ಸೆನ್ಸಾರ್ ಅಧಿಕಾರಿ ಶ್ರೀನಿವಾಸಪ್ಪ ಸರ್ವಾಧಿಕಾರಿ ಧೋರಣೆ: ಆರೋಪ
ಬೆಂಗಳೂರು, ಸೆ. 26: ನಗರದ ಸೆನ್ಸಾರ್ ಮಂಡಳಿಯ ಸೆನ್ಸಾರ್ ಅಧಿಕಾರಿ ಶ್ರೀನಿವಾಸಪ್ಪ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಅಖಂಡ ಕರ್ನಾಟಕ ಚಲನಚಿತ್ರೋದ್ಯಮ ಪರಿಷತ್ ಆರೋಪಿಸಿದೆ.
ನಗರದ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಷತ್‌ನ ರಾಜ್ಯಾಧ್ಯಕ್ಷ ಟೇಶಿ ವೆಂಕಟೇಶ್, ನಗರದ ಪ್ರಾದೇಶಿಕ ಸೆನ್ಸಾರ್ ಮಂಡಳಿಯು ಕನ್ನಡ ಚಿತ್ರೋದ್ಯಮದ ಮೇಲೆ ದೌರ್ಜನ್ಯ ಎಸಗುತ್ತಿದೆ. ಪ್ರಾದೇಶಿಕ ಸೆನ್ಸಾರ್ ಅಧಿಕಾರಿ ಶ್ರೀನಿವಾಸಪ್ಪ ಕನ್ನಡ ಚಿತ್ರರಂಗದ ನಿರ್ದೇಶಕರು, ನಿರ್ಮಾಪಕರು ಹಾಗೂ ತಂತ್ರಜ್ಞರಿಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ. ಹೊರ ರಾಜ್ಯದ ಸೆನ್ಸಾರ್ ಮಂಡಳಿಯಲ್ಲಿ ಇಲ್ಲದ ನಿಯಮಾವಳಿ ಹೇರುವ ಮೂಲಕ ಶೋಷಣೆ ನಡೆಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಇತಿಹಾಸ, ಸಿನೆಮಾಗಳ ಗಂಧಗಾಳಿಯ ಅರಿವಿಲ್ಲದೆ ಹಿಟ್ಲರ್ ರೀತಿ ವರ್ತಿಸುತ್ತಿದ್ದಾರೆ ಎಂದು ದೂರಿದರು.
ಕರ್ನಾಟಕ ರಾಜ್ಯ ಚಲಚಿತ್ರ ವಾಣಿಜ್ಯ ಮಂಡಳಿ ಗಮನಕ್ಕೆ ಇಲ್ಲಿನ ಅಧಿಕಾರಿಯ ಕಿರುಕುಳದ ಕುರಿತು ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸೆನ್ಸಾರ್‌ಗೆ ಅರ್ಜಿ ಸಲ್ಲಿಸಿದ ನಿರ್ಮಾಪಕರು ದಿನಗಟ್ಟಲೇ ಕಾಯುವಂತಾಗಿದೆ. ಇವರಿಗೆ ಸಾಮಾನ್ಯ ನಡವಳಿಕೆಯೂ ಗೊತ್ತಿಲ್ಲ ಎಂದ ಅವರು, ಕೋಟ್ಯಂತರ ಬಂಡವಾಳ ಹಾಕಿದ ನಿರ್ಮಾಪಕರು ಈತನ ವರ್ತನೆಯಿಂದ ಬೇಸತ್ತಿದ್ದಾರೆ ಎಂದು ಹೇಳಿದರು.
ಸೆನ್ಸಾರ್ ಮಂಡಳಿಯಲ್ಲಿ ತಾರತಮ್ಯ ಅನುಸರಿಸುತ್ತಿರುವ ಶ್ರೀನಿವಾಸಪ್ಪ, ಸೆನ್ಸಾರ್ ಪತ್ರ ನೀಡಲು ಹಲವು ಚಿತ್ರ ತಂಡಗಳಿಂದ ಲಂಚ ಪಡೆದಿರುವ ಆರೋಪಗಳೂ ಇವೆ ಎಂದ ಅವರು, ನಮ್ಮ ನಾಡಿನ ಭಾಷೆ, ಸಂಸ್ಕೃತಿಯ ಬಗ್ಗೆ ತಿಳಿವಳಿಕೆ ಇಲ್ಲದ ಶ್ರೀನಿವಾಸಪ್ಪರಿಂದ ಕನ್ನಡ ಚಿತ್ರೋದ್ಯಮಕ್ಕೆ ಭಾರಿ ಪ್ರಮಾಣದ ಹೊಡೆತ ಬೀಳುತ್ತಿದೆ ಎಂದು ತಿಳಿಸಿದರು.
ಹಿಂದಿ, ತೆಲುಗು, ಮಲಯಾಳಂ, ತಮಿಳು ಭಾಷಾ ಚಿತ್ರಗಳಿಗಿಂತ ಹೆಚ್ಚು ಗುಣಮಟ್ಟದ ಚಿತ್ರಗಳು ಕನ್ನಡದಲ್ಲೂ ಮೂಡಿ ಬರುತ್ತಿವೆ. ಯುವ ನಿರ್ದೇಶಕರ ಹೆಚ್ಚಿನ ಮಟ್ಟದಲ್ಲಿ ಚಿತ್ರ ರಂಗದಲ್ಲಿ ತೊಡಗಿಸಿಕೊಳ್ಳುತ್ತಿದ್ದು, ಹಲವು ಚಿತ್ರಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರವಾಗಿವೆ. ಹೀಗಿರುವಾಗ ಶ್ರೀನಿವಾಸಪ್ಪ ಪ್ರೋತ್ಸಾಹ ನೀಡುವ ಬದಲು ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ, ಕೂಡಲೇ ಅವರು ತಮ್ಮ ನಿಲುವುಗಳನ್ನು ಬದಲಾಯಿಸಿಕೊಳ್ಳಬೇಕು. ಇಲ್ಲದಿದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.