ನನ್ನ ಬಾಳಿನ ಹೊಂಗಿರಣ

Update: 2017-09-24 11:08 GMT

ಕನ್ನಡದ ಅಶ್ವಿನಿ ದೇವತೆಗಳಲ್ಲಿ ಒಬ್ಬರೆಂದು ಖ್ಯಾತನಾಮರಾಗಿರುವ ಪ್ರೊ. ಟಿ.ಎಸ್. ವೆಂಕಣ್ಣಯ್ಯನವರು ಒಂದು ಅಪರೂಪದ ಚೇತನ. ಸಾಹಿತ್ಯಕ್ಕಿಂತ ಜೀವನವೇ ದೊಡ್ಡದಾದಾಗ, ಆ ಜೀವನವೇ ಸಾಹಿತ್ಯವಾಗುತ್ತದೆ ಎಂಬುದಕ್ಕೆ ಅವರೊಂದು ಅಪೂರ್ವ ನಿದರ್ಶನ. ಸರ್ವಮಾನವೀಯ ಗುಣಗಳ ಸಾಕಾರಮೂರ್ತಿ ಅವರು. ಕನ್ನಡದ ಮೊದಲ ಪ್ರಾಧ್ಯಾಪಕರೆಂಬ ಕೀರ್ತಿಗೆ ಭಾಜನರಾಗಿರುವ ಪ್ರೊ. ವೆಂಕಣ್ಣಯ್ಯನವರು ಕನ್ನಡ ನಾಡುನುಡಿಗಳಿಗೆ ಸಲ್ಲಿಸಿದ ಸೇವೆ ಅನುಪಮವೂ, ಪ್ರಭಾವಯುತವೂ ಅದುದೆಂಬುದು ತಿಳಿದ ವಿಷಯವೇ ಆಗಿದೆ. ಅವರ ಪತ್ನಿ ಶ್ರೀಮತಿ ರುಕ್ಮಿಣಿಯಮ್ಮನವರು ನೆನೆದುಕೊಂಡ ವೆಂಕಣ್ಣಯ್ಯನವರ ವ್ಯಕ್ತಿ ಚಿತ್ರ ಇಲ್ಲಿದೆ. ಮೈಸೂರು ವಿಶ್ವವಿದ್ಯಾನಿಲಯವು ಪ್ರಕಟಿಸಿದ ವಿಜಯೋನ್ನತಿ ಕೃತಿಯಿಂದ ಈ ಲೇಖನ ಆರಿಸಲಾಗಿದೆ. ಶ್ರೀಯುತ ರಾಮೇಗೌಡ ಹಾಗೂ ಶ್ರೀ ಪ್ರಧಾನ ಗುರುದತ್ತ ಈ ಕೃತಿಯ ಸಂಪಾದಕರು.

ನನ್ನ ಜೀವಿತದ ಹೊಂಗಿರಣವಾಗಿದ್ದ ಆ ಮಹಾಪುರುಷರ ನೆನಪಿನಲ್ಲಿಯೇ ನನ್ನ ಬಾಳನ್ನು ಸವೆಸುವ ಆಕಾಂಕ್ಷೆ ನನ್ನದು. ನನ್ನವರ ಆ ಆದರ್ಶ ಜೀವನವನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಬಂದಿರುವುದು, ನನ್ನ ಹಿರಿಯ ಮಗನಂತಿರುವ ಶಾಮರಾಯರ ಪ್ರೀತಿ, ವಿಶ್ವಾಸ, ಸರಳತೆ, ವಿಚಾರ, ಔದಾರ್ಯ ಮೊದಲಾದವು ನನ್ನವರ ಸ್ಮರಣೆಯನ್ನು ಮರುಕಳಿಸುವಂತೆ ಮಾಡಿವೆ.

