ಅಜ್ಮಾನ್‌ನ ತುಂಬೆ ಆಸ್ಪತ್ರೆಯಲ್ಲಿ ಯಶಸ್ವಿ ‘ಜಾಗೃತ ಮಿದುಳು ಶಸ್ತ್ರಚಿಕಿತ್ಸೆ’

Update: 2017-09-26 18:39 GMT
ಸೈಯದ್ ಖುರ್ಷೆದ್ ಆಲಂ

ಅಜ್ಮಾನ್(ಯುಎಇ), ಸೆ.26: ಇಲ್ಲಿಯ ತುಂಬೆ ಆಸ್ಪತ್ರೆಯಲ್ಲಿ ಬಾಂಗ್ಲಾದೇಶದ ಪ್ರಜೆ ಸೈಯದ್ ಖುರ್ಷೆದ್ ಆಲಂ(50) ಎಂಬವರಿಗೆ ‘ಜಾಗ್ರತ ಮಿದುಳು ಶಸ್ತ್ರಚಿಕಿತ್ಸೆ’ಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ವಿಶೇಷವೆಂದರೆ ವೈದ್ಯರು ಸೈಯದ್‌ನ ಮಿದುಳಿನಲ್ಲಿ ಬೆಳೆದಿದ್ದ ಟೆನಿಸ್ ಚೆಂಡಿನ ಗಾತ್ರದ ಗಡ್ಡೆಯನ್ನು ತೆಗೆಯುವಲ್ಲಿ ನಿರತರಾಗಿದ್ದರೆ ಅವರು ಮಾತ್ರ ಶಸ್ತ್ರಚಿಕಿತ್ಸೆಯುದ್ದಕ್ಕೂ ಅವರೊಂದಿಗೆ ಮಾತನಾಡುತ್ತಲೇ, ಹಾಡುತ್ತಲೇ ಇದ್ದರು. ‘ಜಾಗೃತ ಮಿದುಳು ಶಸ್ತ್ರಚಿಕಿತ್ಸೆ’ಯಲ್ಲಿ ರೋಗಿಯು ಎಚ್ಚರವಾಗಿದ್ದುಕೊಂಡು ಸಹಕರಿಸುವುದು ಅಗತ್ಯವಾಗಿದ್ದು, ವೈದ್ಯರು ರೋಗಿಗೆಪ್ರಶ್ನೆಗಳನ್ನು ಕೇಳುತ್ತ ರೋಗಿ ಉತ್ತರಿಸುವಾಗ ಮಾನಿಟರ್‌ನಲ್ಲಿ ರೋಗಿಯ ಮಿದುಳಿನ ಚಟುವಟಿಕೆಗಳ ಮೇಲೆ ನಿಗಾ ಇರಿಸುತ್ತಾರೆ.

ಜುಲೈಯಿಂದ ಸೈಯದ್ ಬಲಗೈ ಮತ್ತು ಬಲಗಾಲಿನಲ್ಲಿ ನಿಶ್ಶಕ್ತಿಯಿಂದ ಬಳಲುತ್ತಿದ್ದರು. ಆಗಸ್ಟ್‌ನಲ್ಲಿ ಅವರ ಬಲಗಾಲಿನಲ್ಲಿ ತೀವ್ರ ಸೆಳತ ಉಂಟಾಗಿತ್ತು.ಬಳಿಕ ನಡೆಯಲಾಗದ ಸ್ಥಿತಿ ತಲುಪಿದ್ದ ಅವರು ಗಾಲಿಕುರ್ಚಿಗೆ ಅಂಟಿಕೊಂಡಿ ದ್ದರು. ಈ ಹಿನ್ನೆಲೆಯಲ್ಲಿ ಅಜ್ಮಾನ್‌ನ ತುಂಬೆ ಆಸ್ಪತ್ರೆಗೆ ದಾಖಲಾದ ಅವರನ್ನು ವೈದ್ಯರು ತೀವ್ರ ತಪಾಸಣೆಗೊಳಪಡಿಸಿದಾಗ ಶರೀರದ ಬಲಭಾಗದ, ನಿರ್ದಿಷ್ಟವಾಗಿ ಕಾಲಿನ ಚಲನವಲನವನ್ನು ನಿಯಂತ್ರಿಸುವ ಮಿದುಳಿನ ಎಡಭಾಗದಲ್ಲಿ ಟೆನಿಸ್ ಚೆಂಡಿನ ಗಾತ್ರದ ಗಡ್ಡೆ ಬೆಳೆದಿರುವುದು ಪತ್ತೆಯಾಗಿತ್ತು. ಈ ಗಡ್ಡೆಯನ್ನು ಬೇರ್ಪಡಿಸಲು ಆಸ್ಪತ್ರೆಯ ನ್ಯೂರೋಸರ್ಜರಿ ವಿಭಾಗದ ಮುಖ್ಯಸ್ಥ ಡಾ.ಈಶ್ವರಚಂದ್ರ ಪ್ರೇಮಸಾಗರ್ ನೇತೃತ್ವದ ವೈದ್ಯರ ತಂಡವು ಸೈಯದ್‌ಗೆ ‘ಜಾಗ್ರತ ಮಿದುಳು ಶಸ್ತ್ರಚಿಕಿತ್ಸೆ’ ನಡೆಸಲು ನಿರ್ಧರಿಸಿತ್ತು.

