ಸೌದಿ ಅರೇಬಿಯಾ: ಮಹಿಳೆಯರು ವಾಹನ ಚಲಾಯಿಸಲು ಅನುಮತಿ

Update: 2017-09-27 06:22 GMT
ಸಾಂದರ್ಭಿಕ ಚಿತ್ರ

ರಿಯಾದ್, ಸೆ.27: ಮಹತ್ವದ ಬೆಳವಣಿಗೆಯೊಂದರಲ್ಲಿ ಸೌದಿ ಅರೇಬಿಯಾದ ಆಡಳಿತವು ಅಲ್ಲಿನ ಮಹಿಳೆಯರಿಗೂ ವಾಹನ ಚಲಾಯಿಸುವ ಅನುಮತಿ ನೀಡಿದೆ. ಮಂಗಳವಾರ ರಾತ್ರಿ ಈ ನಿಟ್ಟಿನ ರಾಜಾಜ್ಞೆಗೆ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ ಸಹಿ ಹಾಕಿದ್ದಾರೆ. ಅಗತ್ಯವಿರುವ ಮಹಿಳೆಯರಿಗೆ ಚಾಲನಾ ಪರವಾನಿಗೆ ನೀಡಬೇಕೆಂದು ಆಜ್ಞೆಯಲ್ಲಿ ತಿಳಿಸಲಾಗಿದೆ.

ಈ ಹೊಸ ಆದೇಶವನ್ನು ಜಾರಿಗೊಳಿಸುವ ವಿಧಾನದ ಕುರಿತು ನಿರ್ಧರಿಸಲು ಸಮಿತಿಯೊಂದನ್ನು ಅಲ್ಲಿನ ಆಡಳಿತ ರಚಿಸಲಿದೆ. ಈ ಹೊಸ ಬೆಳವಣಿಗೆಯು ಕಳೆದ ಹಲವಾರು ವರ್ಷಗಳಿಂದ ಮಹಿಳೆಯರ ವಾಹನ ಚಲಾವಣೆ ಹಕ್ಕಿಗಾಗಿ ಹೋರಾಡುತ್ತಿದ್ದ ಮಾನವ ಹಕ್ಕುಗಳ ಸಂಘಟನೆಗಳಿಗೆ ಸಂತಸ ತಂದಿದೆ.

ಈ ಹಿಂದೆ ಮಹಿಳೆಯರಿಗೆ ವಾಹನ ಚಲಾಯಿಸುವ ಅವಕಾಶವಿಲ್ಲದೇ ಇರುವಾಗ ಆದೇಶವನ್ನು ಉಲ್ಲಂಘಿಸಿ ವಾಹನ ಚಲಾಯಿಸಿದ್ದ ಹಲವು ಮಹಿಳೆಯರಿಗೆ ಜೈಲು ಶಿಕ್ಷೆಯಾಗಿತ್ತು. ಕಳೆದ ತಿಂಗಳಷ್ಟೇ ಸೌದಿಯ ಪೊಲೀಸರು ಅರಬ್ ಮಹಿಳೆಯೊಬ್ಬಳನ್ನು ಬಂಧಿಸಿದ್ದರು. ಆಕೆ ಪೂರ್ವ ಪ್ರಾಂತ್ಯದಲ್ಲಿ ಕಾರೊಂದನ್ನು ಚಲಾಯಿಸುವ ವೀಡಿಯೋ ನೋಡಿ ಈ ಕ್ರಮ ಕೈಗೊಳ್ಳಲಾಗಿತ್ತು.

ಸೌದಿ ಬಿಲಿಯಾಧಿಪತಿ ರಾಜಕುಮಾರ ಅಲ್ ವಲೀದ್ ಬಿನ್ ತಲಾಲ್ ಅವರು 2013ರಲ್ಲಿ ಮಹಿಳೆಯರ ಪರ ಟ್ವೀಟ್ ಮಾಡಿದ್ದೇ ಸೌದಿ ಮಹಿಳೆಯರಿಗೆ ವಾಹನ ಚಲಾಯಿಸಲು ಅನುಮತಿ ನೀಡಬೇಕೇ ಅಥವಾ ಬೇಡವೇ ಎಂಬ ಚರ್ಚೆಗೆ ನಾಂದಿಯಾಗಿತ್ತು.

‘‘ಮಹಿಳೆಯರಿಗೆ ವಾಹನ ಚಲಾಯಿಸಲು ಅನುಮತಿಸಿದ್ದೇ ಆದಲ್ಲಿ ವಿದೇಶಿ ಚಾಲಕರು ಹೊಂದಿದ್ದ ಕನಿಷ್ಠ 5 ಲಕ್ಷ ಉದ್ಯೋಗಗಳನ್ನು ಉಳಿತಾಯ ಮಾಡಬಹುದು ಎಂದೂ ಅವರು ಟ್ವೀಟ್ ಮಾಡಿದ್ದರು.

ಸೌದಿ ಅರೇಬಿಯಾದ ನಿರ್ಧಾರವನ್ನು ಅಮೆರಿಕ ಸ್ವಾಗಿಸಿದೆಯಲ್ಲದೆ, ಇದೊಂದು ಸರಿಯಾದ ದಿಕ್ಕಿನಲ್ಲಿ ದೊಡ್ಡ ಕ್ರಮವೆಂದು ಬಣ್ಣಿಸಿದೆ. ಹೊಸ ನಿರ್ಧಾರದಂತೆ ಗಲ್ಫ್ ಸಹಕಾರ ಮಂಡಳಿಯ ಯಾವುದೇ ರಾಷ್ಟ್ರಗಳಿಂದ ಚಾಲನಾ ಪರವಾನಿಗೆ ಪಡೆದ ಮಹಿಳೆಯರು ಸೌದಿ ಅರೇಬಿಯಾದಲ್ಲಿ ವಾಹನ ಚಲಾಯಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News