ನನ್ನವರೊಡನೆ ನನ್ನ ಅನುಭವಗಳನ್ನು ಬರೆದುಕೊಡುವಂತೆ ಪ್ರಬುದ್ಧ ಕರ್ನಾಟಕದ ಸಂಪಾದಕರು ನನ್ನನ್ನು ಕೇಳಿದ್ದಾರೆ. ‘‘ಏನಾದರೂ ಸ್ವಲ್ಪ ಬರೆದುಕೊಡಿ’’ ಎಂದು ನನ್ನ ಮೈದುನರಾದ ಶ್ರೀ ತ.ಸು. ಶಾಮರಾಯರು ಒತ್ತಾಯ ಪಡಿಸಿದ್ದಾರೆ. ಸುಮಾರು ನಲವತ್ತಾರು ವರ್ಷಗಳ ಹಿಂದಿನ ಘಟನೆಗಳನ್ನು ಸ್ಮರಿಸಿಕೊಂಡು ಬರೆಯ ಹೊರಡುವುದು ಬಹು ಕಷ್ಟದ ಕೆಲಸ; ಎಲ್ಲವೂ ಮರೆತು ಹೋದಂತಾಗಿದೆ. ಇದರ ಮೇಲೆ ನಾನು ಎಂದೂ ಬರೆಯುವ ಗೋಜಿಗೆ, ರೇಜಿಗೆಗೆ ಹೋದವಳಲ್ಲ. ನಾನು ಏನಿದ್ದರೂ ಇತರರು ಬರೆದುದನ್ನು ಓದುವವಳಷ್ಟೆ. ಇದೂ ಒಂದು ಬಗೆಯ ಸಾಹಿತ್ಯದ ಸೇವೆಯೇ ತಾನೆ. ನನ್ನವರ ನಂತರ ನನ್ನ ಮಕ್ಕಳಿಗೆ ತಂದೆಯ ಸ್ಥಾನದಲ್ಲಿ ನಿಂತು ಅವರ ಒಳಿತನ್ನು ಬಯಸಿ ಸಾಧಿಸಿದ, ಅಂದಿನಿಂದ ಇಂದಿನವರೆಗೆ ನನ್ನ ಹಿರಿಯ ಮಗನಂತೆ ನನ್ನ ಸುಖದುಃಖಗಳಲ್ಲಿ ಪಾಲುಗೊಂಡಿರುವ ನನ್ನ ಈ ಮೈದುನರ ಪ್ರೀತಿ ವಿಶ್ವಾಸಗಳಿಗೆ ಕಟ್ಟುಬಿದ್ದು ನನಗೆ ತೋಚಿದ ಒಂದೆರಡು ಮಾತುಗಳನ್ನು ಇಲ್ಲಿ ಬರೆಯಲು ತೊಡಗಿದ್ದೇನೆ.

ನನ್ನ ಜೀವಿತದ ಅರುಣೋದಯವಾದುದು ನನ್ನ ಹದಿನಾಲ್ಕನೆಯ ವಯಸ್ಸಿನಲ್ಲಿ, ನನ್ನ ಭಾವನವರು ನನ್ನ ಅಕ್ಕನ ಗಂಡ ಈ ಹಿರಿಯರನ್ನು ಮದುವೆಯಾಗುವಂತೆ ಹೇಳಿದಾಗ, ನನ್ನ ಮನಸ್ಸಿಗೆ ತುಂಬ ಸಂತೋಷವಾಯಿತು. ಜನರ ದೃಷ್ಟಿಯಲ್ಲಿ ಮಹೋನ್ನತರಾಗಿ, ಪೂಜ್ಯರೆನಿಸಿ ಬೆಳೆದು ಬೆಳಗುತ್ತಿದ್ದ ಮಹಾನುಭಾವರನ್ನು ಮದುವೆಯಾಗುವ ಭಾಗ್ಯ ದೊರೆತುದಕ್ಕಾಗಿ ಮುಗ್ಧಳಾದ ನನಗೆ ಪರಮಸಂತೋಷವಾಯಿತು. ಅವರನ್ನು ಪ್ರತ್ಯಕ್ಷವಾಗಿ ಕಂಡುದು ನನ್ನ ಜೀವನದ ಅತೀ ಮಧುರವಾದ ಸ್ಮರಣೆ.

