×
Ad

ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳ ಅರಿವು ಮುಖ್ಯ: ಚಿರಂಜೀವಿ ಸಿಂಗ್

Update: 2017-09-25 20:22 IST

ಬೆಂಗಳೂರು, ಸೆ.25: ವಿದ್ಯಾರ್ಥಿಗಳಿಗೆ ಪಠ್ಯ ಬೋಧನೆಯ ಜೊತೆಗೆ ಸಾಂಸ್ಕೃತಿಕ ಕಲೆಗಳ ಮಹತ್ವದ ಅರಿವು ಮೂಡಿಸಲು ಶಿಕ್ಷಕರು ಹೆಚ್ಚು ಒತ್ತು ನೀಡಬೇಕು ಎಂದು ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಸಲಹೆ ನೀಡಿದ್ದಾರೆ.

ಸೋಮವಾರ ನಗರದ ಎಂಇಎಸ್ ಕಾಲೇಜಿನ ಸಭಾಂಗಣದಲ್ಲಿ ಮೈಸೂರು ಎಜುಕೇಶನ್ ಸೊಸೈಟಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ನೆಲದ ಬೆಳಕು’ ವಜ್ರ ಮಹೋತ್ಸವ ನೆನಪಿನ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಮಕ್ಕಳನ್ನು ಅಂಕಗಳಿಗೆ ಸೀಮಿತಗೊಳಿಸದೆ, ಸಾಹಿತ್ಯ, ಸಂಗೀತ, ಕ್ರೀಡಾ ಆಸಕ್ತಿಯನ್ನು ಬೆಳೆಸಲು ಪೋಷಕರು ಒತ್ತು ನೀಡಬೇಕು. ಕಲಿಕೆ ಎಂಬುದು ನಾಲ್ಕು ಗೋಡೆಗಳಿಗೆ ಸೀಮಿತಗೊಳಿಸದೆ, ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ತರುವುದೇ ನಿಜವಾದ ಶಿಕ್ಷಣ. ಪ್ರಬುದ್ಧ ರಾಷ್ಟ್ರ ನಿರ್ಮಾಣಕ್ಕೆ ಮಕ್ಕಳಿಗೆ ಶಿಕ್ಷಕರು ಸೃಜನಶೀಲತೆಯ ಪಾಠವನ್ನು ಹೇಳಿಕೊಡಬೇಕು ಎಂದರು.

ಸಂಸ್ಥೆಯ ಉಪಾಧ್ಯಕ್ಷ ಪ್ರೊ.ಬಿ.ಆರ್. ಶೇಷಾದ್ರಿ ಅಯ್ಯಂಗಾರ್ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಕಲಿತ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಗೀತ ಕ್ಷೇತ್ರ ಸೇರಿದಂತೆ ಇತರೆ ಕ್ಷೇತ್ರದಲ್ಲಿಯೂ ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ. ಹೆಮ್ಮರದಂತೆ ಬೆಳೆದಿರುವ ಶಿಕ್ಷಣ ಸಂಸ್ಥೆಯನ್ನು, ವಿಚಾರವಂತ, ಚಿಂತನಾಶೀಲ ವ್ಯಕ್ತಿಗಳನ್ನು ಹೊರತರಲು ಬೋಧಕ ವರ್ಗ ಶ್ರಮಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕೃತಿಯ ಸಂಪಾದಕ ಡಾ.ಕೆ.ಬಿ. ಲೋಕೇಶ್ವರಪ್ಪ, ಸಂಸ್ಥೆಯ ಅಧ್ಯಕ್ಷೆ ವಿಮಲಾ ರಂಗಚಾರ್, ಪ್ರಾಂಶುಪಾಲೆ ಡಾ. ಲೀಲಾವತಿ, ಸಂಸ್ಥೆಯ ಉಪಾಧ್ಯಕ್ಷ ಕೃಷ್ಣ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News