ಭಡ್ತಿ ಮೀಸಲಾತಿ: ಸುಪ್ರೀಂ ಕೋರ್ಟ್ ತೀರ್ಪು ಜಾರಿಯಾಗಲಿ

Update: 2017-09-25 14:01 GMT

ಬೆಂಗಳೂರು, ಸೆ.25: ಮೀಸಲು ಭಡ್ತಿ ಬದಲು ಸೇವಾ ಜೇಷ್ಠತೆಯಾಧಾರದಲ್ಲಿ ಭಡ್ತಿ ನೀಡುವ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ರಾಜ್ಯ ಸರಕಾರ ಯಥಾವತ್ತಾಗಿ ಕೂಡಲೇ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಕೆಪಿಟಿಸಿಎಲ್ ಜನರಲ್ ಕೆಟಗರಿ ಅಸೋಸಿಯೇಶನ್ ವತಿಯಿಂದ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು.

ಸೋಮವಾರ ರಾಜ್ಯದ ವಿವಿಧ ಭಾಗಗಳಿಂದ ಕೆಪಿಟಿಸಿಎಲ್ ಸಾಮಾನ್ಯ ವರ್ಗದ ಇಂಜಿನಿಯರ್‌ಗಳು ಹಾಗೂ ನೌಕರರು ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಜಮಾವಣೆಗೊಂಡು ಭಡ್ತಿ ಮೀಸಲು ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಈ ಕೂಡಲೇ ಜಾರಿ ಮಾಡಬೇಕು. ಆ ಮೂಲಕ ಸಮಾನತೆಯ ಆಶಯವನ್ನು ಎತ್ತಿಹಿಡಿಯಬೇಕೆಂದು ಒತ್ತಾಯಿಸಿದರು.

ಈ ವೇಳೆ ಕೆಪಿಟಿಸಿಎಲ್ ಇಂಜನಿಯರ್‌ಗಳ ಸಂಘದ ಅಧ್ಯಕ್ಷ ಶಿವಪ್ರಕಾಶ್ ಮಾತನಾಡಿ, ಕೆಪಿಟಿಸಿಎಲ್‌ನಲ್ಲಿ 2013ರಿಂದ ನೇಮಕವಾದ 60ಕ್ಕೂ ಹೆಚ್ಚು ಮುಖ್ಯ ಇಂಜಿನಿಯರ್ ಹುದ್ದೆಗಳಿಗೆ ಮೀಸಲು ವರ್ಗದವರನ್ನೇ ನೇಮಕ ಮಾಡಲಾಗಿದೆ. ಇದರಿಂದ ಕೆಪಿಟಿಸಿಎಲ್‌ನ ಸಾಮಾನ್ಯ ವರ್ಗದವರಿಗೆ ಮುಖ್ಯ ಇಂಜಿನಿಯರ್ ಹುದ್ದೆ ಗಗನ ಕುಸುಮವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

1978ರಿಂದ ನೀಡಿದ್ದ ಎಲ್ಲಾ ಪದೋನ್ನತಿಗಳನ್ನು ಬಹಿಷ್ಕರಿಸಿ ಹೊಸ ಸೇವಾ ಜೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದ್ದರೂ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಸಂಬಂಧ ಈಗಾಗಲೇ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಹಾಗಾಗಿ ಹೋರಾಟ ನಡೆಸುವುದು ಅನಿವಾರ್ಯವಾಯಿತು ಎಂದರು.

ಈ ಬೃಹತ್ ಸಮಾವೇಶದ ನಂತರ ಸ್ವಾತಂತ್ರ ಉದ್ಯಾನವನದಿಂದ ಕಾವೇರಿ ಭವನದವರೆಗೂ ಜಾಥಾ ನಡೆಸಿ ಕಾವೇರಿ ಭವನದಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ಗೆ ಮನವಿ ಸಲ್ಲಿಸಿದರು.

ಸಮಾವೇಶದಲ್ಲಿ ಕೆಪಿಟಿಸಿಎಲ್‌ನ ಮುಖ್ಯ ಇಂಜಿನಿಯರ್‌ಗಳಾದ ಸುಬ್ರಹ್ಮಣ್ಯ, ಅಶೋಕ್‌ಕು ಮಾರ್ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಇಂಜಿನಿಯರ್‌ಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.

ಭಡ್ತಿ ಮೀಸಲಾತಿ ಕುರಿತು ಗೊಂದಲವಿರುವುದು ಕೇವಲ ಇಂಧನ ಇಲಾಖೆಯಲ್ಲಿ ಮಾತ್ರವಲ್ಲ. ಸರಕಾರದ ಹಲವು ಇಲಾಖೆಗಳಲ್ಲಿ ಈ ಸಮಸ್ಯೆಯಿದೆ. ಹೀಗಾಗಿ ಮುಂದಿನ ಸಚಿವ ಸಂಪುಟದಲ್ಲಿ ಈ ಕುರಿತು ಕೂಲಂಕಶವಾಗಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.
-ಡಿ.ಕೆ.ಶಿವಕುಮಾರ್ , ಸಚಿವ ಇಂಧನ ಇಲಾಖೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News