ವಿದ್ಯಾರ್ಥಿನಿಯರ ಮೇಲೆ ಲಾಠಿ ಪ್ರಹಾರ ಖಂಡಿಸಿ ಪ್ರತಿಭಟನೆ
ಬೆಂಗಳೂರು, ಸೆ. 26: ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ಕಿರುಕುಳ ಹಾಗೂ ಪ್ರತಿಭಟನೆಯ ವೇಳೆ ಮಹಿಳಾ ಹಾಗೂ ವಿದ್ಯಾರ್ಥಿನಿಯರ ಮೇಲೆ ನಡೆದ ಲಾಠಿ ಪ್ರಹಾರ ಖಂಡಿಸಿ ನಗರದಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಇತರೆ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮಂಗಳವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ, ಎಐಡಿಎಸ್‌ಒ ಹಾಗೂ ಎಐಡಿವೈಒ ಬೆಂಗಳೂರು ಜಿಲ್ಲಾ ಸಮಿತಿಯ ಕಾರ್ಯಕರ್ತರು ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿ ವಿವಿಯ ಅಡಳಿತ ಮಂಡಳಿ ಮತ್ತು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಎಐಎಮ್‌ಎಸ್‌ಎಸ್‌ನ ಜಿಲ್ಲಾ ಅಧ್ಯಕ್ಷೆ ಹರಿಣಿ ಆಚಾರ್ಯ ಮಾತನಾಡಿ, ಬನಾರಸ್ ವಿವಿಯ ಸಿಬ್ಬಂದಿ ಪ್ರತಿಭಟನಾ ನಿರತ ವಿದ್ಯಾರ್ಥಿನಿಯರನ್ನ್ನು ಅಪರಾಧಿಗಳಂತೆ ನೋಡುತ್ತಿದ್ದಾರೆ. ವಿವಿಯಲ್ಲಿ ವಿದ್ಯಾರ್ಥಿನಿಯರಿಗೆ ಕಿಂಚಿತ್ತೂ ಭದ್ರತೆ ಇಲ್ಲ ಎಂದು ದೂರಿದರು.
ವಿವಿಯಲ್ಲಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಕುರಿತು ಭದ್ರತೆಗೆ ಆಗ್ರಹಿಸಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಉಪಕುಲಪತಿ ಪೊಲೀಸರಿಗೆ ಕುಮ್ಮಕ್ಕು ನೀಡಿ ಲಾಠಿ ಪ್ರಹಾರ ನಡೆಸಿದ್ದಾರೆ. ವಿದ್ಯಾರ್ಥಿನಿಯರು ಎಂದು ಪರಿಗಣಿಸದೇ ಪುರುಷ ಪೊಲೀಸ್ ಪೇದೆಗಳು ಲಾಠಿ ಪ್ರಹಾರ ನಡೆಸಿರುವುದು ಅತ್ಯಂತ ಹೇಯ ಕೃತ್ಯ ಎಂದು ಖಂಡಿಸಿದರು.
ವಿವಿಯಲ್ಲಿ ವಿದ್ಯಾರ್ಥಿನಿಯರಿಗೆ ಸೂಕ್ತ ಭದ್ರತೆ ನೀಡಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಉಪಕುಲಪತಿ ಸೇರಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿನಿಯರ ಮೇಲೆ ಹಾಕಿರುವ ಮೊಕದ್ದಮೆಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಐಡಿವೈಒ ಜಿಲ್ಲಾಧ್ಯಕ್ಷ ಕೃಷ್ಣ, ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಅಜಯ್ ಕಾಮಂತ್ ಸೇರಿದಂತೆ ಇತರರು ಇದ್ದರು.