                  (ಡಾ.ಈಶ್ವರಚಂದ್ರ ಪ್ರೇಮಸಾಗರ್)

ಈ ಶಸ್ತ್ರಚಿಕಿತ್ಸೆಯ ವೇಳೆ ರೋಗಿಯು ಎಚ್ಚರವಾಗಿದ್ದು, ವೈದ್ಯರೊಂದಿಗೆ ಮಾತನಾಡುತ್ತ, ಹಾಡುತ್ತ ಮತ್ತು ತನ್ನ ಕೈಕಾಲುಗಳನ್ನು ಆಡಿಸುತ್ತಲೇ ಇರುವಂತೆ ನೋಡಿಕೊಳ್ಳುವುದು ಅನಿವಾರ್ಯ. ಶಸ್ತ್ರಚಿಕಿತ್ಸೆಯು ರೋಗಿಯ ನಿಶ್ಶಕ್ತಿಯನ್ನು ಇನ್ನಷ್ಟು ಹೆಚ್ಚಿಸುತ್ತಿಲ್ಲ ಮತ್ತು ಯಾವುದೇ ವಾಕ್ ಸಮಸ್ಯೆಯಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ನರ ಅರಿವಳಿಕೆ ತಜ್ಞ ಡಾ.ವಿನಯ್ ಸೈಯದ್‌ರನ್ನು ಚಟುವಟಿಕೆಯಿಂದರಲು ಪ್ರೋತ್ಸಾಹಿಸುತ್ತಿದ್ದರು.

ಈ ಮಾದರಿಯ ಶಸ್ತ್ರಚಿಕಿತ್ಸೆಯ ಲಾಭವೆಂದರೆ ವೈದ್ಯರು ಪ್ರಕ್ರಿಯೆಯುದ್ದಕ್ಕೂ ರೋಗಿಯಲ್ಲಿನ ಪ್ರಗತಿಯ ಮೇಲೆ ನಿಗಾ ಇರಿಸಬಹುದಾಗಿದೆ ಎಂದು ಡಾ.ಈಶ್ವರಚಂದ್ರ ತಿಳಿಸಿದರು.ರೋಗಿಗೆ ಸ್ಥಳೀಯ ಅರಿವಳಿಕೆಯ ಮೂಲಕ ಗಡ್ಡೆಯ ಮೇಲಿದ್ದ ತಲೆಬುರುಡೆಯ ಮೂಳೆಯನ್ನು ಕ್ರಾನಿಯೊಟಮಿ ಮೂಲಕ ತೆಗೆಯಲಾಗಿತ್ತು. ಸಿಯುಎಸ್‌ಎ ಎಂಬ ವಿಶೇಷ ಯಂತ್ರದ ಮೂಲಕ ಗಡ್ಡೆಯನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ತೆಗೆಯಲಾಗಿದೆ. ಇದೀಗ ರೋಗಿಯುಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಅವರನ್ನ್ನು ಆಸ್ಪತ್ರೆಯಿಂದ ಬಿಡುಗಡೆ ಗೊಳಿಸಲಾಗಿದೆ.

ಅಪಾರ ಅನುಭವದ ತಜ್ಞ ವೈದ್ಯರ ನೇತೃತ್ವದಲ್ಲಿ ತುಂಬೆ ಆಸ್ಪತ್ರೆಯ ನ್ಯೂರೋಸರ್ಜರಿ ವಿಭಾಗವು ಎಲ್ಲ ಬಗೆಯ ನರ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಸುಸಜ್ಜಿತವಾಗಿದೆ. ಎಂಡೋಸ್ಕೋಪಿಕ್ ಲಂಬರ್ ಸ್ಪೈನ್ ಮತ್ತು ಎಂಡೋಸ್ಕೋಪಿಕ್ ಸರ್ವಿಕಲ್ ಸ್ಪೈನ್ ಸರ್ಜರಿಗಳು ಸೇರಿದಂತೆ ಕನಿಷ್ಠ ಛೇದನದ ಶಸ್ತ್ರಚಿಕಿತೆಗಳನ್ನು ನಡೆಸುವಲ್ಲಿ ಸಿದ್ಧಹಸ್ತವಾಗಿದೆ. ಶರೀರದಲ್ಲಿ ಸಣ್ಣ ಛೇದನವೊಂದನ್ನು ಮಾಡುವ ಮೂಲಕ ನಡೆಸಲಾಗುವ ಈ ಶಸ್ತ್ರಚಿಕಿತ್ಸೆಗಳು ಕೇವಲ 40 ನಿಮಿಷಗಳಿಂದ ಒಂದು ಗಂಟೆಯ ಅವಧಿಯೊಳಗೆ ಮುಗಿಯುತ್ತವೆ ಮತ್ತು ರೋಗಿಯು ಮರುದಿನವೇ ಆಸ್ಪತ್ರೆಯಿಂದ ಬಿಡುಗಡೆಗೊಳ್ಳ ಬಹುದಾಗಿದೆ ಎಂದು ಆಸ್ಪತ್ರೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News