ಗೋವಾ ಕನ್ನಡಿಗರ ಮೇಲೆ ಜನಾಂಗೀಯ ದ್ವೇಷ: ಪುನರ್ ವಸತಿ ಕಲ್ಪಿಸಲು ಸಂಘರ್ಷ ಸಮಿತಿ ಒತ್ತಾಯ
ಬೆಂಗಳೂರು, ಸೆ. 26: ಗೋವಾದ ಬೈನಾ ಕಡಲು ತೀರದಲ್ಲಿದ್ದ ಕನ್ನಡಿಗರ 55 ಮನೆಗಳು ಹಾಗೂ ದೇವಾಲಯವನ್ನು ಅಲ್ಲಿನ ಸರಕಾರ ಧ್ವಂಸ ಮಾಡಿರುವುದು ಸರಿಯಲ್ಲ ಎಂದು ಕನ್ನಡ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸಿದೆ.
ಕನ್ನಡಿಗರು ಅಲ್ಲಿ ನಾಲ್ಕು ದಶಕಗಳಿಂದ ನೆಲೆಸಿ, ಗೋವಾದ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಅವರ ಶ್ರಮದಾಯಕ ಕಾರ್ಯಗಳು ಗೋವಾದ ಮೂಲ ನಿವಾಸಿಗಳಿಗೆ ನೆರವಾಗಿರುವುದಲ್ಲದೆ, ಜನರ ನೆಮ್ಮದಿಯ ಬದುಕಿಗೂ ಕಾರಣ ಆಗಿದ್ದಾರೆ.
ಯಾರಿಗೂ ತೊಂದರೆ ನೀಡದೆ, ತಮ್ಮ ಪಾಡಿಗೆ ಬದುಕನ್ನು ನಡೆಸುತ್ತಿದ್ದ ಕನ್ನಡಿಗರ ಮನೆಗಳನ್ನು ನೆಲಸಮ ಮಾಡುವ ಮೂಲಕ ಗೋವಾ ಸರಕಾರ ಜನಾಂಗೀಯ ದ್ವೇಷವನ್ನು ಕಾರುತ್ತಿದೆ. ಬೈನಾ ಕಡಲ ತಡಿಯಲ್ಲಿರುವವರು ಕನ್ನಡಿಗರು ಎಂಬ ಒಂದೇ ಕಾರಣಕ್ಕೆ ಅವರಿಗೆ ಕಿರುಕುಳ ನೀಡಿ ಒಕ್ಕಲೆಬ್ಬಿಸಲಾಗಿದೆ.
ಮಾನವೀಯತೆಯನ್ನೂ ಮರೆತು ಅವರನ್ನು ಅನಾಥರನ್ನಾಗಿ ಮಾಡಲಾಗಿದೆ. ಇದು ಮಾನವ ಹಕ್ಕಿನ ಉಲ್ಲಂಘನೆ. ಅವರ ಮನೆಗಳನ್ನು ತೆರವುಗೊಳಿಸಬೇಕಾದದ್ದು ಅನಿವಾರ್ಯ ಆಗಿದ್ದರೆ, ಅವರಿಗೆ ಬದಲಿ ನಿವೇಶನ ಕಲ್ಪಿಸಬೇಕಾಗಿತ್ತು. ನ್ಯಾಯಾಲಯವೂ ಅವರ ಪುನರ್ ವಸತಿಗೆ ಆದೇಶ ಮಾಡಬೇಕಾಗಿತ್ತು.
