ಈಕ್ವಿಟಿ ಮ್ಯೂಚ್ಯುವಲ್ ಫಂಡ್‌ಗಳಲ್ಲಿ ಹೂಡಿಕೆಯ ಮೂಲಕ ಕೋಟ್ಯಧಿಪತಿಯಾಗುವುದು ಹೇಗೆ?

Update: 2017-09-25 07:01 GMT

ಹೆಚ್ಚಿನವರು ಕೋಟ್ಯಧಿಪತಿಯಾಗಬೇಕೆಂಬ ಕನಸು ಹೊಂದಿರುತ್ತಾರೆ. ಇಂತಹ ಕನಸು ಕನಸಾಗಿಯೇ ಉಳಿಯುವುದು ಹೆಚ್ಚು. ಆದರೆ ದುಡಿಯಲು ಆರಂಭಿಸಿದ ಹೊತ್ತಿನಲ್ಲೇ ಹಣಕಾಸನ್ನು ಸೂಕ್ತವಾಗಿ ನಿರ್ವಹಿಸಿದರೆ ಈ ಕನಸು ನನಸಾಗುವುದು ಕಷ್ಟವೇನಲ್ಲ. ಲಾಭದಾಯಕ ಉಳಿತಾಯ ಯೋಜನೆಗಳಲ್ಲಿ ಹಣವನ್ನು ನಿಯಮಿತವಾಗಿ ಹೂಡಿಕೆ ಮಾಡುತ್ತಿದ್ದರೆ ಕೋಟ್ಯಧಿಪತಿಯಾಗಬಹುದು. ಸುದೀರ್ಘ ಅವಧಿಗೆ ಉತ್ತಮ ಪ್ರತಿಫಲಕ್ಕಾಗಿ ಈಕ್ವಿಟಿ ಮ್ಯೂಚ್ಯುವಲ್ ಫಂಡ್‌ಗಳಲ್ಲಿ ಹಣ ಹೂಡಿಕೆಯು ನಿಮ್ಮ ಕನಸನ್ನು ನನಸಾಗಿಸಲು ಒಂದು ಸರಳವಾದ ಮಾರ್ಗವಾಗಿದೆ.

ಸಮಯ ಮತ್ತು ಹಣದ ನಡುವೆ ಖಚಿತವಾದ ಸಂಬಂಧವಿದೆ. ನಿಮ್ಮ ಬಳಿ ಹೂಡಿಕೆ ಮಾಡಲು ಸ್ವಲ್ವವೇ ಹಣವಿದ್ದರೆ ನಿಮ್ಮ ಗುರಿಸಾಧನೆಗೆ ಹೆಚ್ಚು ಸಮಯ ಕಾಯಬೇಕಾಗುತ್ತದೆ. ನಿಮ್ಮ ಬಳಿ ಹೆಚ್ಚಿನ ಹಣವಿದ್ದರೆ, ನಿಮ್ಮ ಯೋಜನೆ ಮತ್ತು ಹೂಡಿಕೆಯ ವಿಧಾನ ಸೂಕ್ತವಾಗಿದ್ದರೆ ನಿಮ್ಮ ಗುರಿಯನ್ನು ಬೇಗನೆ ತಲುಪಬಹುದು.

ನೀವು ಮ್ಯೂಚ್ಯುವಲ್ ಫಂಡ್‌ಗಳಲ್ಲಿ ಹಣ ತೊಡಗಿಸುವ ಮುನ್ನ ಎಷ್ಟು ಹಣವನ್ನು ಹೂಡಿಕೆ ಮಾಡಬೇಕು ಮತ್ತು ಕೋಟ್ಯಧಿಪತಿಯಾಗುವ ಗುರಿ ಮುಟ್ಟಲು ಎಷ್ಟು ಸಮಯ ಹೂಡಿಕೆ ಮಾಡುತ್ತಿರಬೇಕು ಎಂಬ ಈ ಎರಡು ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳ ಬೇಕಾಗುತ್ತದೆ. ನೀವು ದುಡಿಯಲು ಆರಂಭಿಸಿದ ಹೊತ್ತಿನಲ್ಲೇ ಹೂಡಿಕೆ ಆರಂಭಿಸಲು ಬಯಸಿದ್ದರೆ ನೀವು ಕಡಿಮೆ ಹಣವನ್ನು ತೊಡಗಿಸಿ ಹೆಚ್ಚಿನ ಪ್ರತಿಫಲವನ್ನು ಗಳಿಸಲು ಅಪಾಯದ ಸವಾಲನ್ನು ಸುಲಭವಾಗಿ ಎದುರಿಸಬಹುದು. ನೀವು ಮಧ್ಯವಯಸ್ಕರಾಗಿದ್ದರೆ ಹೆಚ್ಚಿನ ಅಪಾಯವನ್ನು ಎದುರು ಹಾಕಿಕೊಳ್ಳದೆ ಕೋಟ್ಯಧಿಪತಿಯಾಗುವ ಗುರಿಯತ್ತ ಸಾಗಬಹುದು.

