ನನ್ನ ಒಂದು ವರ್ಷದ ಮೇಯರ್‌ ಗಿರಿಗೆ ತೃಪ್ತಿ ಇದೆ: ಮೇಯರ್ ಪದ್ಮಾವತಿ

Update: 2017-09-25 15:04 GMT

ಬೆಂಗಳೂರು, ಸೆ. 25: ನನ್ನ ಒಂದು ವರ್ಷದ ಬಿಬಿಎಂಪಿಯ ಮೇಯರ್ ಹುದ್ದೆಯನ್ನು ಅತ್ಯಂತ ಜನಪರವಾಗಿ ನಿಭಾಯಿಸಿರುವ ತೃಪ್ತಿಯಿದೆ ಎಂದು ಮೇಯರ್ ಪದ್ಮಾವತಿ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಆಯೋಜಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ವರ್ಷದ ತಮ್ಮ ಮೇಯರ್ ಅವಧಿಯಲ್ಲಿ ಕೈಗೊಂಡ ಜನಪ್ರಿಯ ಯೋಜನೆಗಳನ್ನೊಳಗೊಂಡ 100 ಪುಟಗಳ ಕಿರು ಹೊತ್ತಿಗೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಪೌರಕಾರ್ಮಿಕರಿಗೆ ಬಿಸಿಯೂಟ, ಬಡವರಿಗಾಗಿ ಇಂದಿರಾ ಕ್ಯಾಂಟೀನ್, ಪೌರ ಕಾರ್ಮಿಕರ ವೇತನ ಪರಿಷ್ಕರಣೆ, ಸಂಚಾರದ ದಟ್ಟಣೆಯನ್ನು ತಗ್ಗಿಸಲು ಮೇಲು ಸೇತುವೆ, ಕೆಳ ಸೇತುವೆ ನಿರ್ಮಾಣ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದ ತೃಪ್ತಿಯಿಂದಲೇ ನನ್ನ ಅವಧಿಯನ್ನು ಪೂರೈಸುತ್ತಿದ್ದೇನೆಂದು ಅವರು ಸಂತಸ ವ್ಯಕ್ತಪಡಿಸಿದರು.

ನಗರದಲ್ಲಿ ಬಡ ಮತ್ತು ಮಧ್ಯಮ ವರ್ಗದವರಿಗೆ ಕಡಿಮೆ ದರದಲ್ಲಿ ಔಷಧಿಗಳು ಸಿಗುವಂತೆ ಜನರಿಕ್ ಔಷಧ ಮಳಿಗೆಗಳ ಸ್ಥಾಪನೆ. ಮೇಯರ್ ವೈದ್ಯಕೀಯ ಪರಿಹಾರ ನಿಧಿಯಿಂದ 1,500ಕ್ಕೂ ಹೆಚ್ಚು ಬಡ ರೋಗಿಗಳಿಗೆ ಹಣಕಾಸು ನೆರವು, ಕೆರೆಗಳ ಸಮಗ್ರ ಅಭಿವೃದ್ಧಿ, ಆನ್‌ಲೈನ್ ಚಿತಾಗಾರದ ಸೇವೆಗಳ ವ್ಯವಸ್ಥೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

ನಗರದಲ್ಲಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ ಕಿತ್ತೂರು ರಾಣಿ ಚೆನ್ನಮ್ಮ ಮೇಲು ಸೇತುವೆ, ಮಾಗಡಿ ರಸ್ತೆಯ ಹೌಸಿಂಗ್ ಬೋರ್ಡ್ ಬಳಿಯ ಅಂಡರ್ ಪಾಸ್, ಓರಾಯನ್ ಮಾಲ್ ಅಂಡರ್ ಪಾಸ್, ಹೊಸಕೆರೆ ಹಳ್ಳಿ ರಿಂಗ್ ರಸ್ತೆಯ ಮೇಲು ಸೇತುವೆಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿದ್ದು ನನ್ನ ಒಂದು ವರ್ಷದ ಸಾಧನೆಯಲ್ಲಿ ಸೇರಿದೆ ಎಂದು ವಿವರಿಸಿದರು.

ಪಾದಚಾರಿಗಳ ಸುಗಮ ಸಂಚಾರಕ್ಕಾಗಿ ನಗರದ ವಿವಿಧೆಡೆ 80 ಸ್ಕೈವಾಕ್‌ಗಳ ನಿರ್ಮಾಣಕ್ಕೆ ಆದೇಶ ನೀಡಲಾಗಿದೆ. ಜಾಹೀರಾತು ಮೂಲದಿಂದ 55 ಕೋಟಿ ರೂ. ತೆರಿಗೆ ವಸೂಲಿ ಮಾಡಲಾಗಿದೆ. ಅನಧಿಕೃತ ಜಾಹೀರಾತುಗಳಿಗೆ ಕಡಿವಾಣ ಹಾಕಲಾಗಿದೆ. 800 ಕೋಟಿ ರೂ. ವೆಚ್ಚದಲ್ಲಿ ಮಳೆ ನೀರು ಕಾಲುವೆಯಲ್ಲಿ ಹೂಳು ತೆಗೆಯುವುದು, ತಡೆಗೊಡೆಗಳನ್ನು ನಿರ್ಮಿಸಲಾಗುತ್ತಿದೆ. 1225 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಉಪ ಮೇಯರ್ ಆನಂದ್, ಆಡಳಿತ ಪಕ್ಷದ ನಾಯಕ, ಮುಹಮ್ಮದ್ ರಿಝ್ವಾನ್, ಜೆಡಿಎಸ್ ನಾಯಕಿ ರಮೀಳಾ ಉಮಾ ಶಂಕರ್, ಬಿಬಿಎಂಪಿ ಸದಸ್ಯ ಸತ್ಯನಾರಾಯಣ, ಪಾಲಿಕೆ ಆಯುಕ್ತ ಮಂಜುನಾಥ ಪ್ರಸಾದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News