ತವರು ಮನೆಯಿಂದ ನನ್ನ ಪತಿ ಗೃಹಕ್ಕೆ ಬಂದಾಗ ಆ ಮನೆ ಜನರಿಂದ ತುಂಬಿ ತುಳುಕುತ್ತಿತ್ತು. ನಮ್ಮ ಅತ್ತೆಯವರು ಅವರ ಕೆಲವು ಮಕ್ಕಳು, ನನ್ನವರ ಮಕ್ಕಳು, ಇನ್ನೂ ಯಾರು ಯಾರೋ! ಹೀಗೆ ತುಂಬಿದ್ದ ಆ ಸಂಸಾರದಲ್ಲಿ ಅವರೆಲ್ಲರನ್ನೂ ತಲೆಯೆತ್ತಿ ನೋಡುವುದಕ್ಕೆ ಸಹ ನನಗೆ ಮೊದಮೊದಲು ತುಂಬಾ ನಾಚಿಕೆ. ಇವರೆಲ್ಲರಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದೇ ನನಗೊಂದು ಸಮಸ್ಯೆಯಾಗಿತ್ತು. ಆದರೆ ನಮ್ಮವರು ಬಹುಬೇಗ ಅದನ್ನು ಪರಿಹರಿಸಿದರು. ನನಗೆ ಮನವರಿಕೆಯಾಗುವಂತೆ ತಿಳಿಯ ಹೇಳಿದರು. ಅವರ ಮಾರ್ಗದರ್ಶನದಲ್ಲಿ ನಾನು ಬಹುಬೇಗ ಎಲ್ಲರ ತುಂಬು ವಿಶ್ವಾಸಕ್ಕೆ ಪಾತ್ರಳಾದೆ; ಆ ಸವಿಯನ್ನು ಇಂದಿನವರೆಗೂ ಸವಿದುಕೊಂಡು ಬಂದಿದ್ದೇನೆ.

ಸಾಂಸಾರಿಕ ವಿಷಯಗಳಲ್ಲಿ, ಆಧ್ಯಾತ್ಮಿಕ ವಿಷಯಗಳಲ್ಲಿ ಕೂಡ, ನನ್ನ ಆಸಕ್ತಿ ಸನ್ಮಾರ್ಗದಲ್ಲಿ ಬೆಳೆಯುವಂತೆ ಮಾಡಿದ ಸ್ಮರಣೀಯ ವ್ಯಕ್ತಿ ಎಂದರೆ ನನ್ನ ಅತ್ತೆಯವರು. ಅವರು ವಾತ್ಸಲ್ಯಮಯಿ, ತುಂಬ ತಿಳಿದವರು, ಲೋಕಾನುಭವವುಳ್ಳವರು, ಆದರ್ಶ ಜೀವಿ. ಭಾರತ, ಭಾಗವತ, ರಾಮಾಯಣ, ಪುರಾಣ ಪುಣ್ಯಕಥೆಗಳು, ನನ್ನ ಮಾವನವರು ಬರೆದ ‘ಶನಿಮಹಾತ್ಮೆ’ ಮೊದಲಾದ ನಾಟಕಗಳು, ಅವರು ರಚಿಸಿದ ದೇವರ ನಾಮಗಳು - ಇವುಗಳನ್ನು ರಾಗ ರಾಗವಾಗಿ ಓದಿ ಅದರ ಅರ್ಥವನ್ನು ಮನಸ್ಸಿಗೆ ಹಿಡಿಸುವಂತೆ ಹೇಳುತ್ತಿದ್ದರು. ನನ್ನವರು ನನ್ನನ್ನು ಅಗಲಿ ಹೋದಾಗ ನನ್ನ ಅತ್ತೆಯವರ ಜೀವಿತದ ಆಸೆಯೇ ಕಮರಿಹೋಯಿತು. ಆದರೂ ಅವರು ಅದನ್ನು ಹತ್ತಿಕ್ಕಿಕೊಂಡು, ನನ್ನ ದುಃಖವನ್ನು ಆರಿಸಲು ಪ್ರಯತ್ನಿಸಿದರು. ಅಂದು ಅವರು ಹೇಳಿದ ಉತ್ತರೆಯ ಕಥೆ ಇಂದೂ ನನ್ನ ಮನಸ್ಸಿನೆದುರು ನಿಂತಿದೆ. ಸಾಕ್ಷಾತ್ ಶ್ರೀ ಕೃಷ್ಣನೇ ಸಹಾಯಕನಾಗಿದ್ದರೂ ಉತ್ತರೆ ತನ್ನ ಪತಿ ಅಭಿಮನ್ಯುವನ್ನು ಕಳೆದುಕೊಂಡ ಕಥೆ ಅದು. ‘‘ನಮ್ಮ ಕರ್ಮವನ್ನು ನಾವು ಅನುಭವಿಸುವುದು ಅನಿವಾರ್ಯ’’ ಎಂದು ಅವರು ನನ್ನನ್ನು ಸಮಾಧಾನ ಪಡಿಸಿದರು. ಅವರ ಮಾತು, ಅವರ ಅನುಭವ, ಅವರ ವಿಚಾರಶಕ್ತಿ, ಅವರ ಸರಳತೆ, ಅವರ ಪ್ರೀತಿ ವಿಶ್ವಾಸ, ಆದರ ಇವು ಚಿರಸ್ಮರಣೀಯವಾದವು.

