ನವ ಕರ್ನಾಟಕ ನಿರ್ಮಾಣ ನಮ್ಮ ಕನಸು: ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಸೆ.25: ನವ ಕರ್ನಾಟಕ ನಿರ್ಮಾಣ ನಮ್ಮ ಕನಸು ಮತ್ತು ಬದ್ಧತೆ. ಕೇವಲ ಕನಸು ಕಂಡರೆ ಸಾಲದು, ಅದು ನನಸಾಗಬೇಕಾದರೆ ಒಂದು ಮುನ್ನೋಟ ಅಗತ್ಯ. ಅದಕ್ಕಾಗಿಯೆ ‘ನವ ಕರ್ನಾಟಕ-2025’ರ ಮುನ್ನೋಟ ಯೋಜನೆ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸೋಮವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಲಾಗಿದ್ದ ‘ನವ ಕರ್ನಾಟಕ 2025 ಮುನ್ನೋಟ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಮುನ್ನೋಟದಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ನಮ್ಮ ಮುಂದಿನ ಚುನಾವಣಾ ಪ್ರಣಾಳಿಕೆಯಲ್ಲೂ ಅಳವಡಿಸಿಕೊಳ್ಳಲಾಗುವುದು. ಡಿಸೆಂಬರ್ ಅಂತ್ಯದ ವೇಳೆಗೆ ನವ ಕರ್ನಾಟಕ 2025 ಮುನ್ನೋಟದ ಸಮಗ್ರ ವರದಿ ಸಿದ್ಧವಾಗಲಿದೆ. ಆ ವೇಳೆಗೆ ಪ್ರತೀ ಜಿಲ್ಲೆಯಲ್ಲಿ ಎಲ್ಲರ ಅಭಿಪ್ರಾಯ ಆಲಿಸಿ ವರದಿ ಸಿದ್ಧಪಡಿಸಲಾಗುವುದು. ನವ ಕರ್ನಾಟಕ ಮುನ್ನೋಟ ಯೋಜನೆಯಲ್ಲಿ ಜನರೂ ಭಾಗಿಯಾಗಬೇಕು. ಜನರ ಸಮಸ್ಯೆ, ನಿರೀಕ್ಷೆ ಕೇಳಬೇಕು. ಜನ ಸಾಮಾನ್ಯರ ಜೊತೆಗೆ ಚುನಾಯಿತ ಪ್ರತಿನಿಧಿಗಳ ಅಭಿಪ್ರಾಯವನ್ನು ಎಲ್ಲ ಜಿಲ್ಲೆಗೆ ಹೋಗಿ ಆಲಿಸಬೇಕು ಎಂದು ಹೇಳಿದರು.
ಕಳೆದ ನಾಲ್ಕೂವರೆ ವರ್ಷಗಳಲ್ಲಿ ಜನರಿಗೆ ಪ್ರಣಾಳಿಕೆ ಮೂಲಕ ನೀಡಿದ್ದ ಬಹುತೇಕ ಭರವಸೆಗಳನ್ನು ನಮ್ಮ ಸರಕಾರ ಈಡೇರಿಸಿದೆ. ರಾಜ್ಯ ಪ್ರಗತಿಯು ಸಾಧಿಸಿದೆ. ರಾಜ್ಯವನ್ನು ನವ ಕರ್ನಾಟಕವನ್ನಾಗಿ ನಿರ್ಮಾಣ ಮಾಡಲು ನಮ್ಮ ಚಿಂತನೆ, ಯೋಜನೆ, ಸಮಸ್ಯೆಗಳನ್ನು ಗುರುತಿಸುವಿಕೆ ಮತ್ತು ಅದರ ಪರಿಹಾರ ಈ ಎಲ್ಲವನ್ನೂ ಚರ್ಚೆ ಮೂಲಕ ಮಾಡಬೇಕು ಎಂದು ತಿಳಿಸಿದರು.
