ಡೆಮೋ ರೈಲಿನಲ್ಲಿ ಪೊಲೀಸರ ಸಂಚಾರ

Update: 2017-09-25 16:23 GMT

ಬೆಂಗಳೂರು, ಸೆ.25: ಪ್ರಯಾಣಿಕರ ಸುರಕ್ಷತೆ ಹಾಗೂ ಭದ್ರತಾ ವಿಧಾನಗಳ ಕುರಿತು ಪರಿಶೀಲನೆ ನಡೆಸಲು ಬೆಂಗಳೂರು ಪೂರ್ವ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್‌ ಕುಮಾರ್ ಸಿಂಗ್, ವೈಟ್‌ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ಹಾಗೂ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಇತ್ತೀಚೆಗೆ ಲೋಕಾರ್ಪಣೆಗೊಂಡ ಡೆಮೋ ರೈಲಿನಲ್ಲಿ ಕಾಡುಗುಡಿ ರೈಲು ನಿಲ್ದಾಣದಿಂದ ಬೈಯಪ್ಪನಹಳ್ಳಿವರೆಗೆ ಸಂಚರಿಸಿದರು.

ಸೋಮವಾರ ಸಂಜೆ 6.20ಕ್ಕೆ ಕಾಡುಗುಡಿ ರೈಲ್ವೆ ನಿಲ್ದಾಣದಿಂದ ಪ್ರಯಾಣ ಆರಂಭಿಸಿದ ಪೊಲೀಸ್ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರೊಂದಿಗೆ ರೈಲಿನ ಪ್ರಯಾಣಕ್ಕೆ ಸಂಬಂಧಿಸಿದಂತೆ ಅಭಿಪ್ರಾಯಗಳನ್ನು ಪಡೆದುಕೊಂಡರು.

ಕಾಡುಗುಡಿ ಹಾಗೂ ಬೈಯಪ್ಪನಹಳ್ಳಿ ನಡುವೆ ಹೊಸದಾಗಿ ಡೆಮೋ ರೈಲು ಸಂಚಾರ ಸೇವೆಯನ್ನು ಆರಂಭಿಸಲಾಗಿದೆ. ಐಟಿಬಿಟಿ ಉದ್ಯೋಗಿಗಳನ್ನು ಈ ರೈಲು ಪ್ರಯಾಣಕ್ಕೆ ಆಕರ್ಷಿಸುವುದು ಹಾಗೂ ಅವರಿಗೆ ಸೂಕ್ತವಾದ ರಕ್ಷಣೆ ನೀಡುವುದು ನಮ್ಮ ಜವಾಬ್ದಾರಿ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.

ಐಟಿಬಿಟಿ ಉದ್ಯೋಗಿಗಳು ಹಾಗೂ ಜನಸಾಮಾನ್ಯರಲ್ಲಿ ಈ ರೈಲು ಪ್ರಯಾಣದ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ಪೊಲೀಸ್ ಇಲಾಖೆ ಮಾಡಿದೆ. ವೈಟ್‌ಫೀಲ್ಡ್ -ಬೈಯಪ್ಪನಹಳ್ಳಿ ನಡುವಿನ ಮಾರ್ಗದಲ್ಲಿ ಮೆಟ್ರೋ ಕಾಮಗಾರಿ ಆರಂಭವಾಗಿರುವುದರಿಂದ, ಸಂಚಾರ ದಟ್ಟಣೆ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಹೇಳಿದರು.

ಸಾರ್ವಜನಿಕರು ತಮ್ಮ ಸಂಚಾರಕ್ಕೆ ಈ ರೈಲನ್ನು ಬಳಸುವುದರಿಂದ ಸಂಚಾರ ದಟ್ಟಣೆ ಸಮಸ್ಯೆಯಿಂದ ಪಾರಾಗಬಹುದು. ಅಲ್ಲದೆ, ಬೆಳಗ್ಗೆ ಹಾಗೂ ಸಂಜೆ ಪೀಕ್ ಅವರ್‌ನಲ್ಲಿ ಅವರ ಸಮಯವು ಉಳಿತಾಯವಾಗುತ್ತದೆ ಎಂದು ಸೀಮಂತ್‌ಕುಮಾರ್ ಸಿಂಗ್ ತಿಳಿಸಿದರು.

ವೈಟ್‌ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ಮಾತನಾಡಿ, ಡೆಮೋ ರೈಲು ಸಂಚರಿಸುವ ಪ್ರದೇಶವು ನಮ್ಮ ವ್ಯಾಪ್ತಿಗೆ ಬರುತ್ತದೆ. ಈ ಭಾಗದಲ್ಲಿ ಯಾವುದೇ ರೀತಿಯ ಅಪರಾಧ ಚಟುವಟಿಕೆಗಳು ನಡೆಯದಂತೆ ತಡೆಯುವುದು ನಮ್ಮ ಆದ್ಯತೆ. ಪ್ರಯಾಣಿಕರ ರಕ್ಷಣೆಗಾಗಿ ರೈಲ್ವೆ ಪೊಲೀಸರೊಂದಿಗೆ ನಾವು ಕೈ ಜೋಡಿಸುತ್ತೇವೆ ಎಂದರು.

 ಕಾಡುಗುಡಿ, ವೈಟ್‌ಫೀಲ್ಡ್ ಭಾಗದಲ್ಲಿ ಸಾವಿರಾರು ಐಟಿಬಿಟಿ ಕಂಪೆನಿಗಳಿವೆ. ಇಲ್ಲಿನ ಉದ್ಯೋಗಿಗಳನ್ನು ರೈಲು ಸಂಚಾರಕ್ಕೆ ಆಕರ್ಷಿಸಲು ಪೊಲೀಸ್ ಇಲಾಖೆಯು ಈ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿತ್ತು ಎಂದು ಅಬ್ದುಲ್ ಅಹದ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News