ಗೋವಾ ಸರಕಾರವಾದರೂ ಆ ಬಡವರ ಬದುಕಿಗೊಂದು ನೆಲೆ ಕಾಣಿಸುವ ಉದಾರತೆಯನ್ನು ಮೆರೆಯಬೇಕಾಗಿತ್ತು. ಆದರೆ ಆ ಯಾವ ಕಾರ್ಯವನ್ನೂ ಮಾಡದೆ ನಿರ್ದಯವಾಗಿ ನಡೆದುಕೊಂಡಿರುವುದು ಜನಾಂಗೀಯ ದ್ವೇಷವೆಂಬುದು ಸ್ಪಷ್ಟವಾಗುತ್ತದೆ. ಗೋವಾದಲ್ಲಿರುವ ಕನ್ನಡಿಗರು ಉತ್ತರ ಕರ್ನಾಟಕಕ್ಕೆ ಸೇರಿದವರು. ಮಹಾದಾಯಿ ಜಲ ವಿವಾದ ಇರುವುದು ಉತ್ತರ ಕರ್ನಾಟಕ ಭಾಗದಲ್ಲಿ. ಇದನ್ನು ಅರಿತಿರುವ ಗೋವಾದವರು ಕರ್ನಾಟಕದ ಮೇಲಿನ ದ್ವೇಷವನ್ನು ಕನ್ನಡಿಗರ ಮೇಲೂ ಕಾರುತ್ತಿದ್ದಾರೆ. ಇಷ್ಟೆಲ್ಲ ಆಗುತ್ತಿದ್ದರೂ ರಾಜ್ಯ ಸರಕಾರ, ಮಾನವ ಹಕ್ಕು ಆಯೋಗ ಕಣ್ಮುಚ್ಚಿ ಕುಳಿತಿರುವುದು ಕನ್ನಡಿಗರ ಹಿತದ ಬಗೆಗೆ ಕಾಳಜಿ ಇಲ್ಲದ್ದನ್ನು ಎತ್ತಿ ತೋರಿಸುತ್ತದೆ. ರಾಜ್ಯ ಪ್ರತಿನಿಧಿಸುವ ಲೋಕಸಭಾ ಸದಸ್ಯರು ಈ ಸಮಸ್ಯೆ ನಮ್ಮದಲ್ಲ ಎಂದು ಮುಗುಮ್ಮಾಗಿದ್ದಾರೆ.
ದಶಕಗಳಿಂದ ಕನ್ನಡಿಗರ ಮೇಲೆ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದ್ದರೂ ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಕನ್ನಡಿಗರಿಗೆ ನ್ಯಾಯ ಒದಗಿಸುವ ಕಾರ್ಯ ಮಾಡಲು ಮುಂದಾಗದ ಜನಪ್ರತಿನಿಧಿಗಳಿಗೆ ಧಿಕ್ಕಾರ ಹೇಳಬೇಕಾಗಿದೆ. ಆಡಳಿತ ಎಂದರೆ ಕೇವಲ ಕಲ್ಲು ಕಟ್ಟಡ, ಕಾಗದದ ಫೈಲುಗಳಷ್ಟೇ ಅಲ್ಲ. ಜೀವಂತ ಮನುಷ್ಯರಿಗೆ ಅನುಕೂಲ ಮಾಡಿಕೊಡುವುದು.
ಕನ್ನಡ ಭಾಷಿಕ ಜನಾಂಗದ ಹಿತ ಕಾಯುವುದು ಎಂಬ ಪ್ರಜ್ಞೆ ರಾಜ್ಯ ಸರಕಾರಕ್ಕೆ ಇರಬೇಕಾಗಿದೆ. ನಮ್ಮನ್ನು ಪ್ರತಿನಿಧಿಸುವವರಿಗೆ ಇರಬೇಕಾಗಿದೆ. ಈಗಲಾದರೂ ಗೋವಾದಲ್ಲಿ ನೆಲೆ ಕಳೆದುಕೊಂಡಿರುವ ಕನ್ನಡಿಗರ ಹಿತ ಕಾಯಲು ಸರಕಾರ ಮುಂದಾಗಬೇಕು. ಕೇಂದ್ರ ಸರಕಾರವೂ ಗೋವಾ ಸರಕಾರದ ಮೇಲೆ ಒತ್ತಡ ತಂದು, ಮನೆ ಕಳೆದುಕೊಂಡಿರುವ ಕನ್ನಡಿಗರ ಪುನರ್ವಸತಿಗೆ ತಕ್ಷಣ ಕ್ರಮ ಕೈಗೊಂಡು ಕನ್ನಡಿಗರನ್ನು ರಕ್ಷಿಸಬೇಕು ಎಂದು ಸಮಿತಿ ಅಧ್ಯಕ್ಷ ಡಾ.ಕೋ.ವೆಂ.ರಾಮಕೃಷ್ಣೇಗೌಡ ಆಗ್ರಹಿಸಿದ್ದಾರೆ.