ಕರ್ನಾಟಕ ಹಸಿವು ಮುಕ್ತ, ಗುಡಿಸಲು ಮುಕ್ತ, ಅಪೌಷ್ಟಿಕತೆ ಮುಕ್ತ ರಾಜ್ಯ ಆಗಬೇಕು ಎಂಬುದು ನಮ್ಮ ನಿಲುವು ಮತ್ತು ಘೋಷಣೆ. ಅನ್ನಭಾಗ್ಯ ಯೋಜನೆಯಲ್ಲಿ ತಲಾ ಏಳು ಕೆ.ಜಿ.ಅಕ್ಕಿಯನ್ನು ಉಚಿತವಾಗಿ ನಾಲ್ಕು ಕೋಟಿಗೂ ಹೆಚ್ಚು ಜನರಿಗೆ ನೀಡುತ್ತಿದ್ದೇವೆ. ಇದರ ಪರಿಣಾಮ ಭೀಕರ ಬರಗಾಲದಲ್ಲೂ ಜನ ಗುಳೆ ಹೋಗಿಲ್ಲ. ಗುಳೆ ಹೋಗುವ ಸಮಸ್ಯೆ ಮೊದಲು ಸಾಮಾನ್ಯವಾಗಿತ್ತು. ಈಗ ಕಡಿಮೆ ಆಗಿದೆ. ಹಸಿವಿನಿಂದ ಯಾರೂ ಸತ್ತ ನಿದರ್ಶನ ಇಲ್ಲ. ಕರ್ನಾಟಕ ಹಸಿವು ಮುಕ್ತ ಆಗಿರುವುದಕ್ಕೆ ಇದು ಉದಾಹರಣೆ ಎಂದರು.
1.75 ಲಕ್ಷ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿದ್ದೇವೆ. ಇದು ದೇಶದಲ್ಲೆ ಮೊದಲ ಬಾರಿಗೆ ಜಾರಿಗೆ ತಂದ ವಿನೂತನ ಕಾರ್ಯಕ್ರಮ. ಎಪಿಎಂಸಿಗಳಲ್ಲಿ ಆನ್‌ಲೈನ್ ಪದ್ಧತಿ ಜಾರಿಗೆ ತಂದು ದೇಶಕ್ಕೆ ಮಾದರಿಯಾಗಿದ್ದೇವೆ. ರೇಷ್ಮೆ ಗೂಡು ಮಾರಾಟಕ್ಕೂ ಆನ್‌ಲೈನ್ ವ್ಯವಸ್ಥೆ ಜಾರಿಗೆ ತಂದಿದ್ದೇವೆ. ಇದರಿಂದ ಮಧ್ಯವರ್ತಿಗಳ ಹಾವಳಿ ನಿವಾರಣೆಯಾಗಿ ರೈತರಿಗೆ ಭಾರಿ ಅನುಕೂಲವಾಗಿದೆ ಎಂದು ಹೇಳಿದರು.
ಕೃಷಿ ಲಾಭದಾಯಕ ಆಗದಿದ್ದರೆ, ಕೃಷಿ ಉತ್ಪನ್ನಗಳಿಗೆ ಸೂಕ್ತ ದರ ಸಿಗದಿದ್ದರೆ ಮತ್ತು ರೈತರಿಗೆ ಹೆಚ್ಚು ಲಾಭ ದೊರೆಯದಿದ್ದರೆ ಕೃಷಿ ವ್ಯವಸ್ಥೆಗೆ ಪೆಟ್ಟು ಬೀಳುತ್ತದೆ. ಬಂಡವಾಳ ಹೂಡಿಕೆಯಲ್ಲೂ ರಾಜ್ಯ ಮೊದಲ ಸ್ಥಾನದಲ್ಲಿದೆ. ಕೈಗಾರಿಕೆ ಸ್ನೇಹಿ ರಾಜ್ಯ ಎಂಬ ಹೆಗ್ಗಳಿಕೆಗೂ ಕರ್ನಾಟಕ ಪಾತ್ರವಾಗಿದೆ ಎಂದರು.
ಬಯಲು ಬಹಿರ್ದೆಸೆ ಮುಕ್ತ ರಾಜ್ಯಕ್ಕಾಗಿ 30 ಲಕ್ಷಕ್ಕೂ ಹೆಚ್ವು ಶೌಚಾಲಯಗಳನ್ನು ನಿರ್ಮಿಸಿದ್ದೇವೆ. ಪ್ರಸಕ್ತ ಸಾಲಿನ ಅ.2ಕ್ಕೆ 50 ಲಕ್ಷ ಶೌಚಾಲಯಗಳೊಂದಿಗೆ ಕರ್ನಾಟಕ ಬಯಲು ಬಹಿರ್ದೆಸೆ ಮುಕ್ತ ರಾಜ್ಯ ಆಗಲಿದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನವ ಕರ್ನಾಟಕ 2025 ಮುನ್ನೋಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇಣುಕಾ ಚಿದಂಬರಂ, ಮುಖ್ಯಮಂತ್ರಿಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಖ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.