×
Ad

ಲಿಂಗಾಯತಕ್ಕೆ ಬಸವಣ್ಣನೆ ಧರ್ಮಪಿತ: ಎಸ್.ಪಿನಾಕಪಾಣಿ

Update: 2017-09-26 22:56 IST

ಬೆಂಗಳೂರು, ಸೆ.26: ವಾಮನನಾಗಿ ಭಾರತೀಯ ಸ್ವಾತಂತ್ರ ಸಂಗ್ರಾಮವನ್ನು ಪ್ರವೇಶಿಸಿ ತ್ರಿವಿಕ್ರಮನಾಗಿ ಬೆಳೆದು ಲಕ್ಷಾಂತರ ಜನರನ್ನು ಅಹಿಂಸೆ - ಸತ್ಯಾಗ್ರಹಗಳಿಂದ ಮುನ್ನಡೆಸಿ ಭಾರತಕ್ಕೆ ಸ್ವಾತಂತ್ರ ತಂದುಕೊಡುವಲ್ಲಿ ಯಶಸ್ವಿಯಾದ ಮಹಾತ್ಮ ಗಾಂಧಿಯವರು ರಾಷ್ಟ್ರಪಿತರಾದರೆ, ಪ್ರೀತಿ ವಿಶ್ವಾಸಗಳ ಮನಭರಿತ ಬದುಕಿನಿಂದ ಕಾಯಕ ದಾಸೋಹಗಳ ಮಹಾಮಂತ್ರದೊಂದಿಗೆ ಎಲ್ಲ ಜನರನ್ನು ಅಪ್ಪಿಕೊಂಡು ಒಪ್ಪಿಕೊಂಡು ಮುನ್ನಡೆಸಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ಸ್ವಾತಂತ್ರಗಳನ್ನು ತಂದುಕೊಟ್ಟ ಮಹಾತ್ಮ ಬಸವಣ್ಣನವರು ಲಿಂಗಾಯತಕ್ಕೆ ಧರ್ಮಪಿತರಾಗಿದ್ದಾರೆ ಎಂದು ವಚನ ಜ್ಯೋತಿ ಬಳಗದ ಅಧ್ಯಕ್ಷ ಎಸ್.ಪಿನಾಕಪಾಣಿ ವಿಶ್ಲೇಷಿಸಿದರು.

ಮಂಗಳವಾರ ನಗರದ ಬಸವ ಸಮಿತಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಧರ್ಮಪಿತ ಮಹಾತ್ಮ ಬಸವಣ್ಣನವರ ಕುರಿತು ಉಪನ್ಯಾಸ ನೀಡಿದ ಮಾತನಾಡಿದ ಅವರು, ನಮ್ಮಲ್ಲಿ ಶ್ರೇಷ್ಠತೆಯ ಅಹಂ ಇದೆ. ಭಾರತೀಯ ಇತಿಹಾಸದಲ್ಲಿ ಪ್ರತಿಯೊಬ್ಬ ರಾಜರು ತಾವು ಸೂರ್ಯವಂಶ, ಚಂದ್ರವಂಶ ಎಂದು ಹೇಳಿಕೊಳ್ಳುತ್ತಾರೆ. ಅದರಂತೆ ಮಹಾಮುನಿ ಅಗಸತ್ತ್ಯ, ವಿಭಿಷಣ ಹಾಗೂ ಶ್ರೀಶಂಕರಾಚಾರ್ಯರಿಗೆ ಲಿಂಗೋಪದೇಶ ಮಾಡಿದ್ದು ಕೇವಲ ಪುರಾಣವಾಗುತ್ತದೆಯೇ ಹೊರತು ಐತಿಹಾಸಿಕವಲ್ಲ ಎಂದು ಹೇಳಿದರು.

ಹರಪ್ಪ ಮೆಹೆಂಜೋದಾರದಲ್ಲಿ ಲಿಂಗಪೂಜೆಯ ಕುರುಹು ಇದೆ ಎಂದರೆ ಅದು ವೀರಶೈವದ ಪುರಾತತ್ವವಾಗುವುದಿಲ್ಲ. ಶೈವ ಧರ್ಮದ ಹಲವು ಬಿಳಲುಗಳು ಕಾಶ್ಮೀರ ಶೈವದಿಂದ ತುಳು ಶೈವದವರೆಗೆ, ಕಾಳಾಮುಖರಿಂದ ನಾಗರವರೆಗೆ ಎಲ್ಲೆಲ್ಲಿಗೋ ಹರಡಿದೆ. ತಲೆಯ ಮೇಲೆ ಧರಿಸುವುದರಿಂದ, ಭುಜದ ಮೇಲೆ ಕಟ್ಟಿಕೊಳ್ಳುವುದರಿಂದ ಅಂಗೈಯಲ್ಲಿ ಹಿಡಿಯುವವರೆಗೆ ನಾನಾ ಅವಸ್ಥೆಗಳು ಇದಕ್ಕೆ ಇವೆ. ಸಾಂಕೇತಿಕವಾದ ಉಪಾಸನೆಗೆ ಸಾಮಾಜಿಕ ಸಮತೆ, ಧಾರ್ಮಿಕ ಕಂಪು, ಆರ್ಥಿಕ ಚಿಗುರನ್ನು ನೀಡಿದ ಬಸವಣ್ಣನೇ ಲಿಂಗಾಯತದ ಧರ್ಮಪಿತ ಎಂದು ಪ್ರತಿಪಾದಿಸಿದರು.

ಎಲ್ಲ ವರ್ಗ ವರ್ಣಗಳನ್ನು ಲಿಂಗದ ನೆಲೆಯಲ್ಲಿ ಸಂಯೋಜಿಸಿ ವೃತ್ತಿಗೆ ಕಾಯಕದ ಗೌರವ ನೀಡಿ, ಅಪರಿಮಿತ ಸಂಗ್ರಹದ ವಿರುದ್ಧ ದಾಸೋಹಭಾವವನ್ನು ಬಿತ್ತಿದ ಬಸವಣ್ಣ ಕೇವಲ ಧರ್ಮಪಿತನಷ್ಟೇ ಅಲ್ಲ, ಅವನು ಕನ್ನಡ ನಾಡಿನ, ಕನ್ನಡ ಸಂಸ್ಕೃತಿಯ ತೇಜೋಪುಂಜವಾಗಿದ್ದು, ಮಹಾರಾಷ್ಟ್ರಕ್ಕೆ ಶಿವಾಜಿಯ ರೀತಿ, ರಾಜಾಸ್ಥಾನಕ್ಕೆ ರಾಣಾಪ್ರತಾಪಸಿಂಗರ ರೀತಿ, ಸಿಖ್ ಸಮುದಾಯಕ್ಕೆ ಗುರುಗೋವಿಂದಸಿಂಗರ ರೀತಿ, ಜೈನಧರ್ಮಕ್ಕೆ ಇಪ್ಪತ್ತನಾಲ್ಕನೆಯ ತೀರ್ಥಂಕರ ಮಹಾವೀರರ ರೀತಿ ಸ್ವಾಭಿಮಾನದ ಆತ್ಮಪ್ರಜ್ಞೆಯ ಕಿರಣವಾಗಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಚನಜ್ಯೋತಿ ಬಳಗದ ಕಲಾವಿದೆಯರಾದ ಮೀನಾಕ್ಷಿ ಮೇಟಿ, ಟಿ.ಎಂ. ಜಾನಕಿ, ವೀಣಾಮೂರ್ತಿ, ಚಂದ್ರಮತಿ ಗೀರೀಶ್ ವಚನಗಳನ್ನು ಹಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News