ ಹಲವು ಯಶಸ್ವೀ ಪ್ರಯೋಗಗಳ ಫಲವಾಗಿ ಭಾರತದ ಮುದ್ರಣ ಮತ್ತು ಪ್ರಕಾಶನ ಕ್ಷೇತ್ರಕ್ಕೆ ಕ್ರಾಂತಿಕಾರಕ ತಿರುವು ದೊರೆಯಿತು. ಕನ್ನಡದ ಕಂಪ್ಯೂಟರ್ ಕ್ಷೇತ್ರದ ಹಲವು ಪ್ರಥಮಗಳು ಇವರ ಹೆಸರಿನಲ್ಲಿವೆ.

ಭಾರತೀಯ ಭಾಷೆಗಳ ಲಿಪಿಯನ್ನು ಕಂಪ್ಯೂಟರ್ ಬಳಸಿ ಪಡಿಮೂಡಿಸುವ ತಂತ್ರಜ್ಞಾನಕ್ಕೆ ಇವರು ನೀಡಿರುವ ಕೊಡುಗೆಯಿಂದಾಗಿ ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕಕ್ಕೆ ಮತ್ತು ಕನ್ನಡಿಗರಿಗೆ ಕೀರ್ತಿಯನ್ನು ತಂದಿದ್ದಾರೆ. ಮಣಿಪಾಲ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್‌ಗಳು ಮತ್ತು ಆಧುನಿಕ ಮುದ್ರಣಶಾಸ್ತ್ರ ಕುರಿತು ಸ್ವಲ್ಪಕಾಲ ಬೋಧಿಸಿದ ಇವರು ಚಂಡಿಗಡದಲ್ಲಿನ ‘ಕ್ವಾರ್ಕ್ ಎಕ್ಸ್‌ಪ್ರೆಸ್’ ಮತ್ತು ‘ಅಡೋಬಿ ಸಿಸ್ಟಂಸ್’ ಎಂಬ ತಂತ್ರಾಂಶ ತಯಾರಿಕಾ ಕಂಪೆನಿಗಳ ಸಲಹೆಗಾರರಾಗಿಯೂ ಸಹ ಕಾರ್ಯನಿರ್ವಹಿಸಿದ್ದಾರೆ. ‘ಯೂನಿಕೋಡ್’ ಶಿಷ್ಟತೆಯನ್ನು ಡಿ.ಟಿ.ಪಿ. ತಂತ್ರಾಂಶಗಳಲ್ಲಿ ಅಳವಡಿಸಲು ತಮ್ಮ ತಜ್ಞ ಸಲಹೆಗಳನ್ನು ವಿವಿಧ ತಂತ್ರಾಂಶ ತಯಾರಕರಿಗೆ ನೀಡುವ ಮೂಲಕ ಆಧುನಿಕ ಫಾಂಟುಗಳು ಎಲ್ಲೆಡೆ ಬಳಸಲು ಅನುವಾಗುವ ಉತ್ತಮ ಕಾರ್ಯಕ್ಕೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ.

2014ರಲ್ಲಿ ‘ಅಪಾರ’ ಎಂಬ ಹೆಸರಿನ ಫಾಂಟನ್ನು ಸಿದ್ಧಪಡಿಸಿದ್ದಾರೆ. ಇದರಲ್ಲಿ ಧ್ವನಿಯಾಧಾರಿತ ಶಬ್ದಗಳನ್ನು ಸೂಚಿಸುವ ವಿಶೇಷ ಸಂಜ್ಞೆಗಳನ್ನು ಅಳವಡಿಸಲಾಗಿದೆ. ಇದು ಕನ್ನಡವಷ್ಟೇ ಅಲ್ಲದೆ, ತುಳು, ಕೊಂಕಣಿ, ಕುಂದಗನ್ನಡ, ಹವಿಗನ್ನಡ, ಬ್ಯಾರಿ, ಅರೆಭಾಷೆಗಳಲ್ಲಿ ನಿಘಂಟು ರಚಿಸಲು ಉಪಯುಕ್ತವಾಗಿದೆ. ಒಂದು ಭಾಷಾ ಲಿಪಿಯಿಂದ ಮತ್ತೊಂದು ಭಾಷೆಯ ಲಿಪಿಗೆ ಬದಲಾವಣೆಗೊಳ್ಳುವ ‘ಲಿಪ್ಯಂತರಣ’ ತಂತ್ರಾಂಶವಾದ ‘ಶಬ್ದಸಾಗರಂ’ಅನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಸ್ತುತ ಅವರು ತೊಡಗಿಸಿಕೊಂಡಿದ್ದಾರೆ. ಹಲವು ಭಾಷೆಗಳ ಪದಗಳ ಬೃಹತ್ ದತ್ತಸಂಚಯ (ಡೇಟಾಬೇಸ್) ಸಹಿತ ಈ ತಂತ್ರಾಂಶವು ಬೇರೆ ಭಾಷೆಯವರಿಗೆ ತಮಗೆ ತಿಳಿದಿರುವ ಲಿಪಿಯಲ್ಲಿಯೇ ಮಾಹಿತಿಯನ್ನು ಅರಿಯಲು ಅವಕಾಶ ನೀಡುತ್ತದೆ. ಇದು ಬಳಕೆದಾರರ ಸಹಭಾಗಿತ್ವದಲ್ಲಿ ನಿರಂತರ ಅಭಿವೃದ್ಧಿಪಡಿಸಬೇಕಾದ ದೊಡ್ಡ ಯೋಜನೆಯಾಗಿದೆ.

