ಶೇ.40 ರಷ್ಟು ಮಧ್ಯಂತರ ಪರಿಹಾರಕ್ಕೆ ಶಾಲಾ ಶಿಕ್ಷಕರ ಆಗ್ರಹ

Update: 2017-09-25 15:09 GMT

ಬೆಂಗಳೂರು, ಸೆ.25: ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಕೇಂದ್ರ ಸರಕಾರದ ಶಿಕ್ಷಕರ ಮಾದರಿಯ ವೇತನ ನೀಡಬೇಕು ಹಾಗೂ ಶಾಲಾ ಶಿಕ್ಷಕರಿಗೆ ಶೇ.40 ರಷ್ಟು ಮಧ್ಯಂತರ ಪರಿಹಾರ ನೀಡಬೇಕು ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒತ್ತಾಯಿಸಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ, ರಾಜ್ಯದಲ್ಲಿರುವ ಶಿಕ್ಷಕರು ಅತ್ಯಂತ ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ. 43,695 ಸರಕಾರಿ ಪ್ರಾಥಮಿಕ ಶಾಲೆಗಳಿದ್ದು, 166136 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಅಪಾರ ಪ್ರಮಾಣದಲ್ಲಿ ಶಿಕ್ಷಕರ ಕಾರ್ಯಭಾರದ ಹೊರೆಯಿದೆ ಎಂದರು.

ಒಬ್ಬ ಶಿಕ್ಷಕ ಕನಿಷ್ಠ 2 ತರಗತಿಗಳ ಜೊತೆಗೆ ಎಲ್ಲ 6 ವಿಷಯಗಳ ಬೋಧನೆ ಮಾಡುತ್ತಿದ್ದಾರೆ. ಇದರ ಜೊತೆಗೆ ಶಿಕ್ಷಣೇತರ ಕೆಲಸಗಳಾದ ಜನಗಣತಿ, ಮತದಾರರ ಪಟ್ಟಿ ತಯಾರಿಕೆ, ಸಾಮಾಜಿಕ ಸಮೀಕ್ಷೆಗಳು ಹಾಗೂ ಬಿಸಿಯೂಟ, ಕ್ಷೀರಭಾಗ್ಯ ಸೇರಿದಂತೆ ಹಲವು ಯೋಜನೆಗಳಲ್ಲಿಯೂ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಈ ನಿಟ್ಟಿನಲ್ಲಿ ಸಂಘದ ವತಿಯಿಂದ 7 ನೆ ವೇತನ ಆಯೋಗಕ್ಕೆ ಮನವಿ ಸಲ್ಲಿಸಿದ್ದು, ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಗೆ ಸರಕಾರಿ ನೌಕರರಿಗೆ ನೀಡುವ ಶೇ.30 ರಷ್ಟು ಹೆಚ್ಚುವರಿ ಮಧ್ಯಂತರ ಪರಿಹಾರ ಭತ್ಯೆ ಜೊತೆ ಹೆಚ್ಚುವರಿ ಶೇ.10 ರಷ್ಟು ನೀಡಬೇಕು. ಎಲ್ಲ ಶಾಲೆಗಳಿಗೆ ತರಗತಿ ಒಬ್ಬರಂತೆ ಶಿಕ್ಷಕರನ್ನು ನೇಮಕ ಮಾಡಬೇಕು. ಶಾಲೆಗಳ ಅನುದಾನ ಹೆಚ್ಚಿಸಬೇಕು. ಕೇರಳ ಮಾದರಿಯಲ್ಲಿ ಮುಖ್ಯೋಪಾದ್ಯಾಯರಿಗೆ ವೇತನ ಶ್ರೇಣಿ ಹಾಗೂ ಎಲ್ಲ ಶಾಲೆಗಳಿಗೆ ಮುಖ್ಯೋಪಾದ್ಯಾಯರನ್ನು ನೇಮಿಸಬೇಕು. ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಆರಂಭಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರಕಾರಕ್ಕೆ ಶಿಫಾರಸು ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ವಿ.ಎಂ.ನಾರಾಯಣಸ್ವಾಮಿ, ಉಪಾಧ್ಯಕ್ಷ ಅರುಣ ಪ್ರತಾಪರೆಡ್ಡಿ, ರಮಾದೇವಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News