ಮುಂದಿನ ಅಧಿವೇಶನದಲ್ಲಿ ವಿಧೇಯಕ ಮಂಡನೆ: ಸಚಿವ ಜಯಚಂದ್ರ

Update: 2017-09-25 14:37 GMT

ಬೆಂಗಳೂರು, ಸೆ.25: ಎಸ್ಸಿ-ಎಸ್ಟಿ ನೌಕರರು ಹಾಗೂ ಅಧಿಕಾರಿಗಳಿಗೆ ಭಡ್ತಿ ಮೀಸಲಾತಿ ನೀಡುವ ಕುರಿತು ವಿಧಾನಮಂಡಲದ ಉಭಯ ಸದನಗಳ ಮುಂದಿನ ಅಧಿವೇಶನದಲ್ಲಿ ವಿಧೇಯಕವನ್ನು ಮಂಡನೆ ಮಾಡಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಜೇಷ್ಠತಾ ಪಟ್ಟಿ ಸಲ್ಲಿಸಲು ನವೆಂಬರ್ 30ರವರೆಗೆ ಸಮಯ ನೀಡಿದೆ. ಭಡ್ತಿ ಮೀಸಲು ಮುಂದುವರೆಸುವ ಸಂಬಂಧ ರಾಜ್ಯ ಸರಕಾರ ಸುಗ್ರೀವಾಜ್ಞೆಯನ್ನು ಹೊರಡಿಸಿತ್ತು. ಆದರೆ, ರಾಜ್ಯಪಾಲರು ಸುಗ್ರೀವಾಜ್ಞೆಗೆ ಅಂಕಿತ ಹಾಕದೆ, ಸದನದಲ್ಲಿ ಚರ್ಚೆ ನಡೆಸುವಂತೆ ಸಲಹೆ ನೀಡಿದ್ದಾರೆ. ಮುಂದಿನ ಅಧಿವೇಶನದಲ್ಲಿ ಭಡ್ತಿ ಮೀಸಲಾತಿ ಮುಂದುವರೆಸುವ ವಿಧೇಯಕವನ್ನು ಮಂಡನೆ ಮಾಡಿ ಚರ್ಚಿಸಲಾಗುವುದು ಎಂದು ಹೇಳಿದರು.

ಮೌಢ್ಯ ನಿಷೇಧ ವಿಧೇಯಕ ರಚನೆಗೆ 150 ಸ್ವಾಮೀಜಿಗಳು ತಮ್ಮ ಸಲಹೆಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಿದ್ದಾರೆ. ಯಾವುದೇ ಆಕ್ಷೇಪಗಳಿದ್ದರೂ ನಮಗೆ ಸಲ್ಲಿಸಬಹುದು. ಅದನ್ನು ಪರಿಗಣಿಸುತ್ತೇವೆ. ವಿಧೇಯಕದಲ್ಲಿ ಯಾವುದು ಮೌಢ್ಯ ಮತ್ತು ಯಾವುದು ನಂಬಿಕೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡಲಾಗಿದೆ ಎಂದರು.

ಸಾಂಪ್ರದಾಯಿಕ ಆಚರಣೆಗಳಿಗೆ ಮೌಢ್ಯ ನಿಷೇಧ ಕಾಯ್ದೆ ಜಾರಿಯಿಂದ ಯಾವುದೇ ಆತಂಕವಿಲ್ಲ. ನನ್ನ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಪರಿಶೀಲನಾ ಸಮಿತಿಯಿಂದ ವಿಧೇಯಕದ ಕರಡು ಪರಾಮರ್ಶೆ ಮುಗಿದಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮೌಢ್ಯ ನಿಷೇಧ ವಿಧೇಯಕದ ಕರಡು ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿಸಿದರು.

ಕಾನೂನು ಜಾರಿಯಿಂದ ಮೌಢ್ಯಾಚರಣೆ ತಡೆಯುವುದು ಅಸಾಧ್ಯ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾನೂನು ಜಾರಿಗೊಳಿಸುವುದೇ ಜಾಗೃತಿ ಮೂಡಿಸುವುದಕ್ಕೆ. ಸಾಮಾನ್ಯ ಪೂಜೆ ಪುನಸ್ಕಾರಗಳಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದರು.

ವಿಧಾನಸೌಧದ ವಜ್ರ ಮಹೋತ್ಸವ: ವಿಧಾನಸೌಧದ ವಜ್ರ ಮಹೋತ್ಸವವನ್ನು ಅ.6 ಮತ್ತು 7ರಂದು ಆಚರಿಸಲು ಉದ್ದೇಶಿಸಲಾಗಿತ್ತು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕಾಲಾವಕಾಶ ನೀಡದ ಹಿನ್ನೆಲೆಯಲ್ಲಿ ಸಮಾರಂಭವನ್ನು ಮುಂದೂಡಲಾಗಿದೆ ಎಂದು ಹೇಳಿದರು.

ವಜ್ರ ಮಹೋತ್ಸವದ ಹಿನ್ನೆಲೆಯಲ್ಲಿ ವಿಶೇಷ ಅಧಿವೇಶನ ಕರೆಯುವಂತೆ ರಾಜ್ಯಪಾಲರಿಗೆ ಸ್ಪೀಕರ್ ಕೆ.ಬಿ.ಕೋಳಿವಾಡ ಹಾಗೂ ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮನವಿಯನ್ನು ಸಲ್ಲಿಸಿದ್ದರು. ರಾಷ್ಟ್ರಪತಿ ನೀಡುವ ಕಾಲಾವಕಾಶವನ್ನು ಆಧರಿಸಿ ವಿಧಾನಸೌಧದ ವಜ್ರ ಮಹೋತ್ಸವ ನಡೆಯಲಿದೆ ಎಂದು ತಿಳಿಸಿದರು.

ಘೇರಾವ್ ಆಗಿಲ್ಲ: ತುಮಕೂರು ಜಿಲ್ಲೆಯ ಚಿರತಹಳ್ಳಿ ಗ್ರಾಮವು ಆಂಧ್ರ ಪ್ರದೇಶದ ಗಡಿಭಾಗದಲ್ಲಿರುವ ಹಳ್ಳಿ. ರಾಜಕೀಯ ಪ್ರೇರಿತ ಗುಂಪೊಂದು ನಮ್ಮನ್ನು ಭೇಟಿ ಮಾಡಿ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿತು. ಈ ವೇಳೆ ನಮ್ಮ ಜೊತೆಗಿದ್ದವರಿಗೂ ಆ ಗುಂಪಿಗೂ ಮಾತುಕತೆ ನಡೆದಿದೆ. ಇಷ್ಟು ಬಿಟ್ಟರೆ, ನನಗೆ ಗ್ರಾಮಸ್ಥರು ಘೇರಾವ್ ಹಾಕಿದಂತಹ ಘಟನೆ ನಡೆದಿಲ್ಲ. ಇದೆಲ್ಲ ಸುಳ್ಳು ಸುದ್ದಿ ಎಂದರು.

ಕೆರೆ ಅಭಿವೃದ್ಧಿ ಪ್ರಾಧಿಕಾರದ ಕೆರೆಗಳು ಸಣ್ಣ ನೀರಾವರಿ ವ್ಯಾಪ್ತಿಗೆ ತರಲು ಸರಕಾರ ತೀರ್ಮಾನ ಕೈಗೊಂಡಿದೆ. ಈ ಸಂಬಂಧ ಪ್ರಕ್ರಿಯೆಗಳು ಮುಂದುವರೆಸಲಾಗಿದೆ ಎಂದು ಜಯಚಂದ್ರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News