 ಎಳೆಯ ವಯಸ್ಸಿನಲ್ಲಿಯೇ ಮ್ಯೂಚ್ಯುವಲ್ ಫಂಡ್‌ಗಳಲ್ಲಿ ಪ್ರತಿ ತಿಂಗಳು ಕನಿಷ್ಠ 700 ರೂ.ಗಳಷ್ಟು ಸಣ್ಣಮೊತ್ತವನ್ನು ತೊಡಗಿಸಿದರೆ ಮತ್ತು ನಿಮ್ಮ ಹೂಡಿಕೆಗೆ ವಾರ್ಷಿಕ ಶೇ.15ರಷ್ಟು ಬಡ್ಡಿ ಲಭಿಸುತ್ತದೆ ಎಂದಿಟ್ಟುಕೊಂಡರೆ 35 ವರ್ಷಗಳಲ್ಲಿ ನೀವು ಕೋಟ್ಯಧಿಪತಿಯಾಗಲು ಸಾಧ್ಯ.

ಆದರೆ ವಿಳಂಬವಾಗಿ ಹೂಡಿಕೆಯನ್ನು ಆರಂಭಿಸಿದರೆ ಕೋಟ್ಯಧಿಪತಿಯಾಗುವ ಗುರಿಯನ್ನು ಸಾಧಿಸಲು ನೀವು ಪ್ರತಿ ತಿಂಗಳು ಹೆಚ್ಚು ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ. ಉದಾಹರಣೆಗೆ ನೀವು ಪ್ರತಿ ತಿಂಗಳು 5,500 ರೂ.ಗಳನ್ನು 25 ವರ್ಷಗಳವರೆಗೆ ಹೂಡಿಕೆ ಮಾಡಿದರೆ ಮತ್ತು ವಾರ್ಷಿಕ ಬಡ್ಡಿದರವನ್ನು ಶೇ.12 ಎಂದಿಟ್ಟುಕೊಂಡರೆ ಒಂದು ಕೋಟಿ ರೂ.ಗಳ ಗುರಿಯನ್ನು ನೀವು ತಲುಪಬಹುದು.

20 ವರ್ಷಗಳವರೆಗೆ ಪ್ರತಿ ತಿಂಗಳು 13,500 ರೂ.ಗಳನ್ನು ತೊಡಗಿಸಿದರೆ ವಾರ್ಷಿಕ ಶೇ.10 ಬಡ್ಡಿದರ ಗಳಿಸುವ ಮೂಲಕ ಕೋಟ್ಯಾಧೀಶರಾಗಬಹುದು.
ಕೋಟ್ಯಧಿಪತಿಯಾಗಲು ವಿವಿಧ ವಯೋಮಾನದವರು ಮಾಡಬೇಕಾದ ಹೂಡಿಕೆಯ ಮಾಹಿತಿ ಇಲ್ಲಿದೆ.

