ಭಾರತದಿಂದ ಅಫ್‌ಸ್ಪಾ,ಚಿತ್ರಹಿಂಸೆ ಮತ್ತು ಗೋಮಾಂಸ ದಾಳಿಗಳ ಕುರಿತ ವಿಶ್ವಸಂಸ್ಥೆಯ ಶಿಫಾರಸುಗಳ ನಿರ್ಲಕ್ಷ್ಯ

Update: 2017-09-24 14:25 GMT

ಹೊಸದಿಲ್ಲಿ,ಸೆ.24: ಸೆ.21ರಂದು ಜಿನಿವಾದಲ್ಲಿ ನಡೆದಿದ್ದ ವಿಶ್ವಸಂಸ್ಥೆಯ ಸಭೆಯಲ್ಲಿ ಹಲವಾರು ಪ್ರಮುಖ ಮಾನವ ಹಕ್ಕು ಶಿಫಾರಸುಗಳನ್ನು ಕಡೆಗಣಿಸಿದ್ದಕ್ಕಾಗಿ ಹ್ಯೂಮನ್ ರೈಟ್ಸ್ ವಾಚ್(ಎಚ್‌ಆರ್‌ಡಬ್ಲೂ)ಭಾರತವನ್ನು ಕಟುವಾಗಿ ಟೀಕಿಸಿದೆ. ಭಾರತದ ಭದ್ರತಾ ಪಡೆಗಳ ಹೆಚ್ಚಿನ ಉತ್ತರದಾಯಿತ್ವ, ಅಭಿವ್ಯಕ್ತಿ ಸ್ವಾತಂತ್ರ ಮತ್ತು ಶಾಂತಿಯುತ ಸಮಾವೇಶಗಳಿಗೆ ರಕ್ಷಣೆ, ಸಲಿಂಗರತಿಯನ್ನು ಅಪರಾಧವನ್ನಾಗಿಸಿರುವ ಕಾಯ್ದೆಯ ರದ್ದತಿ ಮತ್ತು ಮರಣ ದಂಡನೆ ರದ್ದು ಇತ್ಯಾದಿಗಳು ಈ ಶಿಫಾರಸುಗಳಲ್ಲಿ ಸೇರಿವೆ.

ಮೇ 4ರಂದು ನಡೆದಿದ್ದ ತನ್ನ ಮೂರನೇ ಯೂನಿವರ್ಸಲ್ ಪೀರಿಯಾಡಿಕ್ ರಿವ್ಯೆ(ಯುಪಿಆರ್) ಸಭೆಯಲ್ಲಿ ವಿಶ್ವಸಂಸ್ಥೆಯ ಇತರ ಸದಸ್ಯ ರಾಷ್ಟ್ರಗಳು ಮಾಡಿದ್ದ ಶಿಫಾರಸುಗಳಿಗೆ ಸೆ.21ರಂದು ಪ್ರತಿಕ್ರಿಯಿಸಿದ ಭಾರತವು ಪ್ರಮುಖ ಶಿಫಾರಸುಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿದೆ ಎಂದು ಎಚ್‌ಆರ್‌ಡಬ್ಲೂ ಹೇಳಿದೆ.

ಅಭಿವ್ಯಕ್ತಿ ಸ್ವಾತಂತ್ರದ ಮೇಲಿನ ದಾಳಿಗಳು ಮತ್ತು ದುರ್ಬಲ ಸಮುದಾಯಗಳಿಗೆ ಬೆದರಿಕೆಗಳು ಹೆಚ್ಚುತ್ತಿದ್ದರೂ ಭಾರತ ಸರಕಾರವು ನಿರಾಕರಿಸಿದೆ ಎಂದು ಹೇಳಿದ ಎಚ್‌ಆರ್‌ಡಬ್ಲೂದ ದಕ್ಷಿಣ ಏಷ್ಯಾ ನಿರ್ದೇಶಕಿ ಮೀನಾಕ್ಷಿ ಗಂಗೂಲಿ ಅವರು, ಭಾರತವು ಮಾನವ ಹಕ್ಕುಗಳ ಕುರಿತು ಇತರ ರಾಷ್ಟ್ರಗಳು ವ್ಯಕ್ತಪಡಿಸಿರುವ ಕಳವಳಗಳನ್ನು ಗಂಭೀರವಾಗಿ ಪರಿಗಣಿಸುವ ಮತ್ತು ಅವುಗಳನ್ನು ಬಗೆಹರಿಸಲು ದೃಢವಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ವಿಶ್ವ ವೇದಿಕೆಗೆ ಮಾರ್ಗದರ್ಶಕವಾಗಬೇಕು ಎಂದರು.

ಮೇ 4ರಂದು ನಡೆದಿದ್ದ ಸಭೆಯಲ್ಲಿ 112 ರಾಷ್ಟ್ರಗಳು ಒಟ್ಟು 250 ಶಿಫಾರಸುಗಳನ್ನು ಮಾಡಿದ್ದವು. ಮೇ 21ರಂದು ಭಾರತ ಸರಕಾರವು ಬಡತನ ನಿವಾರಣೆಯ ಉದ್ದೇಶ ಹೊಂದಿರುವ ಸುಸ್ಥಿರ ಅಭಿವೃದ್ಧಿಯ ಗುರಿಗಳತ್ತ ತನ್ನ ಬದ್ಧತೆ, ಸುರಕ್ಷಿತ ಕುಡಿಯುವ ನೀರು ಮತ್ತು ನೈಮರ್ಲ್ಯ ಹಾಗೂ ಮಹಿಳೆಯರು ಮತ್ತು ಮಕ್ಕಳಿಗೆ ಹೆಚ್ಚಿನ ರಕ್ಷಣೆ ಸೇರಿದಂತೆ 152 ಶಿಫಾರಸುಗಳನ್ನು ಒಪ್ಪಿಕೊಂಡಿತ್ತು.