ನಮ್ಮ ಅತ್ತೆಯವರಂತೆಯೇ ಅವರ ಪುತ್ರರೂ ನನ್ನಲ್ಲಿ ಅಪಾರವಾದ ಪ್ರೀತ್ಯಾದರಗಳನ್ನು ತೋರಿ ನನ್ನ ಕಣ್ಣು ತೆರೆಸಿದವರು. ಕುಮಾರವ್ಯಾಸ ಭಾರತದಲ್ಲಿ ಅವರಿಗೆ ಅಪಾರವಾದ ಆಸಕ್ತಿ. ಅದರಲ್ಲಿ ರಸವತ್ತಾದ ಭಾಗಗಳನ್ನು ಆಗಾಗ ಓದಿ, ಅದರ ಸೊಗಸನ್ನು ಮನವರಿಕೆ ಮಾಡಿಕೊಡುತ್ತಿದ್ದರು. ಶಾಕುಂತಳಾ ನಾಟಕ ಅವರಿಗೆ ವಾಚೋ ವಿಧೇಯವಾಗಿತ್ತು. ಅದರಂತೆ ಭಗವದ್ಗೀತೆಯು ಅವರಿಗೆ ವಾಚೋವಿಧೇಯವಾಗಿತ್ತು. ಅವರಿಗೆ ಎರಡರಲ್ಲಿಯೂ ಸಮಾನವಾದ ಪ್ರೀತಿ. ಭೂಮ್ಯಾಕಾಶಗಳನ್ನು ತಾಳಹಾಕಿ ನೋಡುವ ಮನೋವೃತ್ತಿ ಅವರದು. ಭರ್ತೃಹರಿಯ ನೀತಿ ವೈರಾಗ್ಯ ಶತಕಗಳು, ಭಾಸನ ಪ್ರತಿಮಾನಾಟಕ ಮೊದಲಾದವುಗಳನ್ನು ಅವರು ನನಗೆ ಪರಿಚಯ ಮಾಡಿ ಕೊಟ್ಟುದ್ದಲ್ಲದೆ ಸಾಹಿತ್ಯದಲ್ಲಿ ಆಳವಾದ ಆಸಕ್ತಿಯನ್ನು ಬಿತ್ತಿ ಬೆಳೆಸಿದರು. ಬಿ. ವೆಂಕಟಾಚಾರ್ಯ, ಮಾಸ್ತಿ, ಕವಿ ಪುಟ್ಟಪ್ಪ ಮೊದಲಾದವರ ಕಥೆ ಕಾದಂಬರಿ ನಾಟಕಗಳನ್ನು ನನಗೆ ತಂದುಕೊಟ್ಟು ಅವುಗಳನ್ನು ಓದುವಂತೆ ಪ್ರೇರೇಪಿಸುತ್ತಿದ್ದರು. ಹಾಗೆ ಓದಿದುದಾದ ಮೇಲೆ ಅವುಗಳನ್ನು ಕುರಿತು ವಿಚಾರ ವಿಮರ್ಶೆ ಮಾಡಿ ನನ್ನ ಕಣ್ಣು ತೆರೆಸುತ್ತಿದ್ದರು. ಒಮ್ಮಿಮ್ಮೆ ಪಂಪ ರನ್ನರಂಥ ಕವಿಗಳ ಕಾವ್ಯಭಾಗಗಳನ್ನು ಓದಿ ಅವುಗಳ ಸ್ವಾರಸ್ಯವನ್ನು ತಿಳಿಸುತ್ತಿದ್ದರು. ಕಾವ್ಯದ ರುಚಿಶುದ್ದಿಯನ್ನು ನನ್ನಲ್ಲಿ ನಾಟಲು ಪ್ರಯತ್ನಿಸಿದರು. ಅವರು ದೈವಭಕ್ತರು. ಹಲವು ಸ್ತೋತ್ರಗಳನ್ನೂ, ಪುರಂದರದಾಸರ ಕೀರ್ತನೆಗಳನ್ನೂ ಸೊಗಸಾಗಿ ಹಾಡಿ ಮನನವಾಗುವಂತೆ ಮಾಡುತ್ತಿದ್ದರು. ಲೌಕಿಕವಾಗಿ ನನ್ನ ಮಾತುಕತೆಗಳು ಹೇಗಿರಬೇಕೆಂಬುದನ್ನು ಈ ರೀತಿ ಹೇಳುತ್ತಿದ್ದುದುಂಟು:

