ಟಿಪ್ಪು ಸುಲ್ತಾನನ ರಾಜನೀತಿ: ಟಿಪ್ಪು ಸುಲ್ತಾನನ ಕೃಷಿ ನೀತಿ

Update: 2017-09-24 11:24 GMT

ಒಂದು ಸಮಾಜದ ಆರ್ಥಿಕ ಬೆನ್ನೆಲುಬು ಕೃಷಿ ಎಂದು ಟಿಪ್ಪು ಸುಲ್ತಾನ ಬಲವಾಗಿ ನಂಬಿದ್ದ. ಜನ ಕಲ್ಯಾಣದ ದೃಷ್ಟಿಯಿಂದಲೂ ಕೃಷಿಯ ಮಹತ್ವವನ್ನು ಮನಗಂಡಿದ್ದ ಟಿಪ್ಪು ಕೃಷಿ ಮತ್ತು ಭೂ ಸುಧಾರಣೆಗೆ ಸಂಬಂಧಿಸಿದ ಹಲವು ಆದೇಶಗಳನ್ನು ಹೊರಡಿಸಿದ್ದ. ಈ ಆದೇಶಗಳ ಹೇಗಿದ್ದವು ನೋಡಿ:

1788ರಲ್ಲಿ ಟಿಪ್ಪು ಸುಲ್ತಾನ ತನ್ನ ರಾಜ್ಯದ ಅಮಲ್ದಾರರಿಗೆ ಹೊರಡಿಸಿದ ಆದೇಶದಲ್ಲಿ ಹೀಗೆ ಬರೆಯುತ್ತಾನೆ: ‘‘ಕೃಷಿ ಈ ರಾಜ್ಯದ ಬೆನ್ನೆಲುಬು. ಫಲವತ್ತಾದ ಈ ಭೂಮಿಯಲ್ಲಿ ದುಡಿಯುವವರನ್ನು ಅದೆಂದೂ ಕೈಬಿಡುವುದಿಲ್ಲ. ಕ್ಷಾಮ ಮತ್ತು ಕೊರತೆ ಎನ್ನುವುದು ಕೃಷಿಯ ಬಗ್ಗೆ ಇರುವ ಉದಾಸೀನ ಅಥವಾ ಅಜ್ಞಾನದ ಅಥವಾ ಭ್ರಷ್ಟಾಚಾರದ ಪರಿಣಾಮವಾಗಿದೆ’’.

ಟಿಪ್ಪುವಿನ ಕೃಷಿ ಚಟುವಟಿಕೆಯು ವೈವಿಧ್ಯಮಯವಾಗಿತ್ತು. ಕಬ್ಬಿನಿಂದ ಹಿಡಿದು ಬಾರ್ಲಿ, ವೀಳ್ಯದೆಲೆ ಮತ್ತು ಅಡಿಕೆಯ ವ್ಯವಸಾಯವನ್ನು ಒಳಗೊಂಡಿತ್ತು. ಆತ ಹೊರಡಿಸಿದ ಫರ್ಮಾನುಗಳನ್ನು ಗಮನಿಸಿದಾಗ ದೂರದೃಷ್ಟಿಯಿಂದ ಆತ ಕೃಷಿ ನೀತಿಯನ್ನು ಎಚ್ಚರಿಕೆಯಿಂದ ರೂಪಿಸಿರುವುದು ಕಂಡುಬರುತ್ತದೆ.

1. ಆದೇಶ ಸಂಖ್ಯೆ-2

‘‘ವರ್ಷಾರಂಭದಲ್ಲಿ ಪ್ರಕಟನೆಯೊಂದನ್ನು ಹೊರಡಿಸಿ ಎಲ್ಲ ರೈತರಿಗೂ ನಮ್ಮ ಶುಭಾಶಯಗಳನ್ನು ತಿಳಿಸಿ ಕೆಲಸ ಆರಂಭಿಸಲು ಸೂಚಿಸಿ. ಜನಸಂಖ್ಯೆ ಹೆಚ್ಚಾಗಿದ್ದು, ಫಲವತ್ತಾದ ಭೂಮಿ ಕಡಿಮೆ ಇರುವುದರಿಂದ ಇಳುವರಿಯನ್ನು ಹೆಚ್ಚಾಗಿಸಲು ಸೂಚಿಸಿ. ಬಡ ರೈತರು ಭೂಮಿಯನ್ನು ಉಳುಮೆ ಮಾಡುವ ಭರವಸೆ ನೀಡಿದರೆ ಒಂದು ನೇಗಿಲಿಗೆ 3 ಅಥವಾ 4 ಚಿನ್ನದ ನಾಣ್ಯಗಳನ್ನು ಅಲ್ಪಾವಧಿ ಸಾಲವಾಗಿ ನೀಡುವುದು. ಆಹಾರ ಧಾನ್ಯದ ಉತ್ಪಾದನೆ ಹೆಚ್ಚಿಸುವಂತೆ ಅವರಿಗೆ ಸೂಚಿಸಿ ಎರಡು ವರ್ಷಗಳಲ್ಲಿ ಭೂ ಕಂದಾಯ ವಸೂಲಿ ಮಾಡುವುದು’’.

Similar News