ಮೊಯಿನ್ ಅಲಿ ಮಿಂಚಿನ ಶತಕ: ಇಂಗ್ಲೆಂಡ್ ಜಯಭೇರಿ

Update: 2017-09-25 10:01 GMT

ಲಂಡನ್, ಸೆ.25: ಆಲ್‌ರೌಂಡರ್ ಮೊಯಿನ್ ಅಲಿ ಬಾರಿಸಿದ ಮಿಂಚಿನ ಶತಕದ ಸಹಾಯದಿಂದ ಇಂಗ್ಲೆಂಡ್ ತಂಡ ವೆಸ್ಟ್‌ಇಂಡೀಸ್ ವಿರುದ್ಧ ರವಿವಾರ ನಡೆದ ಮೂರನೆ ಏಕದಿನ ಪಂದ್ಯವನ್ನು 124 ರನ್‌ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಗಳಿಸಿದೆ.

ಅಲಿ ಕೇವಲ 53 ಎಸೆತಗಳಲ್ಲಿ ಸಿಡಿಸಿದ ಶತಕದ ಸಹಾಯದಿಂದ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 9 ವಿಕೆಟ್‌ಗಳ ನಷ್ಟಕ್ಕೆ 369 ರನ್ ಕಲೆ ಹಾಕಿತ್ತು. ಗೆಲುವಿಗೆ ಕಠಿಣ ಸವಾಲು ಪಡೆದಿದ್ದ ವಿಂಡೀಸ್ ಸ್ಟಾರ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್‌ರ 94 ರನ್ ಹೊರತಾಗಿಯೂ 245 ರನ್‌ಗೆ ಆಲೌಟಾಯಿತು.

ಇಂಗ್ಲೆಂಡ್‌ನ ವೇಗದ ಬೌಲರ್ ಲಿಯಾಮ್ ಪ್ಲಂಕೆಟ್(5-52) ಜೀವನಶ್ರೇಷ್ಠ ಬೌಲಿಂಗ್‌ನ ಮೂಲಕ ಇನ್ನೂ 65 ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದಕ್ಕೆ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ಇಂಗ್ಲೆಂಡ್ ತಂಡ ಆಲ್‌ರೌಂಡರ್ ಅಲಿ ಶತಕದ(102 ರನ್, 53 ಎಸೆತ, 7ಬೌಂಡರಿ, 8 ಸಿಕ್ಸರ್)ನೆರವಿನಿಂದ ವಿಂಡೀಸ್ ವಿರುದ್ಧ ಇದೇ ಮೊದಲ ಬಾರಿ 369 ರನ್ ಕಲೆಹಾಕಿತು. 2009ರಲ್ಲಿ 7 ವಿಕೆಟ್ ನಷ್ಟಕ್ಕೆ 328 ರನ್ ಗಳಿಸಿತ್ತು.
‘ಪಂದ್ಯಶ್ರೇಷ್ಠ’ ಗೌರವಕ್ಕೆ ಪಾತ್ರರಾದ ಅಲಿ ಅತ್ಯಂತ ವೇಗವಾಗಿ ಶತಕ ಬಾರಿಸಿದ ಇಂಗ್ಲೆಂಡ್‌ನ 2ನೆ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಬಟ್ಲರ್ 2015ರಲ್ಲಿ ದುಬೈನಲ್ಲಿ ಪಾಕಿಸ್ತಾನ ವಿರುದ್ಧ 46 ಎಸೆತಗಳಲ್ಲಿ ಶತಕ ಸಿಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News