ವಚನದೊಳ್ ಇಹಪರ ಸುಖಮಮ್

ವಚನದೊಳೆ ದೈವಗತಿ ದುರ್ಗತಿಯಕ್ಕುಮ್

ವಚನದೊಳರಿ ಮಿತ್ರತೆಯಮ್

ವಚನಾಮೃತದಿಂದೇ ತುಷ್ಟನೀಶ್ವರನರಿಯಾ!

ನನ್ನವರು ಮನೆಯವರೆಲ್ಲರ ಪ್ರೀತಿ, ವಿಶ್ವಾಸ, ಗೌರವಗಳಿಗೆ ಪಾತ್ರರಾಗಿದ್ದವರು, ಸರಳ ಸ್ವಭಾವದ ಶಾಂತಮೂರ್ತಿ. ಹಿರಿಯರಲ್ಲಿ ಭಕ್ತಿ ಗೌರವ, ಕಿರಿಯರಲ್ಲಿ ಪ್ರೀತಿ ವಿಶ್ವಾಸ ಅವರಿಗೆ. ಸ್ವಲ್ಪ ವಯಸ್ಸಾದ ನಂತರ ನನ್ನನ್ನು ಮದುವೆಯಾದದ್ದು ಅವರಿಗೆ ಬಹುಸಂಕೋಚದ ವಿಷಯವಾಗಿತ್ತು. ಬಾಯಿಬಿಟ್ಟು ಅದನ್ನು ಹೇಳದಿದ್ದರೂ ಅದು ನನಗೆ ಅರ್ಥವಾಗುತ್ತಿತ್ತು. ಆದರೆ ಅದನ್ನು ನಾನೂ ಬಾಯಿಬಿಟ್ಟು ಹೇಳುವಂತಿರಲಿಲ್ಲ. ಒಮ್ಮಿಮ್ಮೆ ಅವರ ಎತ್ತರಕ್ಕೆ ನಾನು ಎಷ್ಟು ಕುಳ್ಳು, ಆ ಎತ್ತರಕ್ಕೆ ನಾನು ಬೆಳೆಯಬಲ್ಲನೆ ಎನಿಸುತ್ತಿತ್ತು. ಅವರ ಮನೆಗೆ ಕಾಲಿಟ್ಟ ದಿನದಿಂದ ಅವರ ಕಡೆಯ ಗಳಿಗೆಯವರೆಗೂ ನನ್ನನ್ನು ಅವರು ಬಹಳ ಪ್ರೀತಿಯಿಂದ ಸುಖವಾಗಿರುವಂತೆ ನೋಡಿಕೊಂಡರು, ನನ್ನಲ್ಲಿ ಲೋಕಾನುಭವವನ್ನೂ, ಆಧ್ಯಾತ್ಮಿಕತೆಯನ್ನೂ ನಾಟಿ ಬೆಳೆಸಿದವರು ಅವರು. ಅವರ ಸಾನ್ನಿಧ್ಯದಲ್ಲಿ ಹಿರಿಯರನ್ನೂ, ಗುರುಗಳನ್ನೂ, ತಮ್ಮಂದಿರನ್ನೂ, ಅಳಿಯಂದಿರನ್ನೂ, ಮಕ್ಕಳನ್ನೂ, ವಿದ್ಯಾರ್ಥಿಗಳನ್ನೂ, ಮನೆಗೆ ಬಂದು ಹೋಗುವವರನ್ನೂ ಆದರದಿಂದ ನೋಡಿಕೊಳ್ಳಲು ಕಲಿತುಕೊಂಡೆ. ಹದಿನೈದು