ದಿನ ಪತ್ರಿಕೆಗಳಲ್ಲಿ ಆಹಾರದ ಪೊಟ್ಟಣ ಕಟ್ಟುವುದು ನಿಷೇಧ

Update: 2017-09-25 14:57 GMT

ಬೆಂಗಳೂರು, ಸೆ. 25: ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಬಿಬಿಎಂಪಿ ಸೇರಿ ಎಲ್ಲ ಮಹಾನಗರ ಪಾಲಿಕೆಗಳಲ್ಲಿ ದಿನಪತ್ರಿಕೆ, ಮುದ್ರಿತ ಸಾಮಗ್ರಿಗಳಲ್ಲಿ ಆಹಾರ ಪದಾರ್ಥಗಳ ಪೊಟ್ಟಣ ಕಟ್ಟಿ ಮಾರಾಟ ಮಾಡುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಆಹಾರ ಸುರಕ್ಷತೆ ಜಂಟಿ ಆಯುಕ್ತ ಎಚ್ಚರಿಸಿದ್ದಾರೆ.

ದಿನಸಿ ಮತ್ತು ಆಹಾರ ಪದಾರ್ಥಗಳು ಸೇರಿದಂತೆ ‘ಆಹಾರ’ ವಹಿವಾಟುದಾರರು ಆಹಾರ-ಸುರಕ್ಷತೆ ಕಾಯ್ದೆಯಡಿ ನೋಂದಣಿ ಮಾಡಿ, ಪರವಾನಿಗೆ ಪಡೆಯಬೇಕು. ನೋಂದಣಿ ಶುಲ್ಕ-100 ರೂ.(ವಾರ್ಷಿಕ), ಪರವಾನಿಗೆಗೆ 2 ಸಾವಿರ ರೂ.ನಿಂದ 5 ಸಾವಿರ ರೂ.ವರೆಗೆ(ವಾರ್ಷಿಕ) ಎಂದು ತಿಳಿಸಲಾಗಿದೆ.

ಕಾರ್ಯ ಪಡೆ ರಚನೆ: ಬಿಬಿಎಂಪಿ ವ್ಯಾಪ್ತಿಯಲ್ಲಿನ ಬಹುಮಹಡಿ ಕಟ್ಟಗಳು ತ್ಯಾಜ್ಯ ನೀರನ್ನು ಸಂಸ್ಕರಿಸಿ, ಚರಂಡಿಗೆ ಬಿಡದೆ ಅದನ್ನು ಸಾರ್ವಜನಿಕರಿಗೆ ಟ್ಯಾಂಕರ್‌ಗಳ ಮೂಲಕ ಮಾರಾಟ ಮಾಡುತ್ತಿದ್ದು, ಇದನ್ನು ತಡೆಗಟ್ಟಲು ಶೀಘ್ರದಲ್ಲೆ ಬಿಬಿಎಂಪಿ ಹಾಗೂ ಮಾಪನಶಾಸ್ತ್ರ ಇಲಾಖೆ ಅಧಿಕಾರಿಗಳ ಕಾರ್ಯಪಡೆ(ಟಾಸ್ಕ್‌ಫೋರ್ಸ್) ರಚನೆಗೆ ಸೂಚಿಸಲಾಗಿದೆ.

ಬೀದಿಬದಿ ವ್ಯಾಪಾರಸ್ಥರು ಉತ್ತಮ ಆಹಾರ ತಯಾರಿಕೆ, ನೈರ್ಮಲ್ಯ ಮತ್ತು ಸ್ವಚ್ಛತೆ ಕಾಪಾಡುವುದು ಹಾಗೂ ತ್ಯಾಜ್ಯ ಸಮರ್ಪಕ ವಿಲೇವಾರಿಗೆ ತರಬೇತಿ ನೀಡಲು ಆದೇಶಿಸಲಾಗಿದೆ. ಆಹಾರ ವಹಿವಾಟುದಾರರಿಂದ ಆಗುವ ತೊಂದರೆಗಳ ದೂರುಗಳನ್ನು ವಾಟ್ಸ್‌ಆ್ಯಪ್ ಸಂಖ್ಯೆ-94821 96639ಗೆ ರವಾನಿಸಬಹುದು. 7ರಿಂದ 10ದಿನಗಳೊಳಗೆ ಸ್ಪಂದಿಸಿ ಕ್ರಮ ಜರುಗಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

ರಾಜ್ಯದಲ್ಲಿ 27,430 ನೋಂದಣಿ ಹಾಗೂ 23,146 ಪರವಾನಗೆ ನೀಡಲಾಗಿದೆ. 39,407 ಆಹಾರ ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಿದ್ದು, ಆ ಪೈಕಿ 482 ಮಾದರಿಗಳು ಸುರಕ್ಷಿತವಲ್ಲ ಎಂದು ದೃಢಪಟ್ಟಿದೆ. ಹೀಗಾಗಿ 138 ವಹಿವಾಟುದಾರರ ವಿರುದ್ಧ ಕಾನೂನು ಕ್ರಮ ಕೈಗೊಂಡು, 21.95 ಲಕ್ಷ ರೂ.ದಂಡ ವಸೂಲಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News