ಶಿಕ್ಷಕರು ಮನಸ್ಸು ಮಾಡಿದರೆ ನವಭಾರತ ನಿರ್ಮಾಣ ಸಾಧ್ಯ: ದೇವೇಗೌಡ

Update: 2017-09-25 14:44 GMT

ಬೆಂಗಳೂರು, ಸೆ. 25: ಶಿಕ್ಷಕ ಸಮುದಾಯ ಉತ್ತಮ ತಳಪಾಯ ಹಾಕಿದಲ್ಲಿ ಮಾತ್ರ ನವ ಭಾರತ, ನವ ಕರ್ನಾಟಕ ನಿರ್ಮಾಣದ ಕನಸು ನನಸಾಗಲಿದೆ. ಶಿಕ್ಷಕರ ಪಾತ್ರ ಬಹಳ ಮುಖ್ಯ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಸೋಮವಾರ ನಗರದ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಶಾಸಕರ ಕಚೇರಿ ಆವರಣದಲ್ಲಿ ನಡೆದ ಬೆಂಗಳೂರು ಉತ್ತರ ವಲಯ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕ ವೃತ್ತಿಯಿಂದಲೆ ರಾಷ್ಟ್ರದ ರಾಷ್ಟ್ರಪತಿ ಆಗಿದ್ದರು. ಅವರು ಶಿಕ್ಷಕ ವೃತ್ತಿಯನ್ನು ಹೆಚ್ಚಾಗಿ ಗೌರವಿಸುತ್ತಿದ್ದರು. ನಮ್ಮ ಅವಧಿಯಲ್ಲಿ ಎಲ್ಲ ವಲಯದ ಶಿಕ್ಷಣ ಇಲಾಖೆಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಕಲ್ಪಿಸಲಾಗಿತ್ತು. ಇಂದು ಶಿಕ್ಷಕ ಸಮುದಾಯದ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಂದು ತಿಳಿಸಿದರು.

ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳುವಂತೆ ನವ ಭಾರತ ಮತ್ತು ನವ ಕರ್ನಾಟಕ ನಿರ್ಮಾಣಕ್ಕೆ ಶಿಕ್ಷಕರು ಭದ್ರ ಬುನಾದಿ ಹಾಕಿದರೆ ಮಾತ್ರ ಸಾಧ್ಯ. ಶಿಕ್ಷಕರು ಮನಸ್ಸು ಮಾಡಿದರಷ್ಟೇ ನವ ಭಾರತ ನಿರ್ಮಾಣ ಮಾಡಲು ಸಾಧ್ಯ. ನಾನು ಶಿಕ್ಷಕ ಸಮುದಾಯಕ್ಕೆ ಯಾವಾಗಲೂ ಆಭಾರಿಯಾಗಿದ್ದೇನೆ. ಇವತ್ತು ಮಾಡಿದ ಪ್ರಶಸ್ತಿ ಪ್ರದಾನ ಸಮಾರಂಭದಿಂದ ಶಿಕ್ಷಕ ವರ್ಗಕ್ಕೆ ಸ್ಫೂರ್ತಿ ಎಂದರು.

ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಕೆ.ಗೋಪಾಲಯ್ಯ, ಮಾಜಿ ಉಪ ಮೇಯರ್ ಹೇಮಲತಾ ಗೋಪಾಲಯ್ಯ, ಬಿಬಿಎಂಪಿ ಸದಸ್ಯರು ಹಾಗೂ ಸ್ಥಳೀಯ ಜೆಡಿಎಸ್ ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News