ವಾರ್ಷಿಕ ಶೇ.12-15 ಬಡ್ಡಿಯನ್ನು ಗಳಿಸಬೇಕೆಂದಿದ್ದರೆ ನೀವು ಉತ್ತಮ ಶೇರುಗಳನ್ನು ಖರೀದಿಬಹುದು. ಆದರೆ ಮಾರುಕಟ್ಟೆಯ ಏರಿಳಿತಗಳನ್ನು ಎದುರಿಸುವ ಧೈರ್ಯವಿಲ್ಲದಿದ್ದರೆ ಈಕ್ವಿಟಿ ಮ್ಯೂಚ್ಯುವಲ್ ಫಂಡ್‌ಗಳನ್ನು ಆಯ್ದುಕೊಳ್ಳಬಹುದು. ಈಕ್ವಿಟಿ ಮ್ಯೂಚ್ಯುವಲ್ ಫಂಡ್ ಆಯ್ಕೆ ಮಾಡಿಕೊಳ್ಳುವಾಗ ನಿಮ್ಮ ಪೋರ್ಟ್‌ಫೋಲಿಯೊ ಶೇ.30-40ರಷ್ಟು ಮಿಡ್ ಕ್ಯಾಪ್/ಸ್ಮಾಲ್ ಕ್ಯಾಪ್ ಫಂಡ್‌ಗಳನ್ನು ಮತ್ತು ಉಳಿದ ಶೇ.60-70 ಡೈವರ್ಸಿಫೈಡ್ ಫಂಡ್, ಲಾರ್ಜ್ ಕ್ಯಾಪ್ ಫಂಡ್ ಇತ್ಯಾದಿಗಳನ್ನು ಒಳಗೊಂಡಿರಬೇಕು.

ವಾರ್ಷಿಕ ಶೇ.10-12 ಬಡ್ಡಿದರವನ್ನು ಕಾಯ್ದುಕೊಳ್ಳಲು ಹೆಚ್ಚಿನ ಅಪಾಯವಿಲ್ಲದ ಬ್ಯಾಲೆನ್ಸಡ್/ಹೈಬ್ರಿಡ್ ಫಂಡ್ ಇತ್ಯಾದಿಗಳಲ್ಲಿ ಹೂಡಿಕೆ ಮಾಡಬಹುದು. ಇಂತಹ ಪ್ರಕರಣಗಳಲ್ಲಿ ಮಿಡ್ ಕ್ಯಾಪ್/ಸ್ಮಾಲ್ ಕ್ಯಾಪ್ ಫಂಡ್‌ಗಳಲ್ಲಿ ಕಡಿಮೆ ಹೂಡಿಕೆ ಅಥವಾ ಹೂಡಿಕೆಯೇ ಇಲ್ಲದಂತೆ ನೋಡಿಕೊಳ್ಳಬೇಕು. ನೆನಪಿಡಿ,ಮಿಡ್ ಕ್ಯಾಪ್/ಸ್ಮಾಲ್ ಕ್ಯಾಪ್ ಶೇರುಗಳು ಹೆಚ್ಚಿನ ಪ್ರತಿಫಲ ನೀಡುತ್ತವೆಯಾದರೂ ನಷ್ಟವನ್ನೂ ಅದೇ ಪ್ರಮಾಣದಲ್ಲಿ ಉಂಟು ಮಾಡುತ್ತವೆ.

ಹಣ ಹೂಡಿಕೆಗೆ ಪಿಂಚಣಿ ಯೋಜನೆಗಳು, ಎನ್‌ಪಿಎಸ್‌ಗಳೂ ಇವೆ. ಆದರೆ ಇಲ್ಲಿಯೂ ನಿಮ್ಮ ಹೂಡಿಕೆಗಳು ಶೇರು ಮಾರುಕಟ್ಟೆಯೊಂದಿಗೆ ತಳುಕು ಹಾಕಿಕೊಂಡಿರುತ್ತವೆ. ಅಲ್ಲದೆ ಕೆಲವು ಯೋಜನೆಗಳಲ್ಲಿ ಪ್ರತಿಫಲವು ಸರಕಾರದ ನಿಯಮಗಳಂತೆ ಬದಲಾವಣೆಗೆ ಒಳಪಟ್ಟಿರುತ್ತವೆ. ಫಿಕ್ಸಡ್ ಡಿಪಾಸಿಟ್, ರಾಷ್ಟ್ರೀಯ ಉಳಿತಾಯ ಯೋಜನೆ ಇತ್ಯಾದಿಗಳಲ್ಲಿ ಹೂಡಿಕೆ ನೀಡುವ ಪ್ರತಿಫಲ ತುಂಬ ಕಡಿಮೆಯಾಗಿರುತ್ತದೆ ಮತ್ತು ಇದು ಗರಿಷ್ಠ ಅವಧಿಯಲ್ಲಿಯೂ ಕೋಟ್ಯಧಿಪತಿಯಾಗುವ ನಿಮ್ಮ ಕನಸನ್ನು ಈಡೇರಿಸದಿರಬಹುದು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News