ವರ್ಷಗಳ ಕಾಲ ಅವರ ಜೊತೆಯಲ್ಲಿ ಇದ್ದು ನನ್ನ ಬಾಳು ಹಸನಾಯಿತು. ಆ ಅದೃಷ್ಟ ಇನ್ನೂ ಸ್ವಲ್ಪ ಹೆಚ್ಚು ಕಾಲ ನನಗೆ ಒದಗದಿದ್ದುದು ನನ್ನ ದೌರ್ಭಾಗ್ಯ. ಅವರು ನನ್ನನ್ನು ಅಗಲಿದಾಗ ನನಗೆ ಕೇವಲ ಇಪ್ಪತ್ತೇಳು ವರ್ಷಗಳು. ಆದರೂ ಅವರೇ ನನ್ನ ಗುರು ಎಲ್ಲವೂ ಎಂಬ ವಿವೇಕಜ್ಞಾನ ನನ್ನಲ್ಲಿ ಮೂಡಿಸಿ ಹೋದರು. ಅವರ ಆ ದೊಡ್ಡ ಸಂಸಾರದಲ್ಲಿ ಎಷ್ಟೇ ತೊಂದರೆ ತಾಪತ್ರಯಗಳು ಬಂದರೂ ಎಷ್ಟೇ ಬೇಸರ ಮೂಡಿದರೂ ಅದನ್ನು ತಾವೇ ಅನುಭವಿಸಿ ಸಹಿಸಿಕೊಳ್ಳುತ್ತಿದ್ದರೇ ಹೊರತು ಯಾರಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ. ಎಂದೂ, ಯಾರ ವಿಚಾರದಲ್ಲಿಯೂ, ಒಂದು ಸಣ್ಣ ಮಾತನ್ನಾಗಲಿ, ಕೆಟ್ಟ ಮಾತನ್ನಾಗಲಿ ಆಡಿದುದನ್ನು ನಾನು ಎಂದೂ ಕೇಳಿಲ್ಲ. ದೊಡ್ಡವರಿಗೆ ಎದುರಾಡುವುದು ಅವರಿಗೆ ಹಿಡಿಸುತ್ತಿರಲಿಲ್ಲ. ಅವರು ವಿಶಾಲ ಹೃದಯದವರು, ಸರಳವಾದ ಸ್ನೇಹ. ಮನೆಯಲ್ಲಿನ ಸಂಸಾರಜೀವನವೂ ಅತ್ಯಂತ ಸರಳ. ಊಟ, ಬಟ್ಟೆ ಮೊದಲಾದವುಗಳಲ್ಲಿ ಯಾವ ಆಡಂಬರವೂ ಇಲ್ಲ. ಸಂಸಾರದಲ್ಲಿ ಅವರಿಗೆ ಹೆಚ್ಚು ಆಸಕ್ತಿ ಇತ್ತೋ ಇರಲಿಲ್ಲವೋ! ಆದರೆ ಎಂದೂ ಅದರಿಂದ ದೂರ ನಿಂತವರಲ್ಲ. ಕರ್ತವ್ಯ ಕರ್ಮದಲ್ಲಿ ಎಂದೂ ಲೋಪ ತಂದವರಲ್ಲ. ಎಲ್ಲರೊಡನೆ ನಗುನಗುತ್ತಾ ಕಾಲ ಕಳೆದವರು ಅವರು.

