ಮೇಯರ್ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿ ಆಯ್ಕೆ: ದಿನೇಶ್ ಗುಂಡೂರಾವ್
ಬೆಂಗಳೂರು, ಸೆ.26: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ತಿಳಿಸಿದ್ದಾರೆ.
ಮಂಗಳವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಮೇಯರ್ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆ ಕುರಿತು ಹಿರಿಯ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ಬಿಬಿಎಂಪಿ ಕಾಂಗ್ರೆಸ್ ಸದಸ್ಯರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮೇಯರ್ ಸ್ಥಾನಕ್ಕೆ ಒಟ್ಟು ಆರು ಜನ ಆಕಾಂಕ್ಷಿಗಳಿದ್ದಾರೆ. ನನ್ನ ಹಾಗೂ ಗೃಹ ಸಚಿವ ರಾಮಲಿಂಗಾರೆಡ್ಡಿ ಬೆಂಬಲಿಗರ ನಡುವೆ ಮೇಯರ್ ಸ್ಥಾನಕ್ಕಾಗಿ ಪೈಪೋಟಿ ಇರುವುದು ನಿಜ. ಈ ವಿಚಾರದಲ್ಲಿ ಪಕ್ಷವೆ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ ಎಂದು ಹೇಳಿದರು.
ನಾಳೆ ಬೆಂಗಳೂರು ನಗರ ಶಾಸಕರು, ಸಂಸದರ ಸಭೆ ಕರೆಯಲಾಗಿದ್ದು, ಅಲ್ಲಿ ಚರ್ಚೆ ನಡೆಸಿದ ಬಳಿಕ ಮೇಯರ್ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ದಿನೇಶ್‌ಗುಂಡೂರಾವ್ ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಮೀಟರ್ ಇಲ್ಲ ಎಂದು ಮುಖ್ಯಮಂತ್ರಿ ಹೇಳಿಲ್ಲ. ಕಾರ್ಯಕ್ರಮದಲ್ಲಿದ್ದ ಜನ ಅದನ್ನು ಹೇಳಿದ್ದು. ಅದಕ್ಕೆ ಮುಖ್ಯಮಂತ್ರಿ ‘ಹೌದು ನಿಮ್ಮ ಭಾಷೆ ಪ್ರಕಾರ ಮೀಟರ್ ಇಲ್ಲ’ ಎಂದು ಹೇಳಿದ್ದಾರೆಯೆ ಹೊರತು, ಸ್ವತಃ ಅವರೆ ಅದನ್ನು ಹೇಳಿಲ್ಲ ಎಂದು ದಿನೇಶ್‌ಗುಂಡೂರಾವ್ ಸ್ಪಷ್ಟನೆ ನೀಡಿದರು.
ಸಭೆಯಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ, ಸಚಿವ ಎಂ.ಆರ್.ಸೀತಾರಾಂ, ಕೆಪಿಸಿಸಿ ಉಪಾಧ್ಯಕ್ಷ ಡಾ.ಬಿ.ಎಲ್.ಶಂಕರ್, ಶಾಸಕ ಹಾಗೂ ಬೆಂಗಳೂರು ಮಹಾನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಸ್.ಟಿ.ಸೋಮಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.