ಹೊಸ ಪ್ರತಿಭೆಗಳಿಗೆ ಪರಿಶ್ರಮ ಅಗತ್ಯ: ಡಾ.ಹಂಸಲೇಖ

Update: 2017-09-25 14:49 GMT

ಬೆಂಗಳೂರು, ಸೆ. 25: ಕಲಾ ಪ್ರಪಂಚಕ್ಕೆ ಕಾಲಿಡುವ ಹೊಸ ಪ್ರತಿಭೆಗಳು ಪರಿಶ್ರಮದ ಮೆರುಗಿನಿಂದ ತಮ್ಮನ್ನು ತಾವು ಅಭಿವೃದ್ಧಿಪಡಿಸಿಕೊಳ್ಳಬೇಕು. ಅದು ಅಲ್ಲಿಗೆ ನಿಲ್ಲಬಾರದು, ಸತತವಾಗಿ ಮುಂದುವರಿಯಬೇಕು ಎಂದು ಸಂಗೀತ ನಿರ್ದೇಶಕ ಡಾ. ಹಂಸಲೇಖ ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ಮಲ್ಲೇಶ್ವರಂನ ಎವಿಆರ್ ಪ್ರಿವ್ಯೆ ಚಿತ್ರಮಂದಿರದಲ್ಲಿ ಶರಣ್ಸ್ ಮ್ಯೂಸಿಕ್ ಅಕಾಡಮಿಯಿಂದ ಏರ್ಪಡಿಸಿದ್ದ ‘ಗೆಳೆತನ-ದೋಸ್ತಿ’ ಯೂಟ್ಯೂಬ್ ಅಂತರ್ಜಾಲ ಆವೃತ್ತಿ ಲೋಕಾರ್ಪಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಹಿಂದಿನ ಕಾಲದಲ್ಲಿ ಅನೇಕ ಒಳ್ಳೆಯ ಸಂಗೀತ ನಿರ್ದೇಶಕರಿದ್ದರು. ಆದರೆ, ಅವರಿಗೆ ಸಂಗೀತ ಕಲೆಯನ್ನು ವ್ಯವಸ್ಥಿತವಾಗಿ, ಪ್ರಭಾವಶಾಲಿಯಾಗಿ ಜನರಿಗೆ ತಲುಪಿಸುವ ಚಟುವಟಿಕೆಗಳ ಬಗ್ಗೆ ತಿಳಿದಿರಲಿಲ್ಲ. ಇಂದು ಪರಿಸ್ಥಿತಿ ಬದಲಾಗಿದ್ದು, ಸಾಧಾರಣ ವಿಷಯವನ್ನೂ ಅತ್ಯಂತ ಸಮರ್ಥವಾಗಿ ಜನರ ಮುಂದೆ ಪ್ರಸ್ತುತಪಡಿಸುವ ಮಾಧ್ಯಮಗಳ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿಸಿದರು.

ಗಾಯಕ ರುಮಿತ್ ಎರಡೂ ಆಲ್ಬಮ್‌ಗಳಲ್ಲಿ ಚೆನ್ನಾಗಿ ಹಾಡಿದ್ದಾರೆ. ಅಭಿನಯವೂ ಹದವಾಗಿದೆ. ಅವರಿಗೆ ನನ್ನ ಆಶೀರ್ವಾದ ಸದಾ ಇರುತ್ತದೆ. ವಿದ್ಯಾರ್ಥಿಗಳ ಪ್ರತಿಭೆಯನ್ನು ಬೆಳಕಿಗೆ ತರುವ ಪಂಡಿತ್ ಶರಣ್ ಚೌಧರಿ ಅವರ ಕಾಳಜಿ ಪ್ರಶಂಸನೀಯ. ಅವರಂತಹ ಗುರುಗಳ ಸಂಖ್ಯೆ ಹೆಚ್ಚಾಗಬೇಕು ಎಂದು ಹೇಳಿದರು.

ಹಿಂಜರಿಕೆ ಸ್ವಭಾವದ ಕನ್ನಡಿಗರು ಈಗ ಎಲ್ಲದರಲ್ಲೂ ಮುಂದೆ ಹಾಗೂ ಧೈರ್ಯವಾಗಿ ಮುನ್ನುಗ್ಗುತ್ತಿರುವುದು ಅತ್ಯಂತ ಆರೋಗ್ಯಕರ ಬೆಳವಣಿಗೆ. ಹೊಸಬರು ತಮ್ಮ ಪ್ರತಿಭೆಯನ್ನು, ಪರಿಶ್ರಮದ ಮೆರುಗಿನಿಂದ ಅಭಿವೃದ್ಧಿಪಡಿಸಿಕೊಳ್ಳಬೇಕು. ಇದು ಇಲ್ಲಿಗೆ ನಿಲ್ಲಬಾರದು. ಉತ್ತರ ಕರ್ನಾಟಕದ ಅನೇಕ ಹಿಂದೂಸ್ಥಾನಿ ಗಾಯಕರು ಬೆಂಗಳೂರಿಗೆ ಬರುತ್ತಿರುವುದು ಸ್ವಾಗತಾರ್ಹ ಎಂದು ಶ್ಲಾಘಿಸಿದರು.

ಈ ವೇಳೆ ಗಾಯಕ ರುಮಿತ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಪ್ರೊ.ಬಿ.ಕೆ.ಕೊಣ್ಣೂರ, ರವಿ ಕಮಲಾಪುರಕರ್, ಹಿಂದೂಸ್ಥಾನಿ ಗಾಯಕ ಪಂ. ಬಸವರಾಜ ಮುಗಳಖೋಡ, ರಂಗಕರ್ಮಿ ಶ್ರೀಹರಿ ಧೂಪದ, ಗೀತ ರಚನಕಾರ ವಿಜಯ್, ನವೀನ್ ಚಂದ್ರ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News