ನನ್ನವರು ತಮ್ಮ ನೋವನ್ನು ತಾವೇ ಅನುಭವಿಸುತ್ತಿದ್ದರು ಎನ್ನುವುದಕ್ಕೆ ಒಂದು ಪುಟ್ಟ ಉದಾಹರಣೆಯನ್ನು ನಾನಿಲ್ಲಿ ಕೊಡಬಯಸುತ್ತೇನೆ. ನಮ್ಮ ಹಿರಿಯ ಮಗಳು ಭಾಗ್ಯಾ ಕಾಲವಾದಾಗ ಅವರು ಅಪಾರವಾದ ನೋವನ್ನು ಅನುಭವಿಸುತ್ತಿದ್ದರೂ ನನ್ನನ್ನು ಸಮಾಧಾನಪಡಿಸಿ ‘‘ಇದೇ ಜೀವನ’’ ಎಂದು ನನಗೆ ಮನವರಿಕೆ ಮಾಡಿಕೊಟ್ಟರು. ನೆರೆಹೊರೆಯವರಿಗೆ ಈ ವಿಷಾದದ ಸಂಗತಿ ಗೋಚರಿಸದಂತೆ ಮನೆಯ ಆಚರಣೆಯನ್ನು ನೋಡಿಕೊಂಡುದುದು ಮಾತ್ರವೇ ಅಲ್ಲ, ಅದಾದ ಒಂದು ವಾರದಲ್ಲಿಯೇ ಹಿರಿಯ ಮಗಳ ಮದುವೆಯನ್ನು ಸರಳವಾಗಿ ಮಾಡಿ ಮುಗಿಸಿದರು. ನನ್ನ ಮೂರನೆಯ ಮಗುವಿಗೆ ಪೋಲಿಯೊ ಒಂದು ಕಾಲು ವಾಸಿಯಾಗುವುದಿಲ್ಲ ಎಂದು ವೈದ್ಯರು ಹೇಳಿದಾಗ ಅಪಾರ ವೇದನೆಯಾದರೂ ಅದನ್ನು ಹೊರಗೆ ತೋರಿಸಲಿಲ್ಲ. ನಾನು ವ್ಯಥೆಗೊಳ್ಳಲೂ ಅವಕಾಶ ಕೊಡಲಿಲ್ಲ. ತಮಗೆ ಕಾಯಿಲೆಯಾದಾಗ ಅರಮನೆಯ ವೈದ್ಯರು ಬಂದು ನೋಡಲೆಂದು ನಾವು ಅಂದುಕೊಂಡಾಗ ಅವರು ‘‘ದೈವದ ಚಿತ್ತ ಹೇಗಿದೆಯೋ ಹಾಗಾಗುತ್ತದೆ. ತೇನ ವಿನಾ ತೃಣಮಪಿನ ಚಲತಿ’’ ಎಂದು ನನ್ನನ್ನು ಸಮಾಧಾನ ಪಡಿಸಿದರು.

ನನ್ನ ಜೀವಿತದ ಹೊಂಗಿರಣವಾಗಿದ್ದ ಆ ಮಹಾಪುರುಷರ ನೆನಪಿನಲ್ಲಿಯೇ ನನ್ನ ಬಾಳನ್ನು ಸವೆಸುವ ಆಕಾಂಕ್ಷೆ ನನ್ನದು. ನನ್ನವರ ಆ ಆದರ್ಶ ಜೀವನವನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಬಂದಿರುವುದು, ನನ್ನ ಹಿರಿಯ ಮಗನಂತಿರುವ ಶಾಮರಾಯರ ಪ್ರೀತಿ, ವಿಶ್ವಾಸ, ಸರಳತೆ, ವಿಚಾರ, ಔದಾರ್ಯ ಮೊದಲಾದವು ನನ್ನವರ ಸ್ಮರಣೆಯನ್ನು ಮರುಕಳಿಸುವಂತೆ ಮಾಡಿವೆ.

Writer - ಶ್ರೀಮತಿ ರುಕ್ಮಿಣಿಯಮ್ಮ

contributor

Editor - ಶ್ರೀಮತಿ ರುಕ್ಮಿಣಿಯಮ್ಮ

contributor

Similar News