ಅನುಕಂಪದ ಆಧಾರದ ಮೇಲೆ ಎರಡನೆ ಪತ್ನಿಯ ಮಗನಿಗೆ ಸರಕಾರಿ ಕೆಲಸ: ಮನವಿ ತಿರಸ್ಕರಿಸಿದ ಹೈಕೋರ್ಟ್
ಬೆಂಗಳೂರು, ಸೆ.26: ಎರಡನೆ ಪತ್ನಿಯ ಮಗನಿಗೆ ಅನುಕಂಪದ ಆಧಾರದ ಮೇಲೆ ಸರಕಾರಿ ಕೆಲಸ ಕೊಡಿಸುವಂತೆ ಕೋರಿ ಮೃತ ಸರಕಾರಿ ನೌಕರನ ಮೊದಲ ಪತ್ನಿ ಸಲ್ಲಿಸಿದ್ದ ಮನ ವಿಯನ್ನು ಹೈಕೋರ್ಟ್ ತಳ್ಳಿ ಹಾಕಿದೆ.
2009ರಲ್ಲಿ ಸೇವಾ ಅವಧಿ ಇರುವಾಗಲೇ ಮೃತಪಟ್ಟಿದ್ದ ಗಂಡನ ಉದ್ಯೋಗವನ್ನು ತನ್ನ ಸಹೋದರಿ(ಮೃತ ಸರಕಾರಿ ನೌಕರನ ಎರಡನೆ ಪತ್ನಿ)ಯ ಮಗನಿಗೆ ಕೊಡಿಸಲು ಮೊದಲನೆ ಪತ್ನಿ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ್ದ ಕೆಎಸ್ಸಾರ್ಟಿಸಿಯ ನಿರ್ಧಾರ ಸರಿಯಾಗಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ಪೀಠ, ಕೆಎಸ್ಸಾರ್ಟಿಸಿ ಕ್ರಮ ಪ್ರಶ್ನಿಸಿದ್ದ ರಿಟ್ ಅರ್ಜಿ ವಜಾಗೊಳಿಸಿದೆ.
ಅನುಕಂಪದ ಆಧಾರದ ಮೇಲೆ ಎರಡನೆ ಪತ್ನಿಯ ಮಗನಿಗೆ ನೌಕರಿ ಕೊಡಲು ನಿರ್ದೇಶಿಸುವಂತೆ ಕೋರಿರುವುದು ಮೃತ ನೌಕರನ ಮೊದಲ ಪತ್ನಿ. ಮೃತ ನೌಕರನ ಒಬ್ಬ ಮಗ ಈಗಾಗಲೇ ಸರಕಾರಿ ನೌಕರಿಯಲ್ಲಿದ್ದರೂ, ಮತ್ತೊಬ್ಬ ಮಗನನ್ನೂ ಸರಕಾರಿ ನೌಕರಿಗೆ ಸೇರಿಸುವ ಪ್ರಯತ್ನ ಸರಿಯಲ್ಲ. ಸರಕಾರಿ ಸೇವಾ ನಿಯಮಾವಳಿಗಳ ಅನ್ವಯ ಎರಡನೆ ಪತ್ನಿ ಮಕ್ಕಳಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ದೊರೆಯುವುದಿಲ್ಲ ಎಂದು ಆದೇಶ ನೀಡಿದೆ.
ಎರಡನೆ ಪತ್ನಿಯ ಮಗನಿಗೆ ಉದ್ಯೋಗ ಕೊಡಿ ಎಂದು ಮೃತ ನೌಕರನ ಮೊದಲ ಪತ್ನಿಯೇ ಕೋರಿರುವುದು, ಅವರ ಇಡೀ ಕುಟುಂಬ ಅನ್ಯೋನ್ಯವಾಗಿದೆ ಎಂಬುದಕ್ಕೆ ಸಾಕ್ಷಿ. ಅಲ್ಲದೆ, ತಮ್ಮ ಮನವಿಯನ್ನು ಕೆಎಸ್ಸಾರ್ಟಿಸಿ ತಳ್ಳಿ ಹಾಕಿದ 3 ವರ್ಷಗಳ ನಂತರ ಅರ್ಜಿ ಸಲ್ಲಿಸಿದೆ. ಹೀಗಾಗಿ, ಕುಟುಂಬಕ್ಕೆ ಯಾವುದೇ ಆರ್ಥಿಕ ಅಭದ್ರತೆ ಕಾಡುತ್ತಿದೆ ಎಂದು ಅನಿಸುತ್ತಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಯಾವ ಅಂಶಗಳ ಆಧಾರದ ಮೇಲೆ ಎರಡನೆ ಪತ್ನಿ ಮಗನಿಗೆ ಉದ್ಯೋಗ ನೀಡಲು ಸಾಧ್ಯವಿಲ್ಲ ಎಂಬುದನ್ನು ಪ್ರಕರಣದ ಪ್ರತಿವಾದಿಯಾದ ಕೆಎಸ್ಸಾರ್ಟಿಸಿ ಅರ್ಜಿದಾರರಿಗೆ ಮನದಟ್ಟು ಮಾಡುವಂತೆ ಸೂಚಿಸಿದೆ.
ಪ್ರಕರಣವೇನು: ಕೆಎಸ್ಸಾರ್ಟಿಸಿ ಚಾಲಕರಾಗಿದ್ದ ಹಾಸನ ಮೂಲದ ಹರೀಶ್‌ಗೆ(ಹೆಸರು ಬದಲಿಸಲಾಗಿದೆ) ಇಬ್ಬರು ಪತ್ನಿಯರಿದ್ದು, ಇಬ್ಬರು ಪತ್ನಿಯರು ಹಾಗೂ ಮಕ್ಕಳು ಒಂದೇ ಮನೆಯಲ್ಲಿ ವಾಸವಿದ್ದರು. ಹರೀಶ್‌ರ ಮೊದಲ ಪತ್ನಿಯ ಮಗ ಬಿಎಂಟಿಸಿ ಚಾಲಕ ಹಾಗೂ ನಿರ್ವಾಹಕ ಹುದ್ದೆಯಲ್ಲಿದ್ದಾರೆ. ಈ ನಡುವೆ 2009ರಲ್ಲಿ ಹರೀಶ್ ಮೃತಪಟ್ಟಾಗ, ಎರಡನೆ ಪತ್ನಿ ಮಗನಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಲು ಹರೀಶ್‌ರ ಮೊದಲ ಪತ್ನಿ, ಕೆಎಸ್ಸಾರ್ಟಿಸಿಯನ್ನು ಕೋರಿದ್ದರು.
ಹರೀಶ್‌ಗೆ ಎರಡನೆ ವಿವಾಹ ಆಗಿರುವುದು ನಿಯಮಬಾಹಿರವಾಗಿದೆ. ಜೊತೆಗೆ ಎರಡನೆ ಪತ್ನಿಯ ಮಗನಿಗೆ ಅನುಕಂಪದ ಆಧಾರದ ಮೇಲೆ ಕೆಲಸ ಕೊಡಲು ಸಾಧ್ಯವಿಲ್ಲ ಎಂದು ಕೆಎಸ್ಸಾರ್ಟಿಸಿ ಸ್ಪಷ್ಟಪಡಿಸಿತ್ತು. ಮೊದಲ ಪತ್ನಿ ಸಲ್ಲಿಸಿದ್ದ 2ನೆ ಮನವಿ ಕೂಡ 2011ರಲ್ಲಿ ವಜಾ ಆಗಿದ್ದು, ಮೊದಲ ಪತ್ನಿ 2014ರಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು.