ರೊಹಿಂಗ್ಯಾ ಮಹಿಳೆಯರಿಗೆ ರಕ್ಷಣೆ ನೀಡುವಂತೆ ಒತ್ತಾಯ
ಬೆಂಗಳೂರು, ಸೆ.26: ಮ್ಯಾನ್ಮಾರ್‌ನಲ್ಲಿ ಸೇನೆ ನಡೆಸುತ್ತಿರುವ ದಮನ ಕಾರ್ಯಾಚರಣೆಗೆ ಬೆದರಿ ಭಾರತಕ್ಕೆ ಬಂದಿರುವ ರೊಹಿಂಗ್ಯಾ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಲು ಕೇಂದ್ರ ಸರಕಾರ ಮುಂದಾಗಬೇಕೆಂದು ಒತ್ತಾಯಿಸಿ ಕರ್ನಾಟಕ ಮುಸ್ಲಿಮ್ ಮಹಿಳಾ ಆಂದೋಲನ ಸದಸ್ಯರು ಧರಣಿ ನಡೆಸಿದರು.
ಮಂಗಳವಾರ ನಗರದ ವೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಕರ್ನಾಟಕ ಮುಸ್ಲಿಮ್ ಮಹಿಳಾ ಆಂದೋಲನದ ನೂರಾರು ಸದಸ್ಯರು, ರೊಹಿಂಗ್ಯಾ ಮಹಿಳೆ ಹಾಗೂ ಮಕ್ಕಳಿಗೆ ಸೂಕ್ತ ರಕ್ಷಣೆ ಹಾಗೂ ನೆಲೆ ಕಲ್ಪಿಸುವಂತೆ ಕೇಂದ್ರ ಸರಕಾರಕ್ಕೆ ಒತ್ತಾಯಿಸಿ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಆಂದೋಲನ ಅಧ್ಯಕ್ಷೆ ನಗ್ಮಾ ಶೇಖ್, ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಮುಸ್ಲಿಮ್ ಮಹಿಳೆಯರ ಮತ್ತು ಮಕ್ಕಳ ಮೇಲೆ ನಿರಂತರ ಅತ್ಯಾಚಾರ, ಹಿಂಸೆ ನಡೆಯುತ್ತಿದೆ. ಇದರಿಂದ ಬೆದರಿ ಸಾವಿರಾರು ರೊಹಿಂಗ್ಯ ಮುಸ್ಲಿಮರು ಹೊಸದಿಲ್ಲಿ, ಕಲ್ಕತ್ತ ಸೇರಿ ಇನ್ನಿತರೆ ರಾಜ್ಯಗಳಿಗೆ ಬಂದು ನೆಲೆಸಿದ್ದಾರೆ. ಆದರೆ, ಈ ಬಡ ಮುಸ್ಲಿಮರಿಗೆ ಸರಕಾರಗಳು ಸೂಕ್ತ ರಕ್ಷಣೆ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮುಸ್ಲಿಮರು ಎಂಬ ಕಾರಣಕ್ಕೆ ಸೂಕ್ತ ರಕ್ಷಣೆ, ನೆಲೆ ನೀಡದಿರುವುದು ಬೇಸರದ ಸಂಗತಿ ಎಂದ ಅವರು, ಮಾನವೀಯ ದೃಷ್ಟಿಯಿಂದ ರೊಹಿಂಗ್ಯಾ ಬಡ ಮುಸ್ಲಿಮರಿಗೆ ರಕ್ಷಣೆ ನೀಡಬೇಕು. ಈ ಹಿಂದೆ ಪಾಕಿಸ್ತಾನದ ನಾಗರಿಕರಿಗೆ ಭಾರತ ರಕ್ಷಣೆ ನೀಡಿತ್ತು. ಹಾಗೆಯೇ, ರೊಹಿಂಗ್ಯಾ ಮುಸ್ಲಿಮರಿಗೆ ರಕ್ಷಣೆ ನೀಡಬೇಕು ಜೊತೆಗೆ ಆಹಾರ ಭದ್ರತೆ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.
ಧರಣಿಯಲ್ಲಿ ಆಂದೋಲನ ಸಂಚಾಲಕಿ ಜಮೀಲಾ ಸೇರಿ ಪ್ರಮುಖರಿದ್ದರು.