ಚಿತ್ರಹಿಂಸೆ ವಿರುದ್ಧ ವಿಶ್ವಸಂಸ್ಥೆ ನಿರ್ಣಯವನ್ನು ಸ್ಥಿರೀಕರಿಸುವಂತೆ 30 ರಾಷ್ಟ್ರಗಳು ಭಾರತಕ್ಕೆ ಕರೆ ನೀಡಿದ್ದವು. ಭಾರತವು ಎರಡು ದಶಕಗಳ ಹಿಂದೆಯೇ ಈ ನಿರ್ಣಯಕ್ಕೆ ಅಂಕಿತ ಹಾಕಿತ್ತಾದರೂ ಅದನ್ನು ಈವರೆಗೆ ಸ್ಥಿರೀಕರಿಸಿಲ್ಲ. ಮೇ 4ರ ಸಭೆಯಲ್ಲಿ ಭಾರತದಲ್ಲಿ ಚಿತ್ರಹಿಂಸೆ ನಡೆಯುತ್ತಿದೆ ಎನ್ನುವುದನ್ನು ಸರಕಾರವು ಬಲವಾಗಿ ನಿರಾಕರಿಸಿತ್ತು. ಭಾರತೀಯ ಸಂಸ್ಕೃತಿಗೆ ಚಿತ್ರಹಿಂಸೆ ಪರಕೀಯವಾಗಿದೆ ಮತ್ತು ದೇಶದ ಆಡಳಿತದಲ್ಲಿ ಅದಕ್ಕೆ ಸ್ಥಾನವಿಲ್ಲ ಎಂದು ಪ್ರತಿಪಾದಿಸಿದ್ದ ಅದು, ನಿರ್ಣಯವನ್ನು ಸ್ಥಿರೀಕರಿಸಲು ತಾನು ಬದ್ಧವಾಗಿದ್ದೇನೆ ಎಂದು ಹೇಳಿತ್ತು.

ಪೊಲೀಸ್ ಕಸ್ಟಡಿಯಲ್ಲಿ ಸಾವುಗಳ ಕುರಿತು ತನ್ನ ಇತ್ತೀಚಿನ ವರದಿಯಲ್ಲಿ ಎಚ್‌ಆರ್‌ಡಬ್ಲೂ ಮಾಹಿತಿಗಳನ್ನು ಸಂಗ್ರಹಿಸಲು ಅಥವಾ ಬಲವಂತದ ತಪ್ಪೊಪ್ಪಿಗೆಗಳನ್ನು ಪಡೆಯಲು ಚಿತ್ರಹಿಂಸೆಯನ್ನು ಆಗಾಗ್ಗೆ ಬಳಸಲಾಗುತ್ತಿದೆ ಎನ್ನುವದನ್ನು ಬೆಟ್ಟು ಮಾಡಿತ್ತು.

ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ(ಅಫ್‌ಸ್ಪಾ)ಯ ಬಗ್ಗೆಯೂ ಕಳವಳಗಳನ್ನು ವ್ಯಕ್ತಪಡಿಸಿದ ಎಚ್‌ಆರ್‌ಡಬ್ಲೂ ಸರಕಾರವನ್ನು, ಅದರ ಕ್ರಮಗಳನ್ನು ಮತ್ತು ನೀತಿಗಳನ್ನು ಟೀಕಿಸುವ ಎನ್‌ಜಿಒಗಳಿಗೆ ಕಿರಕುಳ ನೀಡಲು, ಬೆದರಿಸಲು ಮತ್ತು ವಿದೇಶಿ ನೆರವನ್ನು ನಿಲ್ಲಿಸಲು ಭಾರತ ಸರಕಾರವು ವಿದೇಶಿ ವಂತಿಗೆಗಳ ನಿಯಂತ್ರಣ ಕಾಯ್ದೆಯಡಿ ನೋಂದಣಿಯನ್ನು ರದ್ದುಗೊಳಿಸುತ್ತಿರುವುದನ್ನೂ ಉಲ್ಲೇಖಿಸಿದೆ.

ಆಡಳಿತ ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ತೀವ್ರವಾದಿ ಹಿಂದು ಗುಂಪು ಗಳಿಂದ ಮುಸ್ಲಿಮರು ಮತ್ತು ದಲಿತರ ಮೇಲಿನ ಗೋಮಾಂಸ ಸಂಬಂಧಿತ ದಾಳಿಗಳು ಮತ್ತು ಹತ್ಯೆ ಪ್ರಕರಣಗಳಲ್ಲಿ ತಪ್ಪಿತಸ್ಥರನ್ನು ಶಿಕ್ಷಿಸುವಲ್ಲಿ ವೈಫಲ್ಯಕ್ಕಾಗಿಯೂ ಎಚ್‌ಆರ್‌ಡಬ್ಲೂ ಸರಕಾರವನ್ನು ತರಾಟೆಗೆತ್ತಿಕೊಂಡಿದೆ. ಇದೇ ವೇಳೆ ಹಲವಾರು ಬಿಜೆಪಿ ನಾಯಕರು ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಿರುವುದನ್ನೂ ಅದು ಬೆಟ್ಟು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News