ಮಂಗಳೂರು ಬಳಿಯ ಕಿನ್ನಿಕಂಬಳ ಎಂಬ ಚಿಕ್ಕಹಳ್ಳಿಯಲ್ಲಿ ಜನನ. ಮೈಸೂರು ವಿ.ವಿ.ಯಿಂದ ವಿಜ್ಞಾನ ಪದವಿ. ಮುದ್ರಣಾಲಯದಲ್ಲಿ ಅಕ್ಷರ ಜೋಡಿಸುವ ಅರೆಕಾಲಿಕ ಕೆಲಸದಿಂದ ವೃತ್ತಿಜೀವನ ಆರಂಭ. ಪ್ರತಿಷ್ಠಿತ ಟಾಟಾ ಪ್ರೆಸ್‌ನಲ್ಲಿ ಫೋಟೊಕಂಪೋಸಿಂಗ್‌ನ್ನು ಮೊದಲಿಗೆ ಆರಂಭಿಸಿದ ಕೀರ್ತಿ. ಸತತ ಪರಿಶ್ರಮದ ಮೂಲಕ ಮೊನೋಟೈಪ್ ಕಂಪೆನಿಯ ನಿರ್ದೇಶಕ ಸ್ಥಾನಕ್ಕೆ ಭಡ್ತಿ - ಇವು ಅವರ ಸಾಧನೆ ಹಾದಿಯಲ್ಲಿನ ಮೈಲಿಗಲ್ಲುಗಳು. ‘‘ತಂತ್ರಜ್ಞಾನಕ್ಕೆ ಭಾಷೆಯನ್ನು ಸಜ್ಜುಗೊಳಿಸುವತ್ತ ಭಾಷೆ ಮತ್ತು ಲಿಪಿ ಸುಧಾರಣೆಯ ಕಸರತ್ತು ಅರ್ಥವಿಲ್ಲದ್ದು, ತಂತ್ರಜ್ಞಾನವನ್ನು ನಮ್ಮ ಭಾಷೆಗೆ ಒಗ್ಗಿಸಬೇಕೇ ಹೊರತು ತಂತ್ರಜ್ಞಾನಕ್ಕಾಗಿ ಭಾಷೆಯನ್ನು ಬದಲಿಸಲಾಗದು’’ ಎಂಬುದು ಅವರ ಅಭಿಪ್ರಾಯ. ಕನ್ನಡ ಭಾಷೆಯ ಮೇಲಿನ ಪ್ರೀತಿ ಮತ್ತು ಅಭಿಮಾನದಿಂದ ಇವರು ಹಲವು ಸಾಧನೆಗಳನ್ನು ಮಾಡಿದ್ದಾರೆ. ‘‘ನಾನು ಹೆಚ್ಚೇನೂ ಸಾಧಿಸಿಲ್ಲ, ಸದಾ ಹೊಸತೇನನ್ನಾದರೂ ಮಾಡುವ ಪ್ರವೃತ್ತಿಯಿತ್ತು. ಹಾಗಾಗಿ, ಇಷ್ಟರ ಮಟ್ಟಿಗೆ ಮಾತ್ರ ಸಾಧನೆ ಸಾಧ್ಯವಾಯಿತು. ಇದನ್ನೆಲ್ಲಾ ನನ್ನ ಆತ್ಮತೃಪ್ತಿಗಾಗಿ ಮಾಡಿದ್ದೇನೆ ಹೊರತು ಹಣಕ್ಕಾಗಿ ಮಾಡಿದ್ದಲ್ಲ’’ ಎಂಬುದು ಅವರ ವಿನಮ್ರ ನುಡಿ.

Writer - ಸತ್ಯನಾರಾಯಣ ಎ.

contributor

Editor - ಸತ್ಯನಾರಾಯಣ ಎ.

contributor

Similar News