ಕೋಮು ಸಂಘರ್ಷ ಸೃಷ್ಟಿಗೆ ಯತ್ನಿಸುವವರ ವಿರುದ್ಧ ಕ್ರಮಕ್ಕೆ ಒತ್ತಾಯ

Update: 2017-09-25 13:53 GMT

ಬೆಂಗಳೂರು, ಸೆ. 25: ಚಾಮರಾಜನಗರದ ಗಾಳಿಪುರ ಬಡಾವಣೆ, ಗಣೇಶ ದೇವಸ್ಥಾನದ ಮೇಲಿನ ಕೇಸರಿ ಧ್ವಜ ಸುಟ್ಟ ಪ್ರಕರಣದ ಸಂಬಂಧ ಸಂಘ ಪರಿವಾರದ ಇಬ್ಬರನ್ನು ಬಂಧಿಸಲಾಗಿದೆ. ಚುನಾವಣಾ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕೋಮು ಗಲಭೆ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಎಸ್‌ಡಿಪಿಐ ನಿಯೋಗ ಮನವಿ ಸಲ್ಲಿಸಿತು.

ವಿಕಾಸ ಸೌಧದಲ್ಲಿನ ಗೃಹ ಸಚಿವರ ಕಚೇರಿಯಲ್ಲಿ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ರಾಜ್ಯ ಸಮಿತಿ ಸದಸ್ಯ ಹನೀಫ್ ಖಾನ್, ಬಿಬಿಎಂಪಿ ಕಾರ್ಪೊರೇಟರ್ ಮುಜಾಹಿದ್ ಪಾಷ ಅವರಿದ್ದ ನಿಯೋಗ ಮನವಿ ಸಲ್ಲಿಸಿದೆ.

ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ರಾಜ್ಯದಲ್ಲಿ ಅಹಿತಕರ ಘಟನೆಗಳ ಮೂಲಕ ಕಾನೂನು ಸುವ್ಯವಸ್ಥೆ ಹದಗೆಡಿಸಿ, ಕೋಮು ಸೌಹಾರ್ದತೆ ಹಾಳು ಮಾಡಿ ಕೋಮು ಗಲಭೆ ಸೃಷ್ಟಿಸಿ, ಪರಿಸ್ಥಿತಿಯ ಲಾಭ ಪಡೆಯಲು ಕೆಲ ಶಕ್ತಿಗಳು ಯತ್ನಿಸುತ್ತಿದ್ದು, ಅವುಗಳನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಲಾಗಿದೆ.

ಚಾಮರಾಜನಗರದ ಪ್ರಕರಣ ಸಂಬಂಧ ಈಗಾಗಲೇ ಸಂಘ ಪರಿವಾರಕ್ಕೆ ಸೇರಿದ ಪ್ರಕಾಶ್ ಮತ್ತು ಬಂಗಾರು ಎಂಬವರನ್ನು ಬಂಧಿಸಿದ್ದಾರೆ. ಅದೇ ರೀತಿಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೈದ ಹಂತಕರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News